ದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಯ ಬೆನ್ನಲ್ಲೇ ಅಸ್ತಿತ್ವಕ್ಕೆ ಬಂದ ‘ಕಾಕ್ರೋಚ್ ಜನತಾ ಪಕ್ಷ’ದ (CJP) ಕುರಿತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಚರ್ಚೆ ಮಾತ್ರವಲ್ಲದೆ, ಲಕ್ಷಾಂತರ ಜನರು ಇದರ ಸದಸ್ಯರಾಗುತ್ತಿದ್ದಾರೆ. ಜಾಲತಾಣಗಳಲ್ಲಿ ಇದು ತರಂಗ ಎಬ್ಬಿಸುತ್ತಿದ್ದಂತೆ, ಪಕ್ಷದ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಗೆ ಕೇಂದ್ರ ಸರ್ಕಾರ ಬೀಗ ಹಾಕಿರುವುದು ಇತ್ತೀಚಿನ ಸುದ್ದಿಯಾಗಿದೆ. 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಈ ಎಕ್ಸ್ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ.
ಇದೇ ವೇಳೆ, ತಾನು ಭಾರತಕ್ಕೆ ಮರಳಿದರೆ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ ಎಂದು ಪ್ರಸ್ತುತ ಅಮೆರಿಕದಲ್ಲಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಹೇಳಿದ್ದಾರೆ.
“ಕೊನೆಗೂ ಈ ದೇಶದಲ್ಲಿ ನಮ್ಮನ್ನು ಜಿರಳೆಗಳಂತೆ (ಕಾಕ್ರೋಚ್) ನೋಡಲಾಗುತ್ತಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ” ಎಂದು ದಿಪ್ಕೆ ‘ದಿ ರೆಡ್ ಮೈಕ್’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಸಂಖ್ಯೆಯಲ್ಲಿ ಕಾಕ್ರೋಚ್ ಜನತಾ ಪಕ್ಷವು ಬಿಜೆಪಿಯನ್ನು ಹಿಂದಿಕ್ಕಿರುವ ಕುರಿತು ಮಾತನಾಡಿದ ಅವರು, “ನಮಗೆ ಹೆಚ್ಚು ಫಾಲೋವರ್ಸ್ ಇರುವುದಕ್ಕೆ ನನಗೇನು ಸಂತೋಷವಿಲ್ಲ. ಅದರಿಂದ ಏನಾಗುತ್ತದೆ? ಸಮಸ್ಯೆಗಳು ಹಾಗೇ ಉಳಿಯುತ್ತವೆ” ಎಂದಿದ್ದಾರೆ.
“ನಾನು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ, ದೆಹಲಿ ಪೊಲೀಸರ ತಂಡವು ನನ್ನನ್ನು ತಿಹಾರ್ ಜೈಲಿಗೆ ಕರೆದೊಯ್ಯುತ್ತದೆ ಎಂದು ನನಗೆ ಅನ್ನಿಸುತ್ತಿದೆ” ಎಂದು ದಿಪ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.
ತಮ್ಮ ಖಾತೆಯನ್ನು ಬ್ಲಾಕ್ ಮಾಡಲಾದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಅಭಿಜೀತ್, “ನಿರೀಕ್ಷಿಸಿದಂತೆಯೇ ನಡೆದಿದೆ” ಎಂದು ಬರೆದುಕೊಂಡಿದ್ದಾರೆ. ಪ್ರಸ್ತುತ ಅಖಿಲೇಶ್ ಯಾದವ್, ಮಹುವಾ ಮೊಯಿತ್ರಾ ಸೇರಿದಂತೆ ಹಲವು ಪ್ರಮುಖ ವಿರೋಧ ಪಕ್ಷದ ನಾಯಕರು ಮತ್ತು ಹಲವಾರು ಸೆಲೆಬ್ರಿಟಿಗಳು ಸಿಜೆಪಿಗೆ ಬೆಂಬಲ ಸೂಚಿಸಿ ರಂಗಪ್ರವೇಶ ಮಾಡಿದ್ದಾರೆ.
30 ವರ್ಷದ ಅಭಿಜೀತ್ ದಿಪ್ಕೆ ಅವರು 2020 ಮತ್ತು 2023 ರ ನಡುವೆ ಆಮ್ ಆದ್ಮಿ ಪಕ್ಷದ (AAP) ಸೋಷಿಯಲ್ ಮೀಡಿಯಾ ವಿಭಾಗದಲ್ಲಿ ಕೆಲಸ ಮಾಡಿದ್ದರು. ಸದ್ಯ ಅವರು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ (Public Relations) ವಿಷಯದಲ್ಲಿ ಸ್ನಾತಕೋತ್ತರ ಪದವಿ (ಮಾರ್ಸ್ಟರ್ಸ್) ವ್ಯಾಸಂಗ ಮಾಡುತ್ತಿದ್ದಾರೆ. ಪಕ್ಷದ ಎಕ್ಸ್ ಖಾತೆಯನ್ನು ಮುಚ್ಚಲಾಗಿದ್ದರೂ, ‘ಕಾಕ್ರೋಚ್ ಕಮ್ ಬ್ಯಾಕ್’ ಎಂಬ ಹೆಸರಿನಲ್ಲಿ ಹೊಸ ಪೇಜ್ ಆರಂಭಿಸಲಾಗಿದೆ. ಈ ಹೊಸ ಪುಟ ಆರಂಭವಾದ ಕೆಲವೇ ಗಂಟೆಗಳಲ್ಲಿ 35,000ಕ್ಕೂ ಹೆಚ್ಚು ಫಾಲೋವರ್ಸ್ ದಾಟಿದೆ.
ಹಿನ್ನೆಲೆ:
ಕಳೆದ ವಾರ ನ್ಯಾಯಾಲಯದ ಕಲಾಪದ ವೇಳೆ ಮುಖ್ಯ ನ್ಯಾಯಮೂರ್ತಿಗಳು ಯುವಕರನ್ನು ಜಿರಳೆಗಳಿಗೆ (ಕಾಕ್ರೋಚ್) ಹೋಲಿಸಿದ್ದರು. ‘ಯಾವುದೇ ಕೆಲಸವಿಲ್ಲದ ಕೆಲವು ಯುವಕರಿದ್ದಾರೆ. ಅವರಲ್ಲಿ ಕೆಲವರು ಪತ್ರಕರ್ತರಾಗಿ, ಇನ್ನು ಕೆಲವರು ಸೋಷಿಯಲ್ ಮೀಡಿಯಾ ಹಾಗೂ ಆರ್‌ಟಿಐ ಕಾರ್ಯಕರ್ತರಾಗಿ ಸಮಾಜದ ಮೇಲೆ ದಾಳಿ ಮಾಡುತ್ತಿದ್ದಾರೆ. ಇವರು ಕಾಕ್ರೋಚ್‌ಗಳು ಮತ್ತು ಪರಾವಲಂಬಿಗಳು’ ಎಂದು ನ್ಯಾಯಮೂರ್ತಿಗಳು ಹೇಳಿಕೆ ನೀಡಿದ್ದರು. ಆ ಹೇಳಿಕೆಯ ಪ್ರತಿಭಟನೆಯಾಗಿ ಈ ಪಕ್ಷವನ್ನು ಆರಂಭಿಸಲಾಗಿತ್ತು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ