ನವದೆಹಲಿ: ಬಹುಪತ್ನಿತ್ವಕ್ಕಿಂತಲೂ ಅಯೋಧ್ಯೆ ಬಾಬರೀ ಮಸೀದಿ ವಿವಾದ ದೊಡ್ಡದು ಎಂದು ಉಲ್ಲೇಖಿಸಿರುವ ಮನವಿಯೊಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ಸಲ್ಲಿಕೆಯಾಗಿದೆ. ಮುಸ್ಲಿಂ ಸಮುದಾಯದ ಪರ ವಕೀಲರಾದ ರಾಜೀವ್ ಧವನ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠದ ಮುಂದೆ ಈ ಮನವಿ ಮಾಡಿದ್ದಾರೆ.
“ಅಯೋಧ್ಯೆ ಭೂ ವಿವಾದವು ಮುಸ್ಲಿಮರಲ್ಲಿ ಬಹುಪತ್ನಿತ್ವಕ್ಕಿಂತ ಹೆಚ್ಚು ಮುಖ್ಯವಾಗಿದೆ ಮತ್ತು ಇಡೀ ರಾಷ್ಟ್ರವು ಉತ್ತರವನ್ನು ಬಯಸಿದೆ. ಈ ಕಾರಣಕ್ಕೆ ವಿಚಾರಣೆಯನ್ನು ಉನ್ನತ ನ್ಯಾಯಪೀಠಕ್ಕೆ ವರ್ಗಾಯಿಸಬೇಕು” ಎಂದು ಧವನ್ ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಮನವಿ ಆಲಿಸಿದ ನ್ಯಾಯಪೀಠವು ಎಲ್ಲಾ ಪಕ್ಷಗಳ ವಿಚಾರಣೆಗಳನ್ನು ಕೇಳಿದ ಬಳಿಕ ಪ್ರಕರಣವನ್ನು ಉನ್ನತ ಪೀಠಕ್ಕೆ ವರ್ಗಾಯಿಸಲುವ ಕುರಿತಂತೆ ನಿರ್ಧಾರ ತೆಗೆದುಕೊಲ್ಳಲಿದೆ ಎಂದು ತಿಳಿಸಿದೆ.
ನಾಲ್ಕು ನಾಗರಿಕ ಪ್ರಕರಣಗಳ ವಿಚಾರಣೆ ನಡೆಸಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಒಟ್ಟು 14 ಮನವಿಗಳನ್ನು ಸುಪ್ರೀಂ ಕೋರ್ಟ್ ನ ವಿಶೇಷ ಪೀಠ ಆಲಿಸಲಿದೆ.ಈ ಹಿಂದಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಅಯೋಧ್ಯೆ ವಿವಾದ ಸಂಬಂಧ ಮೂಲ ಮೊಕದ್ದಮೆಗಳಿಗೆ ಸಂಬಂಧಿಸಿ ಮಾತ್ರವೇ ಪಕ್ಷಗಳು ತಮ್ಮ ವಾದ ಮಂಡನೆಗೆ ಅವಕಾಶ ನಿಡಲಾಗುವುದು ಎಂದಿದ್ದು ಮಧ್ಯಸ್ಥಿಕೆದಾರರಿಂದ ಸಲ್ಲಿಕೆಯಾಗಿದ್ದ ಒಟ್ಟು 32 ಅರ್ಜಿಗಳನ್ನು ವಜಾಗೊಳಿಸಿತ್ತು.
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಮೂವರು ನ್ಯಾಯಾಧೀಶರ ಪೀಠವು ವಿವಾದಿತ ಭೂಮಿಯು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರಾ ಮತ್ತು ರಾಮ್ ಲಾಲ್ಲಾ – ಈ ಪಕ್ಷಗಳ ನಡುವೆ ವಿಭಜನೆಯಾಗಬೇಕೆಂದು ಆದೇಶಿಸಿತ್ತು.