janadhvani

Kannada Online News Paper

ವಖ್ಫ್ ಬೋರ್ಡ್ ಯಾವುದೇ ರಾಜಕೀಯ ಪಕ್ಷದ ಬಿಟ್ಟಿ ಭಿಕ್ಷೆಯಲ್ಲ: ಶಾಫಿ ಸ‌ಅದಿ

ರಾಜ್ಯ ವಖ್ಫ್ ಬೋರ್ಡ್ ಎನ್ನುವುದು ಯಾವುದೇ ರಾಜಕೀಯ ಪಕ್ಷದ ಬಿಟ್ಟಿ ಬಿಕ್ಷೆಯಲ್ಲ. ಅದು ಈ ರಾಜ್ಯದ ಎಲ್ಲ ಮುಸ್ಲಿಮರ ಆಸ್ತಿಯಾಗಿದೆ. ಆದುದರಿಂದ ಯಾವುದೇ ಸಂದರ್ಭ ವಖ್ಫ್ ಇಲಾಖೆಯ ಎಲ್ಲಾ ಕಾರ್ಯಚಟುವಟಿಕೆಗಳೊಂದಿಗೆ ಮುಸ್ಲಿಮರು ಸದಾ ಇರಬೇಕು.

ಸಾವಿರಾರು ಕೋಟಿ ರೂ ಮೌಲ್ಯದ ಆಸ್ತಿಯ ಒಡೆತನ ಹೊಂದಿರುವ ಸ್ವಾಯತ್ತ ಸಂಸ್ಥೆಯಾಗಿದೆ ವಖ್ಫ್ ಬೋರ್ಡ್. ರಾಜ್ಯದ ವಖ್ಫ್ ಮಂಡಳಿಯನ್ನು ದೇಶದಲ್ಲೇ ಮಾದರಿ ವಖ್ಫ್ ಮಂಡಳಿಯನ್ನಾಗಿ ಮಾಡುವ ಇರಾದೆ ರಾಜ್ಯ ವಖ್ಫ್ ಮಂಡಳಿಗಿದ್ದು; ಮುಸ್ಲಿಮ್ ಸಮುದಾಯ ಇದಕ್ಕೆ ಕೈ ಜೋಡಿಸಬೇಕು.
ವಖ್ಫ್ ಮಂಡಳಿಯ ಎಲ್ಲಾ ಆಸ್ತಿಗಳು ಮುಸ್ಲಿಮ್ ಸಮುದಾಯದ ಶ್ರೇಯಾಭಿವೃದ್ಧಿಗಾಗಿ ವಿನಿಯೋಗ ಆಗಬೇಕಾಗಿದೆ.

ಆ ನಿಟ್ಟಿನಲ್ಲಿ ರಾಜ್ಯ ವಖ್ಫ್ ಮಂಡಳಿಯ ಎಲ್ಲ ಸದಸ್ಯರು( ನಿರ್ದೇಶಕರು) ಒಟ್ಟಾಗಿ ಕಾರ್ಯಾಚರಿಸಲಿದ್ದಾರೆ. ವಖ್ಫ್ ಮಂಡಳಿಯೊಳಗೆ ಪಕ್ಷಾಧಾರಿತ ಭಿನ್ನಾಭಿಪ್ರಾಯಗಳಿಲ್ಲ.

ವಖ್ಫ್ ಕಾಯ್ದೆ ಪ್ರಕಾರ ರಾಜ್ಯ ಸಮಿತಿಗೆ ಆರು ಮಂದಿ ನಿರ್ದೇಶಕರನ್ನು ವಿವಿಧ ಕ್ಷೇತ್ರಗಳಿಂದ ಚುನಾವಣೆ ಮೂಲಕ ಆರಿಸಿ ಬರುತ್ತಾರೆ‌. ನಾಲ್ಕು ಮಂದಿಯನ್ನು ವಿವಿಧ ಕ್ಷೇತ್ರಗಳಿಂದ ಸರಕಾರ ನಾಮನಿರ್ದೇಶನ ಮಾಡುತ್ತದೆ. ಮಂಡಳಿಯ ಅಧ್ಯಕ್ಷತೆಗೆ ಆಂತರಿಕ ಚುನಾವಣೆ ನಡೆಯುತ್ತದೆ.

ಆಯಾ ಕಾಲಕ್ಕೆ ಅದರ ಪ್ರಕ್ರಿಯೆಗಳು ಅದರದೇ ದಿಕ್ಕಿನಲ್ಲಿ ನಡೆಯುತ್ತಿರುತ್ತದೆ. ಅದಕ್ಕೆ ಯಾವುದೇ ರಾಜಕೀಯ ಬಣ್ಣ ಕೊಡಬೇಕಾಗಿಲ್ಲ. ವಖ್ಫ್ ಮೂಲಕ ಸಿಗುವ ಎಲ್ಲಾ ಸೌಲಭ್ಯಗಳನ್ನು ಮುಸ್ಲಿಮ್ ಸಮುದಾಯ ಸದುಪಯೋಗಪಡಿಸುವತ್ತ ಗಮನ ಹರಿಸಬೇಕಾಗಿದೆ.

ಈಗಾಗಲೇ ಮಸೀದಿಗಳ ಇಮಾಮ್ -ಮುಅದ್ಸಿನ್ ಗಳಿಗೆ ಗೌರವಧನ ನೀಡಲಾಗುತ್ತಿದ್ದು; ಅದನ್ನು ಮದ್ರಸ ಅಧ್ಯಾಪಕರುಗಳಿಗೂ ವಿಸ್ತರಿಸುವ ಬಗ್ಗೆ ಯೋಚಿಸಲಾಗುತ್ತಿದೆ. ವಖ್ಫ್ ಆಸ್ತಿಗಳ ಆನ್ಲೈನ್ ನೋಂದಣಿ ಹಾಗೂ ದಾಖಲೆಗಳ ಕಂಪ್ಯೂಟರೀಕರಣ ಪ್ರಕ್ರಿಯೆ ಆರಂಭಿಸಲಾಗಿದ್ದು; ಶೀಘ್ರವೇ ಪ್ರಕ್ರಿಯೆ ಮುಕ್ತಾಯವಾಗಲಿದೆ.

ವಖ್ಫ್ ನೋಂದಣಿಯಾಗದ ಸಂಸ್ಥೆಗಳನ್ನು ಸಂಬಂಧಪಟ್ಟವರು ಆದಷ್ಟು ಬೇಗ ನೋಂದಣಿ ಮಾಡುವ ಮೂಲಕ ರಾಜ್ಯ ವಖ್ಫ್ ಮಂಡಳಿಯೊಂದಿಗೆ ಸಹಕರಿಸಬೇಕು.
ವಖ್ಫ್ ನ ಯಾವುದೇ ಯೋಜನೆಯಡಿ ಸವಲತ್ತು ಪಡೆಯಬಯಸುವವರು ಯಾವುದೇ ರಾಜಕೀಯ ಪ್ರೇರಿತ ಮಧ್ಯವರ್ತಿಗಳನ್ನು ಆಶ್ರಯಿಸದೇ ನೇರವಾಗಿ ವಖ್ಫ್ ಮಂಡಳಿಯನ್ನು ಸಂಪರ್ಕಿಸಿ ಪಡೆಯುವಂತಾಗಬೇಕು‌.‌

ವಖ್ಫ್ ಮಂಡಳಿಯು ಮುಸ್ಲಿಮ್ ಸಮುದಾಯದ ಆಸ್ತಿಯಾಗಿರುವುದರಿಂದ ಯಾವುದೇ ಅದರ ಗುತ್ತಿಗೆಯನ್ನು ವಹಿಸಲು ಯಾವುದೇ ರಾಜಕೀಯ ಪಕ್ಷಕ್ಕೆ ಅವಕಾಶ ಉಂಟಾಗಬಾರದು. ಆ ಕುರಿತು ಎಲ್ಲಾ ಮೊಹಲ್ಲಾ ಆಡಳಿತ ಸಮಿತಿಗಳು, ಮುಸ್ಲಿಮ್ ಸಮುದಾಯದ ಎಲ್ಲ ಸಂಘಟನೆಗಳು ಮುತುವರ್ಜಿ ವಹಿಸಿದರೆ ಇದು ಸಾಧ್ಯವಾಗಬಹುದು.

ವಖ್ಫ್ ಆಸ್ತಿಗಳು ದುರ್ಬಳಕೆಯಾಗದಂತೆ ತಡೆಯಲು ಯುವತಲೆಮಾರು ಮುಂದೆ ಬರಬೇಕು. ಸೋಷಿಯಲ್ ಮೀಡಿಯಾದ ಯುವ ಬರಹಗಾರರು ಕೂಡ ಸಕ್ರಿಯರಾಗಿ ವಖ್ಫ್ ಆಸ್ತಿಯ ಸದ್ಬಳಕೆಯ ವಿಚಾರದಲ್ಲಿ ಕಾವಲಾಳುಗಳಾಗಿ ಕಾರ್ಯಪ್ರವೃತ್ತರಾಗಬೇಕು. ಸಮುದಾಯದ ಆಸ್ತಿಯ ದುರ್ಬಳಕೆಯಾಗದಂತೆ ತಡೆಯಲು ಯುವಶಕ್ತಿಯು ಸದಾ ಎಚ್ಚರದಲ್ಲಿರಲಿ ಎಂದು ಶಾಫಿ ಸಅದಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com