janadhvani

Kannada Online News Paper

ಗಡಿಯಲ್ಲಿ ಪಾಕ್ ಸೇನೆಯ ಗುಂಡಿನ ದಾಳಿ-ಇಬ್ಬರು ಮಕ್ಕಳು ಮತ್ತು ಮಹಿಳೆ ಬಲಿ

ಶ್ರೀನಗರ, ಮಾ.2- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪಾಕಿಸ್ತಾನಿ ಸೇನಾಪಡೆಗಳ ಪುಂಡಾಂಟ ಮುಂದುವರೆದಿದೆ. ಗಡಿಭಾಗದಲ್ಲಿ ಕದನವಿರಾಮ ಉಲ್ಲಂಘಿಸಿ ಪಾಕ್ ಯೋಧರು ಕಳೆದ 9ದಿನಗಳಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದಾರೆ.
ಇಂದು ಪಾಕಿಸ್ತಾನ ಸೇನೆ ಕ್ರೌರಕ್ಕೆ ಇಬ್ಬರು ಮಕ್ಕಳು ಮತ್ತು ಮಹಿಳೆ ಬಲಿಯಾಗಿದ್ದಾರೆ.ಈ ಘಟನೆಯಲ್ಲಿ ಇನ್ನೂ ಕೆಲವರು ಗಾಯಗೊಂಡಿದ್ದು, ಗಡಿಭಾಗದ ಮನಗೆಗಳಿಗೆ ಹಾನಿಯಾಗಿದೆ.

ಕಳೆದ 8ದಿನಗಳಿಂದ ಕಾಶ್ಮೀರ ಕಣಿವೆಯಿಂದ ಗಡಿನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಸೇನೆಯ ಮುಂಚೂಣಿ ನೆಲೆಗಳು ಮತ್ತು ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಪಾಕ್ ರೇಂಚರ್‍ಗಳು ಶೆಲ್ ಮತ್ತು ಗುಂಡಿನ ದಾಳಿ ನಡೆಸುತ್ತಿದ್ದು ಅದು ಇಂದು ಸಹ ಮುಂದುವರೆದಿದೆ. ಪೂಂಚ್ ಜಿಲ್ಲೆಯ ಕೃಷ್ಣಾಘಾಟಿಯ ಎಲ್‍ಒಸಿ ಬಳಿ ನಿನ್ನೆ ರಾತ್ರಿಯಿಂದ ಪಾಕ್ ಯೋಧರು ನಿರಂತರ ಗುಂಡಿನ ದಾಳಿ ನಡೆಸಿದರು.
ಈ ಕುಕೃತ್ಯದಲ್ಲಿ 9ವರ್ಷದ ಹಸುಳೆ, 5ವರ್ಷದ ಮಗು ಹಾಗೂ ಓರ್ವ ಮಹಿಳೆ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ಪಾಕಿಸ್ತಾನದ ದಾಳಿಗೆ ಭಾರತೀಯ ಯೋಧರು ಪ್ರತಿ ಆಕ್ರಮಣದ ಮೂಲಕ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com