janadhvani

Kannada Online News Paper

ಪಾಸ್‌ಪೋರ್ಟ್ ಮತ್ತು ಗುರುತಿನ ದಾಖಲೆಗಳಿಲ್ಲದೆ ಯಾತ್ರಾ ಕ್ರಮಗಳು ಪೂರ್ಣ

ದುಬೈ: ಜಿಡಿಆರ್‌ಎಫ್‌ಎ (ದುಬೈ ಎಮಿಗ್ರೇಷನ್) ಮತ್ತು ಎಮಿರೇಟ್ಸ್ ಏರ್ ಲೈನ್ಸ್ ಸಂಯುಕ್ತವಾಗಿ ಪಾಸ್‌ಪೋರ್ಟ್ ಅಥವಾ ಇತರ ಗುರುತಿನ ದಾಖಲೆಗಳಿಲ್ಲದೆ ಪ್ರಯಾಣಿಕರ ಮುಖ ಚಹರೆಗಳ ಆಧಾರದಲ್ಲಿ ಯಾತ್ರಾ ಕ್ರಮಗಳನ್ನು ಪೂರ್ಣಗೊಳಿಸುವ ಯೋಜನೆಯನ್ನು ಜಾರಿಗೆ ತರಲು ಯೋಜಿಸಿದೆ.

ಉದ್ದೇಶಿತ ಬಯೋಮೆಟ್ರಿಕ್ ತಂತ್ರಜ್ಞಾನ ಯೋಜನೆ ಶೀಘ್ರದಲ್ಲೇ ದುಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾರಿಗೆ ತರಲಾಗುವುದು. ವಿಶ್ವ ವ್ಯಾಪಾರ ಕೇಂದ್ರದಲ್ಲಿ ನಡೆದ 39 ನೇ ಜಿಟೆಕ್ಸ್ ತಾಂತ್ರಿಕ ಮೇಳದಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಲಾಯಿತು.

ಬಯೋಮೆಟ್ರಿಕ್ ಪ್ರಯಾಣಕ್ಕೆ ಪಾಸ್‌ಪೋರ್ಟ್ ಮಾತ್ರವಲ್ಲದೆ ಬೋರ್ಡಿಂಗ್ ಪಾಸ್ ಕೂಡ ಅವಶ್ಯವಿಲ್ಲ. ಆದರೆ ಮೊದಲ ಪ್ರವಾಸದಲ್ಲಿ, ಎಲ್ಲಾ ದಾಖಲೆಗಳನ್ನು ವ್ಯವಸ್ಥೆಯಲ್ಲಿ ನೋಂದಾಯಿಸಬೇಕಾಗುತ್ತದೆ. ಮುಂದಿನ ಪ್ರವಾಸಗಳಿಗೆ ನೋಂದಣಿ ಅಗತ್ಯವಿಲ್ಲ. ಬಯೋಮೆಟ್ರಿಕ್ ತಂತ್ರಜ್ಞಾನದಿಂದ ಅವಳಿ ಮಕ್ಕಳನ್ನು ಸಹ ಪ್ರತ್ಯೇಕಿಸಲು ಅತ್ಯಾಧುನಿಕ ಸಾಫ್ಟ್‌ವೇರ್ ಮೂಲಕ ಸಾಧ್ಯವಾಗಿಸುತ್ತದೆ.

ಟಿಕೆಟ್ ಚೆಕಿಂಗ್ ಕೌಂಟರ್ ಮುಂದೆ ಜೋಡಿಸಲಾದ ಕ್ಯಾಮೆರಾವನ್ನು ನೋಡುವುದು ಮೊದಲ ಹಂತವಾಗಿದ್ದು, ನಂತರ, ಎಮಿಗ್ರೇಷನ್ ಪ್ರಕ್ರಿಯೆಗಾಗಿ ಗೇಟ್‌ನಲ್ಲಿ ಸ್ಥಾಪಿಸಿದ ಕ್ಯಾಮೆರಾದಲ್ಲಿ ಮುಖ ತೋರಿಸಿದರೆ ಪರಸ್ಪರ ಹೊಂದಾಣಿಕೆ ಆದಲ್ಲಿ, ಮುಂದಿನ ಹಂತದ ಗೇಟ್‌ಗಳು ತೆರೆಯಲಿದೆ. ಹೀಗೆ ವಿಮಾನ ಹತ್ತುವ ಪ್ರತೀ ಪ್ರಕ್ರಿಯೆಗಳನ್ನು ಸೆಕೆಂಡುಗಳಲ್ಲಿ ಪೂರ್ಣಗೊಳಿಸಬಹುದು.

ಬಯೋಮೆಟ್ರಿಕ್ ಸೌಲಭ್ಯದ ಮೊದಲ ಹಂತವನ್ನು ಎಮಿರೇಟ್ಸ್ ವಿಮಾನದ ವ್ಯಾಪಾರ ಮತ್ತು ಪ್ರಥಮ ದರ್ಜೆ ಪ್ರಯಾಣಿಕರಿಗೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಪ್ರಯಾಣದ ದಾಖಲೆಗಳು ಅಗತ್ಯವಿಲ್ಲದಿದ್ದರೂ, ಪ್ರಯಾಣಿಕರು ತಮ್ಮ ಎಲ್ಲಾ ದಾಖಲೆಗಳನ್ನು ಇರಿಸಿಕೊಳ್ಳುವಂತೆ ಸೂಚಿಸಲಾಗಿದೆ. ದುಬೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಆ್ಯಂಡ್ ಎಕ್ಸಿಬಿಷನ್ ಸೆಂಟರ್‌ನ ಶೈಖ್ ಸಯೀದ್ ಹಾಲ್‌ನ (ಎಸ್ 1-ಎ 1) ಪ್ರದೇಶದಲ್ಲಿ ಜಿಡಿಅರ್‌ಎಫ್‌ಎ ಪೆವಿಲಿಯನ್ ಇದೆ ಎಂದು ಮೂಲಗಳು ತಿಳಿಸಿವೆ.

error: Content is protected !! Not allowed copy content from janadhvani.com