ದಮ್ಮಾಮ್: ‘ಲಬ್ಬೈಕಲ್ಲಾಹುಮ್ಮ ಲಬ್ಬೈಕ್… ಲಬ್ಬೈಕ ಲಾ ಶರೀಕ ಲಕ ಲಬ್ಬೈಕ್… ಇನ್ನಲ್ ಹಮ್ದ, ವನ್ನಿಅ್ಮತ ಲಕ ವಲ್ ಮುಲ್ಕ್… ಲಾ ಶರೀಕ ಲಕ್’ (ಅಲ್ಲಾಹನೇ, ನಾನು ನಿನ್ನ ಸನ್ನಿಧಿಗೆ ಹಾಜರಾಗಿದ್ದೇನೆ…). ಖಲೀಲುಲ್ಲಾಹಿ ಇಬ್ರಾಹಿಂ ನಬಿ (ಅ) ಮತ್ತು ಅವರ ಪುತ್ರ ಇಸ್ಮಾಯಿಲ್ ನಬಿ (ಅ) ಅವರ ತ್ಯಾಗದ ಸ್ಮರಣೆಗಳನ್ನು ಎದೆಯಲ್ಲಿ ಹೊತ್ತು ಎಂಟು ದಿಕ್ಕುಗಳಿಂದ ಹರಿದು ಬಂದ ಲಕ್ಷಾಂತರ ಜನಸಾಗರವು, ಯೌಮುಲ್-ತರ್ವಿಯಾ ದಿನವಾದ ದುಲ್-ಹಿಜ್ಜಾ 8 ರಂದು ಶ್ವೇತವಸ್ತ್ರ ಧಾರಿಗಳಾಗಿ “ನಾಥನೇ, ನಿನ್ನ ಕರೆಗೆ ಓಗೊಟ್ಟು ನಾವಿಲ್ಲಿ ಹಾಜರಾಗಿದ್ದೇವೆ” ಎಂಬ ಮಂತ್ರ ಘೋಷದೊಂದಿಗೆ ಪರ್ವತಗಳ ಕಣಿವೆಯಾದ, “ಡೇರೆಗಳ ನಗರಿ” ಎಂದೇ ಪ್ರಸಿದ್ಧವಾಗಿರುವ ಮಿನಾವನ್ನು ತಲುಪಿದ್ದಾರೆ. ಇದರೊಂದಿಗೆ ಮಿನಾ ಕಣಿವೆಯು ಜನಸಾಗರವಾಗಿ ಮಾರ್ಪಟ್ಟಿದೆ.
ವಿವಿಧ ಮುತ್ವವ್ವಿಫ್ ಕಚೇರಿಗಳ ಅಡಿಯ ಬಸ್‌ಗಳು ಮತ್ತು ಕಾಲ್ನಡಿಗೆಯ ಮೂಲಕ ಹಾಜಿಗಳು ಮಿನಾವನ್ನು ತಲುಪಿದರು. ಒಂದು ದಿನ ಪೂರ್ತಿ ಪ್ರಾರ್ಥನೆಯಲ್ಲಿ ಕಳೆಯುವ ಹಾಜಿಗಳು, ಸೋಮವಾರದ ಸುಬ್‌ಹಿ (ಮುಂಜಾನೆಯ) ನಮಾಜಿನ ನಂತರ ಹಜ್‌ನ ಅತ್ಯಂತ ಪ್ರಮುಖ ಚಟುವಟಿಕೆಯಾದ ಅರಫಾ ಸಂಗಮಕ್ಕಾಗಿ ಪ್ರಯಾಣ ಬೆಳೆಸಲಿದ್ದಾರೆ. ಈ ವರ್ಷ ಹಜ್ ಯಾತ್ರೆಯನ್ನು ಸುಗಮ ಮತ್ತು ಸುರಕ್ಷಿತವಾಗಿ ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಪೂರ್ವಸಿದ್ಧತೆಗಳನ್ನು ಅಧಿಕಾರಿಗಳು ಮೊದಲೇ ಪೂರ್ಣಗೊಳಿಸಿದ್ದಾರೆ.
ಬಸ್‌ಗಳು ಮತ್ತು ಮಶಾಇರ್ ಮೆಟ್ರೋ ರೈಲುಗಳ ಮೂಲಕ ಹಾಜಿಗಳು ಅರಫಾ ಕಡೆಗೆ ಪ್ರಯಾಣಿಸಲಿದ್ದಾರೆ. ಈ ವರ್ಷ ಹಜ್ ಸಂದರ್ಭದಲ್ಲಿ ತೀವ್ರ ಉಷ್ಣಾಂಶವಿರುವುದರಿಂದ, ಮಿನಾ-ಅರಫಾ-ಮುಜ್ದಲಿಫಾ ಮತ್ತು ಮೆಟ್ರೋ ನಿಲ್ದಾಣಗಳ ಕಡೆಗೆ ಹೋಗುವ ಕಾಲುದಾರಿಗಳಲ್ಲೆಲ್ಲಾ ನೆರಳಿನ ಛತ್ರಿಗಳು ಮತ್ತು ಕುಡಿಯುವ ನೀರಿನ ನಲ್ಲಿಗಳನ್ನು ಸ್ಥಾಪಿಸಲಾಗಿದೆ.
ಹಜ್ ವಿಧಿವಿಧಾನಗಳಿಗಾಗಿ ಜಾಗತಿಕ ದೇಶಗಳ ಯಾತ್ರಿಕರು ದುಲ್-ಹಿಜ್ಜಾ 7 ರಿಂದ ದುಲ್-ಹಿಜ್ಜಾ 13 ರವರೆಗಿನ ದಿನಗಳಲ್ಲಿ ಮಿನಾದ ಡೇರೆಗಳಲ್ಲಿ (ಟೆಂಟ್) ವಾಸಿಸಲಿದ್ದಾರೆ. ಯಾತ್ರಿಕರಿಗಾಗಿ ಅತ್ಯಾಧುನಿಕ ಹವಾನಿಯಂತ್ರಿತ (AC) ಸೌಲಭ್ಯ ಮತ್ತು ಅಗ್ನಿ ನಿರೋಧಕ ಶಕ್ತಿಯನ್ನು ಹೊಂದಿರುವ ಒಂದು ಲಕ್ಷಕ್ಕೂ ಹೆಚ್ಚು ಕಾಯಂ ಡೇರೆಗಳನ್ನು ಸಜ್ಜುಗೊಳಿಸಲಾಗಿದೆ.
ಈ ವರ್ಷದ ಹಜ್ ಸೀಸನ್ ಪ್ರಾರಂಭವಾದಾಗಿನಿಂದ ಇದುವರೆಗೆ ಸೌದಿ ಆರೋಗ್ಯ ಸಚಿವಾಲಯವು 21 ಲಕ್ಷಕ್ಕೂ ಹೆಚ್ಚು ಜನರಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸಿದೆ. 148 ಜನರಿಗೆ ಶಸ್ತ್ರಚಿಕಿತ್ಸೆ, 14,600 ತುರ್ತು ಪ್ರಕರಣಗಳ ನಿರ್ವಹಣೆ ಮತ್ತು 2,150 ಹಾಜಿಗಳಿಗೆ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ನೀಡಲಾಗಿದೆ.
ಮಕ್ಕಾದ ಮಸ್ಜಿದುಲ್ ಹರಾಮ್‌ನಿಂದ ಸುಮಾರು 5 ಮೈಲಿ ಅಥವಾ 8 ಕಿಲೋಮೀಟರ್ ಪೂರ್ವಕ್ಕೆ, ಪರ್ವತಗಳಿಂದ ಆವೃತವಾದ ಕಣಿವೆಯಲ್ಲಾಗಿದೆ ಮಿನಾ. ಇಸ್ಲಾಮಿಕ್ ಇತಿಹಾಸದಲ್ಲಿ ಮಿನಾ ಎಂಬ ಹೆಸರಿನ ಹಿಂದೆ ಒಂದು ಹಿನ್ನೆಲೆಯಿದೆ: ಅಲ್ಲಾಹನ ಆಜ್ಞೆಯಂತೆ ಇಬ್ರಾಹಿಂ ನಬಿ (ಅ) ಅವರು ತಮ್ಮ ಮಗ ಇಸ್ಮಾಯಿಲ್ ನಬಿ (ಅ) ಅವರನ್ನು ಬಲಿ ನೀಡಲು ಮುಂದಾದಾಗ, ಆ ಪರೀಕ್ಷೆಯಲ್ಲಿ ಅದ್ಭುತವಾಗಿ ಜಯಗಳಿಸಿದ ಸ್ಥಳ ಇದಾಗಿದೆ. ಆದ್ದರಿಂದ ಈ ಕಣಿವೆಗೆ “ಮಿನಾ” ಎಂಬ ಹೆಸರು ಬಂದಿತು. “ಮಿನಾ” ಎಂಬ ಪದಕ್ಕೆ “ಹರಿಯುವುದು” ಎಂದೂ ಅರ್ಥವಿದೆ.
ಅಂತಿಮ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ) ಅವರು ಕೊನೆಯದಾಗಿ ಪಾಲ್ಗೊಂಡಿದ್ದ ‘ಹಜ್ಜತುಲ್ ವಿದಾ’ (ವಿದಾಯದ ಹಜ್) ಸಂದರ್ಭದಲ್ಲಿ ಮುಸ್ಲಿಮರು, ಪ್ರವಾದಿ ಮತ್ತು ಅವರ ಸ್ವಹಾಬಿಗಳು (ಅನುಯಾಯಿಗಳು) ತಂಗಿದ್ದ ಹಾಗೂ ಒಂಟೆಗಳನ್ನು ಬಲಿ ನೀಡಿದ ಸ್ಥಳವೂ ಇದಾಗಿದೆ.
ಭಾರತೀಯ ಯಾತ್ರಿಕರು ಮಕ್ಕಾಗೆ ತಲುಪಿದ್ದಾರೆ: ಹಜ್ ಕರ್ಮಗಳಲ್ಲಿ ಪಾಲ್ಗೊಳ್ಳಲು ಭಾರತದ 17 ಎಂಬಾರ್ಕೇಶನ್ ಕೇಂದ್ರಗಳಿಂದ ಪ್ರಯಾಣ ಬೆಳೆಸಿದ್ದ ಎಲ್ಲಾ ಯಾತ್ರಿಕರು ಮಕ್ಕಾವನ್ನು ತಲುಪಿದ್ದಾರೆ. ಭಾರತದಿಂದ ಈ ವರ್ಷ 1,75,025 ಯಾತ್ರಿಕರು ಆಗಮಿಸಿದ್ದಾರೆ. ರವಿವಾರ ಸಂಜೆಯ ವೇಳೆಗೆ ಭಾರತದ ಎಲ್ಲಾ ಹಾಜಿಗಳು ಮಿನಾವನ್ನು ತಲುಪಲಿದ್ದಾರೆ.
















ಇನ್ನಷ್ಟು ಸುದ್ದಿಗಳು
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?