janadhvani

Kannada Online News Paper

ಮೊಬೈಲ್ ಸಿಮ್, ಬ್ಯಾಂಕ್ ಖಾತೆಗೆ ಆಧಾರ್ ಕಡ್ಡಾಯವಲ್ಲ

ನವದೆಹಲಿ: ಮೊಬೈಲ್​ ಸಿಮ್  ಪಡೆಯಲು ಮತ್ತು ಬ್ಯಾಂಕ್​ ಖಾತೆ ತೆರೆಯಲು ಆಧಾರ್​ ಸಂಖ್ಯೆ ಕಡ್ಡಾಯವಲ್ಲ ಎಂದು  ಸಚಿವ ಸಂಪುಟ ಸಭೆಯಲ್ಲಿ ಕಾನೂನನ್ನು ತಿದ್ದುಪಡಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ದೇಶದ ಎಲ್ಲ ವ್ಯವಹಾರಗಳಿಗೂ ಆಧಾರ್​ ಸಂಖ್ಯೆ ನೀಡುವುದು ಕಡ್ಡಾಯ ಎಂಬ ನಿಯಯ ಜಾರಿಗೊಂಡ ನಂತರ ಜನರ ಖಾಸಗಿತನದ ಬಗ್ಗೆ ಪ್ರಶ್ನೆಯೆದ್ದಿತ್ತು. ಈ ಹಿನ್ನೆಲೆಯಲ್ಲಿ ಆಧಾರ್​ ಸಾಂವಿಧಾನಿಕ ಮಾನ್ಯತೆ ಕುರಿತು ಕಳೆದ ಸೆಪ್ಟೆಂಬರ್​ನಲ್ಲಿ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿತ್ತು. ಆ ಕುರಿತು ಕಾನೂನು ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಟೆಲಿಗ್ರಾಫ್ ಆಕ್ಟ್ ಮತ್ತು ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯಿದೆಯ ತಿದ್ದುಪಡಿಗಾಗಿ ಪ್ರಸ್ತಾವಿತ ಮಸೂದೆಗಳ ಕರಡುವನ್ನು ಕ್ಯಾಬಿನೆಟ್ ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಇನ್ಮುಂದೆ ಬ್ಯಾಂಕ್ ಖಾತೆ ತೆರೆಯಲು ಹಾಗೂ ಮೊಬೈಲ್ ಸಂಪರ್ಕ ಪಡೆಯಲು ಆಧಾರ್ ಕೊಡುವ ಅಗತ್ಯವಿಲ್ಲದಂತಾಗಿದೆ. 

ಸೆಪ್ಟೆಂಬರ್ 26ರಂದು ಈ ಬಗ್ಗೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಆಧಾರ್ ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿತ್ತು. ಬ್ಯಾಂಕ್ ಖಾತೆ, ಮೊಬೈಲ್ ಸಂಪರ್ಕಕ್ಕೆ ಆಧಾರ್ ಕಡ್ಡಾಯವಲ್ಲ ಎಂದು ಹೇಳಿತ್ತು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 
ಸರ್ಕಾರಿ ಯೋಜನೆಗಳಾದ ಪಿಎಂ ಅವಾಸ್​ ಯೋಜನೆ, ಸುಕನ್ಯಾ ಯೋಜನೆಯಂತಹ ಎಲ್ಲ ಯೋಜನೆಗಳಿಗೆ ಹಾಗೂ ಆದಾಯ ತೆರಿಗೆ ಸಲ್ಲಿಕೆಗೆ ಆಧಾರ್​ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆಯಬೇಕು. ಹಾಗೂ ಅದರ ಜೊತೆಗೆ ಪಾನ್​ ಕಾರ್ಡ್​ ಲಿಂಕ್​ ಮಾಡಬೇಕು. ಆದರೆ, ಬ್ಯಾಂಕ್​ ಖಾತೆ ತೆರೆಯಲು, ಮೊಬೈಲ್​ ಸಿಮ್​ ಪಡೆಯಲು, ಶಾಲಾ ಮಕ್ಕಳಿಗೆ ಅಡ್ಮಿಷನ್​ ಮಾಡಿಸಲು, ಯುಜಿಸಿ, ನೀಟ್​ ಮುಂತಾದ ಪರೀಕ್ಷೆಗಳಿಗೆ ಆಧಾರ್​ ಸಂಖ್ಯೆ ಕಡ್ಡಾಯವಲ್ಲ ಎಂದು ನ್ಯಾ. ದೀಪಕ್​ ಮಿಶ್ರಾ ತೀರ್ಪು ನೀಡಿದ್ದರು.

ಆಧಾರ್ ಆಕ್ಟ್ ನ ಸೆಕ್ಷನ್ 57 ರನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಈ ಆಕ್ಟ್ ಬ್ಯಾಂಕ್ ಖಾತೆ, ಮೊಬೈಲ್ ಸಂಪರ್ಕಕ್ಕೆ ಆಧಾರ್ ಅನಿವಾರ್ಯ ಎಂದು ಹೇಳುತ್ತಿತ್ತು. ಇದು ಆಧಾರ್ ಮೂಲಕ ಸಿಮ್ ಕಾರ್ಡ್ ಅನ್ನು ವಿತರಿಸುವ ಕಾನೂನು ಬೆಂಬಲವನ್ನು ಒದಗಿಸುತ್ತದೆ. ಅಂತೆಯೇ, ಮನಿ ಲಾಂಡರಿಂಗ್ ಪ್ರಿವೆನ್ಷನ್ ಆಕ್ಟ್ ತಿದ್ದುಪಡಿ ಬ್ಯಾಂಕ್ ಖಾತೆಗಳಿಂದ ಆಧಾರ್ ಸಂಖ್ಯೆಯನ್ನು ಜೋಡಿಸಲು ಹೇಳುತ್ತಿತ್ತು. ಈ ಸಮಸ್ಯೆಯನ್ನು ತೊಡೆದುಹಾಕಲು ಈಗ ಟೆಲಿಗ್ರಾಫ್ ಆಕ್ಟ್ ತಿದ್ದುಪಡಿ ಮಾಡಲಾಗುತ್ತಿದೆ.  

ಇದಲ್ಲದೆ, ಆಧಾರ್ ಮಾಹಿತಿ ಸೋರಿಕೆಗೆ ಯತ್ನಿಸಿದರೆ ಈ ವರೆಗೂ ಇರುವ ಮೂರು ವರ್ಷಗಳ ಜೈಲು ಶಿಕ್ಷೆಯನ್ನು 10 ವರ್ಷಗಳ ವರೆಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

error: Content is protected !! Not allowed copy content from janadhvani.com