janadhvani

Kannada Online News Paper

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ,ಮುಗಿಬಿದ್ದ ಜನ, ಕೆಲಕಾಲ ವೆಬ್ಸೈಟ್ ಸ್ಥಗಿತ

ನವದೆಹಲಿ (ಏ.2): 2019 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಏನಿದೆ ಎಂಬುದನ್ನು ತಿಳಿಯುವ ಕುತೂಹಲದಿಂದ ಜನರು ಮುಗಿ ಬಿದ್ದ ಪರಿಣಾಮ, ಕಾಂಗ್ರೆಸ್ ವೆಬ್ಸೈಟ್ ಕೆಲ ಕಾಲ ಸ್ಥಗಿತಗೊಂಡಿತು.

ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿ ಪಕ್ಷದ ಪ್ರಮುಖ ನಾಯಕರು ದೆಹಲಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು. ಬಡತನ ತೊಲಗಿಸಲು ದೇಶದ ಶೇ. 20 ಅತಿ ಬಡ ಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂ. ಕೊಡುವ NYAY ಯೋಜನೆ ಸೇರಿ ಸಾಕಷ್ಟು ಆಶ್ವಾಸನೆಗಳನ್ನು ಕಾಂಗ್ರೆಸ್ ನೀಡಿದೆ.

ಕಾಂಗ್ರೆಸ್ ನೀಡಿರುವ ಆಶ್ವಾಸನೆ ಏನು ಎಂಬುದನ್ನು ತಿಳಿದುಕೊಳ್ಳಲು ಜನರು ಕಾಂಗ್ರೆಸ್ ವೆಬ್ಸೈಟ್ಗೆ ಭೇಟಿ ನೀಡಿದ್ದರು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದರಿಂದ ವೆಬ್ಸೈಟ್ ಕೆಲ ಕಾಲ
ಸ್ಥಗಿತಗೊಂಡಿತು ಎನ್ನಲಾಗಿದೆ. ನಂತರ ಈ ಸಮಸ್ಯೆಯನ್ನು ಐಟಿ ತಂಡ ಬಗೆಹರಿಸಿದೆ.


ಈ ಬಗ್ಗೆ ಟ್ವೀಟ್ ಮಾಡಿದ್ದ ಕಾಂಗ್ರೆಸ್, “ನಮ್ಮ ವೆಬ್ಸೈಟ್ಗೆ ಅಧಿಕ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ. ಶೀಘ್ರವೇ ನಾವು ಈ ಸಮಸ್ಯೆ ಬಗೆಹರಿಸುತ್ತೇವೆ, ಎಂದು ಬರೆದುಕೊಂಡಿತ್ತು.

ಪ್ರಣಾಳಿಕೆಯಲ್ಲಿ ಏನಿದೆ?:

1) NYAY ಯೋಜನೆ: ಬಡತನ ತೊಲಗಿಸಲು ದೇಶದ ಶೇ. 20 ಅತಿ ಬಡ ಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂ ಕೊಡುವುದು
2) ರೈಲ್ವೆ ಬಜೆಟ್ನಂತೆ ರೈತರಿಗೇ ಪ್ರತ್ಯೇಕ ಬಜೆಟ್
3) ರೈತರು ಸಾಲ ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ ಕ್ರಿಮಿನಲ್ ಅಪರಾಧವೆಂದು ಪರಿಗಣಿಸದೇ ಸಿವಿಲ್ ಅಫೆನ್ಸ್ ಎಂದಷ್ಟೇ ಪರಿಗಣನೆ
4) ಖಾಲಿ ಇರುವ 22 ಲಕ್ಷ ಸರಕಾರಿ ಉದ್ಯೋಗಗಳನ್ನು ಭರ್ತಿ ಮಾಡುವುದು; ಪಂಚಾಯಿತಿಯಲ್ಲಿ 10 ಲಕ್ಷ ಉದ್ಯೋಗಗಳ ಭರ್ತಿ
5) ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ಕೆಲಸದ ದಿನಗಳನ್ನ 100ರಿಂದ 150 ದಿನಗಳಿಗೆ ಹೆಚ್ಚಿಸುವುದು
6) ಜಿಡಿಪಿಯಲ್ಲಿ ಶೇ. 6ರಷ್ಟು ಹಣ ಶಿಕ್ಷಣಕ್ಕೆ ಮೀಸಲು
7) ಖಾಸಗಿ ಇನ್ಷೂರೆನ್ಸ್ ಕಂಪನಿಗಳಿಗೆ ತಿಲಾಂಜಲಿ
8) ಜಿಎಸ್ಟಿಯನ್ನು ಸರಳಗೊಳಿಸುವುದು; ಜಿಎಸ್ಟಿಯಲ್ಲಿ ಎರಡು ಹಂತದ ಜಿಎಸ್ಟಿ ತೆರಿಗೆ ಮಾತ್ರ ಇರಲಿದೆ
9) ಅಧಿಕಾರಕ್ಕೆ ಬಂದ ಮೊದಲ ದಿನವೇ ರಫೇಲ್ ಹಗರಣದ ತನಿಖೆ ಪ್ರಾರಂಭ
10) ಮಾನಹಾನಿ ಪ್ರಕರಣವನ್ನು ಅಪರಾಧ ಕೃತ್ಯ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 499 ಅನ್ನು ಕೈಬಿಡುವುದು; ಈ ಪ್ರಕರಣವನ್ನು ಸಿವಿಲ್ ಅಫೆನ್ಸ್ ಎಂದು ಪರಿಗಣಿಸುವುದು
11) ರಾಷ್ಟ್ರದ್ರೋಹ ವಿಚಾರದಲ್ಲಿರುವ ಐಪಿಸಿ ಸೆಕ್ಷನ್ 124ಎ ಅನ್ನು ಕೈಬಿಡುವುದು; ಈ ಸೆಕ್ಷನ್ ಸಾಕಷ್ಟು ದುರುಪಯೋಗವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ.
12) ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ರದ್ದು; ಯಾವ ಪ್ರಜೆಯೂ ಪೌರತ್ವ ನೊಂದಣಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು.

ಬಡತನ ನಿರ್ಮೂಲನೆ, ನಿರುದ್ಯೋಗ ನಿವಾರಣೆ, ಶಿಕ್ಷಣಕ್ಕೆ ಪ್ರಾಮುಖ್ಯತೆ, ಆರೋಗ್ಯ ಆರೈಕೆ ಮತ್ತು ರೈತರ ಹಿತರಕ್ಷಣೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ.
●ನ್ಯಾಯ್ ಹೆಸರಿನಲ್ಲಿ ಬಡವರಿಗಾಗಿ ಕನಿಷ್ಠ ಆದಾಯ ಯೋಜನೆಯನ್ನು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ದೇಶದ ಐದು ಕೋಟಿ ಬಡ ಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂ.ಗಳ ಆರ್ಥಿಕ ನೆರವು ನೀಡಲು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.

ಈ ಮೂಲಕ ಪ್ರತಿ ಐದು ವರ್ಷಕ್ಕೆ ಬಡ ಕುಟುಂಬಗಳಿಗೆ 3,60,000ರೂ. ಹಣಕಾಸು ಸಹಾಯ ಲಭಿಸಲಿದೆ.
●ರೈತರ ಹಿತಾಸಕ್ತಿ ರಕ್ಷಣೆಗೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಾಧಾನ್ಯತೆ ನೀಡಲಾಗಿದೆ. ಕೃಷಿಕರ ಸುರಕ್ಷತೆಗಾಗಿ ಪ್ರತ್ಯೇಕ ಕಿಸಾನ್ ಬಜೆಟ್ ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ಅಲ್ಲದೆ, ರೈತರು ಪಡೆದ ಸಾಲಗಳನ್ನು ಸಕಾಲದಲ್ಲಿ ಪಾವತಿಸಲು ಸಾಧ್ಯವಾಗದಿದ್ದಲ್ಲಿ ಕೃಷಿಕರ ಮೇಲೆ ಹೂಡಲಾಗುತ್ತಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಸಿವಿಲ್ ಕಟ್ಲೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗಿದೆ.
●ನಿರುದ್ಯೋಗ ನಿವಾರಣೆಗೂ ಪ್ರಮುಖ ಆದ್ಯತೆ ನೀಡಿರುವ ಕಾಂಗ್ರೆಸ್, ದೇಶದಲ್ಲಿ ಖಾಲಿ ಇರುವ ಎಲ್ಲ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದೆ. ಇದರೊಂದಿಗೆ 22 ಲಕ್ಷ ಖಾಲಿ ಹುದ್ದೆಗಳನ್ನು ತುಂಬಲು ಪ್ರಣಾಳಿಕೆಯಲ್ಲಿ ಉದ್ದೇಶಿಸಲಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಭರವಸೆ ಯೋಜನೆ (ಎಂಜಿ ನರೇಗಾ) ಅಡಿ ಯುವಕ-ಯುವತಿಯರಿಗೆ ವರ್ಷಕ್ಕೆ ಕನಿಷ್ಟ 150 ದಿನಗಳ ಉದ್ಯೋಗ ಖಾತ್ರಿ ಹಾಗೂ ಗ್ರಾಮೀಣ ಮಟ್ಟದಲ್ಲಿ 10 ಲಕ್ಷ ಯುವಕ-ಯುವತಿಯರಿಗೆ ಉದ್ಯೋಗ ಸೃಷ್ಟಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಾಗ್ದಾನ ಮಾಡಿದೆ.
●ಲಿಂಗ ತಾರತಮ್ಯ ನಿವಾರಣೆಗೂ ಒತ್ತು ನೀಡಿರುವ ಕಾಂಗ್ರೆಸ್, ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ಹಾಗೂ ಸರ್ಕಾರಿ ಹುದ್ದೆಗಳಲ್ಲಿ ಅವರಿಗೆ ಶೇ.33ರಷ್ಟು ಉದ್ಯೋಗ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದೆ.
●ಶಿಕ್ಷಣಕ್ಕೂ ವಿಶೇಷ ಆದ್ಯತೆ ನೀಡಲಾಗಿದ್ದು, ದೇಶೀಯ ಒಟ್ಟು ಉತ್ಪನ್ನ (ಜಿಡಿಪಿ)ಯ ಶೇ.6ರಷ್ಟನ್ನು ಶಿಕ್ಷಣರಂಗಕ್ಕೆ ಮೀಸಲಿಡುವುದಾಗಿ ಪ್ರಕಟಿಸಲಾಗಿದೆ. ಶಿಕ್ಷಣದ ಬಜೆಟ್ ಮಂಜೂರಾತಿಯನ್ನು ಶೇ.3 ರಿಂದ ಶೇ.6ರಷ್ಟು ಹೆಚ್ಚಿಸಲಾಗುವುದು ಎಂದು ಆಶ್ವಾಸನೆ ನೀಡಲಾಗಿದೆ.
●ದೇಶದ ಜನರ ಆರೋಗ್ಯ ರಕ್ಷಣೆಗಾಗಿ ಕೆಲವು ಪ್ರಮುಖ ಕ್ರಮಗಳನ್ನು ಸಹ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ದೇಶದ ಬಡವರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಆರೈಕೆ ಸೇವೆ ಲಭಿಸಲು ವಿಶೇಷ ಗಮನ ಹರಿಸಲಾಗುವುದು. ಆರೋಗ್ಯ ಕ್ಷೇತ್ರದ ಬಜೆಟ್ ಅನುದಾನವನ್ನು ಈಗಿನ ಶೇ.1.2ರಿಂದ ಶೇ.3ರಷ್ಟು ಹೆಚ್ಚಿಸಲಾಗುವುದು ಎಂದು ವಿವರಿಸಲಾಗಿದೆ.
●ದೇಶಾದ್ಯಂತ ಜಾರಿಗೆ ಬಂದಿರುವ ಏಕರೂಪದ ಸರಕುಗಳು ಮತ್ತು ತೆರಿಗೆಗಳ ಪದ್ಧತಿ (ಜಿಎಸ್‍ಟಿ)ಯನ್ನು ಮತ್ತಷ್ಟು ಸರಳೀಕರಣಗೊಳಿಸಲಾಗುವುದು. ಅಲ್ಲದೆ, ತೆರಿಗೆಗಳನ್ನು ಈಗಿರುವ ಪ್ರಮಾಣಕ್ಕಿಂತ ಶೇ.18ರಷ್ಟು ಕಡಿಮೆಗೊಳಿಸಲಾಗುವುದು ಎಂದು ಪ್ರಣಾಳಿಕೆ ತಿಳಿಸಿದೆ.

●ಏಂಜೆಲ್ ಟ್ಯಾಕ್ಸ್ ಸೇರಿದಂತೆ ದುಬಾರಿ ತೆರಿಗೆ ಪದ್ಧತಿಗಳನ್ನು ರದ್ದುಗೊಳಿಸಲಾಗುವುದು. ತೆರಿಗೆ ಪದ್ಧತಿಯಲ್ಲಿರುವ ಗೊಂದಲಗಳನ್ನು ನಿವಾರಿಸಲು ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

●ಯುವ ಉದ್ಯಮಿಗಳಿಗೆ ಪ್ರೋ ತ್ಸಾಹ ನೀಡಲು ಬಂಡವಾಳ ರೂಪದಲ್ಲಿ ಅವರಿಗೆ ನೀಡಲಾಗುವ ಸಾಲ ವಸೂಲಾತಿಯ ಗಡುವನ್ನು ಮೂರು ವರ್ಷಗಳಿಗೆ ವಿಸ್ತರಿಸಲಾಗುವುದು. ●ನವೋದ್ಯಮಿಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕಾಂಗ್ರೆಸ್ ಘೋಷಿಸಿದೆ.

ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ, ನಮ್ಮ ಎಲೆಕ್ಷನ್ ಮ್ಯಾನಿಫೆಸ್ಟ್ ಮುಚ್ಚಿದ ಕೊಠಡಿಯಲ್ಲಿ ಸಿದ್ಧಪಡಿಸಿದ್ದಲ್ಲ. ಇದಕ್ಕಾಗಿ ಸತತ ಒಂದು ವರ್ಷದಿಂದ ಶ್ರಮಿಸಲಾಗಿದೆ.

ಬಡತನ ನಿರ್ಮೂಲನೆ, ಆರೋಗ್ಯ ಸುಧಾರಣೆ, ಶಿಕ್ಷಣಕ್ಕೆ ಆದ್ಯತೆ, ನಿರುದ್ಯೋಗ ನಿವಾರಣೆ, ಕೃಷಿಕರ ಹಿತರಕ್ಷಣೆ ಸೇರಿದಂತೆ ಸಮಾಜದ ಎಲ್ಲ ವರ್ಗಗಳನ್ನೂ ಗಮನದಲ್ಲಿಟ್ಟುಕೊಂಡು ಪರಿಣಿತರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಚುನಾವಣಾ ಪ್ರಣಾಳಿಕೆ ಇದಾಗಿದೆ ಎಂದು ಹೇಳಿದರು.

error: Content is protected !! Not allowed copy content from janadhvani.com