janadhvani

Kannada Online News Paper

ಸೈನಿಕರ ತ್ಯಾಗವನ್ನು ಚುನಾವಣಾ ಅಸ್ತ್ರವಾಗಿ ಬಳಸಲಾಗುತ್ತಿದೆ- ಖರ್ಗೆ

ಸೇಡಂ: ‘ನಮ್ಮ ಯೋಧರು ಪಾಕಿಸ್ತಾನದ ಒಳಗಡೆ ನುಗ್ಗಿ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ದೇಶ ರಕ್ಷಣೆಗಾಗಿ ಮಾಡಿರುವ ಪ್ರತೀಕಾರದ ಸ್ರ್ಟೈಕ್’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಸುಮಾರು ₹54.48 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ₹9.97 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತಾಡಿದರು.

‘ಈ ಹಿಂದೆ ಯುಪಿಎ ಸರ್ಕಾರ ಇದ್ದಾಗಲೂ 5-6 ಬಾರಿ ದಾಳಿಗಳನ್ನು ಮಾಡಲಾಗಿತ್ತು. ಆದರೆ ನಾವು ಎಂದಿಗೂ ಪ್ರಚಾರ ಗಿಟ್ಟಿಸಿಕೊಂಡಿಲ್ಲ. ಆದರೆ ನರೇಂದ್ರ ಮೋದಿ ಅವರು ಏನೇ ಆದರೂ ಸಹ ನಮ್ಮದೇ ಎಂಬಂತೆ ವರ್ತಿಸುತ್ತಿದ್ದಾರೆ. ದೇಶದ ಅಭಿವೃದ್ಧಿ ಮತ್ತು ರಕ್ಷಣೆ ವಿಚಾರದಲ್ಲಿ ಎಲ್ಲಾ ಪಕ್ಷದವರು ಒಂದೇ. ಆದರೆ ಚುನಾವಣೆ ಬಂದಾಗ ಪಕ್ಷದ ಸಿದ್ಧಾಂತಕ್ಕೆ ಅನುಗಣವಾಗಿ ನಡೆಯಲಾಗುತ್ತದೆ’ ಎಂದರು.

ಸೈನಿಕರ ದಾಳಿಯನ್ನು ರಾಜಕೀಯಕ್ಕೆ ಬಳಸುತ್ತಿರುವ ಬಿಜೆಪಿ-ಪ್ರಿಯಾಂಕ್‌

ಕಲಬುರ್ಗಿ: ‘ಪಾಕಿಸ್ತಾನದ ಉಗ್ರರ ನೆಲೆ ಮೇಲೆ ನಮ್ಮ ಸೈನಿಕರು ಮಾಡಿದ ದಾಳಿಯನ್ನು ರಾಜಕೀಯಕ್ಕೆ ಬಳಸಿ ಕೊಳ್ಳುತ್ತಿರುವ ಬಿಜೆಪಿಗೆ ನಾಚಿಕೆ ಯಾಗಬೇಕು’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಟೀಕಿಸಿದರು.

‘ಪುಲ್ವಾಮಾ ದಾಳಿಯಾದಾಗ ಪ್ರಧಾನಿ ನರೇಂದ್ರ ಮೋದಿ ಫೋಟೊಶೂಟ್‌ನಲ್ಲಿದ್ದರು. ಈ ದಾಳಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಯಡಿಯೂರಪ್ಪ ಅವರು ರಫೇಲ್‌ ಹಗರಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇದ್ದಾಗಲೂ ನಮ್ಮ ಸೇನೆ ಆರು ಬಾರಿ ಇಂತಹ ದಾಳಿ ನಡೆಸಿತ್ತು. ನಾವೆಂದೂ ರಾಜಕೀಯ ಲಾಭಕ್ಕೆ ಅದನ್ನು ಬಳಸಿಕೊಳ್ಳಲಿಲ್ಲ. ಸೇನೆಗೆ ನಮ್ಮ ಬೆಂಬಲ ಸದಾ ಇರುತ್ತದೆ’ ಎಂದರು.

‘ಕಾಂಗ್ರೆಸ್‌ ಆಡಳಿತ ಇರುವ ರಾಜ್ಯಗಳಿಗೆ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡುವ ಮೂಲಕ ಮೋದಿ ಸರ್ಕಾರ ಅಭಿವೃದ್ಧಿ ವಿಷಯದಲ್ಲಿಯೂ ವೈಯಕ್ತಿಕ ದ್ವೇಷ ಸಾಧಿಸುತ್ತಿದೆ. ಈ ಕಾರಣಕ್ಕಾಗಿಯೇ ಕಲಬುರ್ಗಿಯಲ್ಲಿ ರೈಲ್ವೆ ವಿಭಾಗ ಆರಂಭಿಸುತ್ತಿಲ್ಲ’ ಎಂದು ಹರಿಹಾಯ್ದರು.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!