ಎಚ್ಚರಿಕೆ: ‘ಫೇಸ್ ಆ್ಯಪ್’ ಇದು ಭಾರೀ ಅಪಾಯಕಾರಿ

ನವದೆಹಲಿ: ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗಿರುವ ಆ್ಯಪ್ ಅಂದ್ರೆ ಅದು ಫೇಸ್ ಆ್ಯಪ್. ತಾವು ವಯಸ್ಸಾದ ಮೇಲೆ ಹೇಗೆ ಕಾಣ್ತೀವಿ ಅನ್ನೋ ಕುತೂಹಲ ಹಲವರಿಗಿರತ್ತೆ. ಅಂಥವ್ರು ಈ ಆ್ಯಪ್ ಡೌನ್‌ಲೋಡ್ ಮಾಡಿ, ತಮ್ಮ ಫೋಟೋ ಹಾಕಿ, ತಾವು 50 ವರ್ಷದ ನಂತರ ಹೇಗೆ ಕಾಣ್ತೀವಿ ಅಂತಾ ನೋಡ್ತಾರೆ. ಆದ್ರೆ ಈ ಆ್ಯಪ್ ಡೇಂಜರಸ್ ಅನ್ನೋ ಮಾತು ಕೇಳಿಬಂದಿದೆ.

2050ರಲ್ಲಿ ನೀವು ಹೇಗಿರ್ತಿರಾ ಅಂತಾ ತೋರಿಸೋ ಈ ಆ್ಯಪ್‌ನಾ ಬಳಸಿ ತೆಗೆದ ಫೋಟೋವನ್ನ, ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂನಲ್ಲಿ ಹಾಕ್ತಾರೆ. ಆದ್ರೆ ನೀವು ಈ ಆ್ಯಪ್ ಡೌನ್‌ಲೋಡ್ ಮಾಡೋ ಮುನ್ನ ಇದನ್ನು ಗಮನಿಸಿ.

ಫೇಸ್ ಆ್ಯಪ್ ನಲ್ಲಿರುವ ನಿಯಮಗಳು ಮತ್ತು ಷರತ್ತುಗಳನ್ನು ಓದಿದರೆ ಬಳಕೆದಾರರು ಬೆಚ್ಚಿ ಬೀಳುವುದು ಖಚಿತ.

ಫೇಸ್ ಆ್ಯಪ್ ನಲ್ಲಿರುವ ನಿಯಮಗಳು ಮತ್ತು ಷರತ್ತುಗಳಲ್ಲಿ ಕೆಲ ಅಪಾಯಕಾರಿ ಅಂಶಗಳ ಬಗ್ಗೆ ಟ್ವಿಟರಿಗರು ಧ್ವನಿಯೆತ್ತಿದ್ದಾರೆ. ಇದರಲ್ಲಿರುವ ಪ್ರಮುಖ ಷರತ್ತೆಂದರೆ, ಫೇಸ್ ಆ್ಯಪ್ ತನ್ನ ಬಳಕೆದಾರರ ಫೋಟೊಗಳನ್ನು, ಎಡಿಟೆಡ್ ಫೋಟೊಗಳನ್ನು ಯಾವುದೇ ವಾಣಿಜ್ಯಿಕ ಉದ್ದೇಶಗಳಿಗಾಗಿ, ಜಗತ್ತಿನಲ್ಲಿ ಯಾವ ಜಾಗದಲ್ಲೂ ಬಳಸಿಕೊಳ್ಳಬಹುದು.

ನಿಯಮಗಳಲ್ಲಿರುವಂತೆ ನೀವು ನಿಮ್ಮ ಫೋಟೊಗಳನ್ನು ಒಂದು ಬಾರಿ ಎಡಿಟ್ ಮಾಡಿದರೆ ಅದನ್ನು ಕಂಪೆನಿಯು ತನ್ನ ಪ್ರಚಾರಕ್ಕಾಗಿ ಜಗತ್ತಿನ ಯಾವ ಮೂಲೆಯಲ್ಲೂ ಬಳಸಿಕೊಳ್ಳಬಹುದು. ಇದಕ್ಕಾಗಿ ಅದು ನಿಮ್ಮ ಅನುಮತಿಯನ್ನು ಪಡೆಯಬೇಕಾದ ಅವಶ್ಯಕತೆಯಿಲ್ಲ. ಜಗತ್ತಿನ ಯಾವ ನಗರದ ಬಿಲ್ ಬೋರ್ಡ್ ನಲ್ಲಾದರೂ ಯಾವ ಬಳಕೆದಾರನ ಫೋಟೊ ಬಳಸುವ ಷರತ್ತನ್ನು ಫೇಸ್ ಆ್ಯಪ್ ಹೊಂದಿದೆ. ಬಳಕೆದಾರರು ಈ ಆ್ಯಪ್ ಬಳಕೆ ಸಂದರ್ಭ ಈ ಎಲ್ಲಾ ಷರತ್ತುಗಳನ್ನು ಒಪ್ಪಿರುತ್ತಾರೆ.

ಇಷ್ಟೇ ಅಲ್ಲದೆ ವ್ಯಕ್ತಿಯೊಬ್ಬರ ಹೆಸರು, ಧ್ವನಿಗಳನ್ನು ಬಳಸಿಕೊಳ್ಳುವ ಷರತ್ತನ್ನೂ ಒಳಗೊಂಡಿದೆ. “ನಮ್ಮ ಸೇವೆಯ ಮೂಲಕ ನೀವು ಏನನ್ನದಾರೂ ಪೋಸ್ಟ್ ಮಾಡಿದಲ್ಲಿ ಅಥವಾ ಶೇರ್ ಮಾಡಿದಲ್ಲಿ ನಿಮ್ಮ ಯೂಸರ್ ಕಂಟೆಂಟ್ ಅಥವಾ ಸಂಬಂಧಪಟ್ಟ ಮಾಹಿತಿಗಳು (ಯೂಸರ್ ನೇಮ್, ಲೊಕೇಶನ್ ಅಥವಾ ಪ್ರೊಫೈಲ್ ಫೋಟೊ) ಸಾರ್ವಜನಿಕವಾಗಿ ಕಾಣಿಸುತ್ತದೆ” ಎಂದು ಷರತ್ತು ಮತ್ತು ನಿಯಮಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಬಳಕೆದಾರನ ಮೊಬೈಲ್ ನಲ್ಲಿರುವ ಫೋಟೊ ಲೈಬ್ರರಿಗೆ ಫೇಸ್ ಆ್ಯಪ್ ಆ್ಯಕ್ಸೆಸ್ ಕೇಳುತ್ತದೆ ಮತ್ತು ಕ್ಲೌಡ್ ಸರ್ವಿಸ್ ನಲ್ಲಿ ಅವುಗಳನ್ನು ಅಪ್ಲೋಡ್ ಮಾಡುತ್ತದೆ. ಆದರೆ ಇವುಗಳು 48 ಗಂಟೆಗಳಲ್ಲಿ ಡಿಲಿಟ್ ಆಗುತ್ತವೆ ಎಂದು ಫೇಸ್ ಆ್ಯಪ್ ಸ್ಪಷ್ಟನೆ ನೀಡಿದೆ. ಆದರೆ ಕಂಪೆನಿಯ ಷರತ್ತು ನಿಯಮಗಳಲ್ಲಿ 48 ಗಂಟೆಗಳ ನಂತರ ಡಿಲಿಟ್ ಆಗುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.

ಮೂರನೆ ಪಾರ್ಟಿ ಜೊತೆ ಬಳಕೆದಾರರ ಮಾಹಿತಿ ಹಂಚುವ ಅಪಾಯವೂ ಫೇಸ್ ಆ್ಯಪ್ ನಲ್ಲಿದೆ. ಕಂಪೆನಿ ಇದನ್ನು ನಿರಾಕರಿಸುತ್ತಿದೆಯಾದರೂ ‘ಕಂಪೆನಿಯು ಇತರ ಪಾರ್ಟಿ ಜೊತೆ ಮಾಹಿತಿ ಹಂಚಿಕೊಳ್ಳಬಹುದು’ ಎಂದು ಷರತ್ತು ಮತ್ತು ನಿಯಮಗಳು ತಿಳಿಸುತ್ತವೆ.

ಈ ಫೇಸ್‌ಆ್ಯಪ್ ರಷ್ಯಾ ಮೂಲದ ಕಂಪನಿಯೊಂದರ ಅಪ್ಲಿಕೇಶನ್ ಆಗಿದ್ದು, ಇದನ್ನ 150 ದಶಲಕ್ಷಕ್ಕೂ ಹೆಚ್ಚು ಜನ ಬಳಸುತ್ತಿದ್ದಾರೆ. 100,000 ಮಿಲಿಯನ್ ಜನರು ಗೂಗಲ್ ಪ್ಲೇನಿಂದ ಫೇಸ್‌ಆಪ್ ಡೌನ್‌ಲೋಡ್ ಮಾಡಿದ್ದಾರೆ ಮತ್ತು ಆಪಲ್‌ನ ಐಒಎಸ್ ಸೇರಿದಂತೆ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ 50 ಮಿಲಿಯನ್ ಜನರು ಡೌನ್‌ಲೋಡ್ ಮಾಡಿದ್ದಾರೆ.

ಆದ್ರೆ ಈ ಆ್ಯಪ್ ಉಪಯೋಗಿಸಿದ್ರೆ ನಿಮ್ಮ ವೈಯಕ್ತಿಕ ಮಾಹಿತಿ ಕೂಡ ಸೋರಿಕೆಯಾಗುವ ಸಾಧ್ಯತೆಗಳಿದ್ದು, ಆ್ಯಪ್ ಬಳಸುವ ಮುನ್ನ ಎಚ್ಚರಿಕೆ ವಹಿಸಿ.

Leave a Reply

Your email address will not be published. Required fields are marked *

error: Content is protected !!