janadhvani

Kannada Online News Paper

ಸೌದಿ: ಹರಮ್‌ಗಳಲ್ಲಿ ‘ಇಅ್‌ತಿಕಾಫ್’ ಅನುಷ್ಠಿಸುವವರ ನೋಂದಣಿ ಆರಂಭ

ಮಕ್ಕಾ: ರಮಝಾನ್ ತಿಂಗಳಲ್ಲಿ ಹರಮ್‌ಗಳಲ್ಲಿ ‘ಇಅ್‌ತಿಕಾಫ್’ ಅನುಷ್ಠಿಸುವವರ ನೋಂದಣಿ ಆರಂಭಿಸಿರುವುದಾಗಿ ಹರಮ್ ಖಾತೆಯ ಕಾರ್ಯಾಲಯ ತಿಳಿಸಿದೆ. ಅಲ್ ಹರಮೈನ್ ಮೊಬೈಲ್ ಆ್ಯಪ್ ಅಥವಾ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇಅ್‌ತಿಕಾಫ್ ಗೆ ನೋಂದಣಿ ಮಾಡಿಕೊಳ್ಳುವವರು ಕ್ರಮವಾಗಿ ನಿಬಂಧನೆ ಮತ್ತು ವ್ಯವಸ್ಥೆಗಳನ್ನು ಪಾಲಿಸುವಂತೆ ಕಾರ್ಯಾಲಯ ತಿಳಿಸಿದೆ.

ಮಕ್ಕಾದ ಹರಮ್‌ನಲ್ಲಿ ರಮಝಾನ್ 10ರ ವರೆಗೆ ಮತ್ತು ಮದೀನಾ ಶರೀಫ್‌ನಲ್ಲಿ ರಮಝಾನ್ 15ರ ವರೆಗೂ ನೋಂದಣಿಗೆ ಅವಕಾಶವಿದೆ. ರಮಝಾನ್ 19 ರಿಂದ ಮಕ್ಕಾದಲ್ಲೂ, 20 ರಿಂದ ಮದೀನಾದಲ್ಲೂ ಇಅ್‌ತಿಕಾಫ್ ಪ್ರಾರಂಭವಾಗಲಿದ್ದು, ರಮಝಾನ್ ಕೊನೆಯ ರಾತ್ರಿ ಇಶಾ ನಮಾಝ್ ವರೆಗೂ ಮುಂದುವರಿಸ ಬಹುದು. ಮಸ್ಜಿದುನ್ನಬವಿಯ ಪಶ್ಚಿಮ ಭಾಗದ ಮೇಲಂತಸ್ತಿನಲ್ಲಿ ಇಅ್‌ತಿಕಾಫ್ ಗೆ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ.

ರಮಝಾನ್ 16ರಿಂದ 19ರ ವರೆಗೆ ಎರಡು ಹರಮ್‌ಗಳಲ್ಲೂ ಅನುಮತಿ ಫೋರಂ ‌ಗಳನ್ನು ವಿತರಿಸಲಾಗುವುದು. ಮಸ್ಜಿದುಲ್ ಹರಾಮಿನ 119 ನೇ ದ್ವಾರದ ಮುಂಬಾಗದಲ್ಲಿರುವ ಕೌಂಟರ್ ಮತ್ತು ಮಸ್ಜಿದುನ್ನಬವಿಯ ವರಾಂಡಗಳಲ್ಲೂ ಅನುಮತಿ ಪತ್ರ ವಿತರಣೆ ನಡೆಯಲಿದೆ.

ಇಅ್‌ತಿಕಾಫ್ ಅನುಷ್ಠಾನಗೊಳಿಸುವ ಪ್ರತೀಯೊಬ್ಬರ ವಸ್ತುಗಳನ್ನು ಕಾಯ್ದಿರಿಸಲು ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಮಾಡಲಾಗಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಅನುಮತಿಯಿದ್ದು, ಕುಟುಂಬ ಸಮೇತ ಬರುವ ಮಹಿಳೆಯರು ಮತ್ತು ಪುರುಷರಿಗೆ ಒಟ್ಟಾಗಿ ಇರಲು ಅನುಮತಿ ಇಲ್ಲ. ಹರಮ್‌ಗಳ ಪಾವಿತ್ರ್ಯತೆಯನ್ನು ಮತ್ತು ಶುಚಿತ್ವವನ್ನು ಕಾಪಾಡುವಂತೆ ಹರಮ್ ಕಾರ್ಯಾಲಯ ತಿಳಿಸಿದೆ.

error: Content is protected !! Not allowed copy content from janadhvani.com