janadhvani

Kannada Online News Paper

ಅಖಿಲ ಭಾರತ ಮುಷ್ಕರದ ಅಂಗವಾಗಿ ತೊಕ್ಕೊಟುವಿನಲ್ಲಿ ಪ್ರತಿಭಟನಾ ಸಭೆ

ತೊಕ್ಕೊಟ್ಟು, ನ. 26:ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಇಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟ (JCTU)ದ ನೇತೃತ್ವದಲ್ಲಿ ಕರೆ ನೀಡಿದ್ದ ಅಖಿಲ ಭಾರತ ಮಹಾಮುಷ್ಕರದ ಭಾಗವಾಗಿ ತೊಕ್ಕೊಟ್ಟು ಒಳಪೇಟೆ ಅಂಬೇಡ್ಕರ್ ಮೈದಾನದ ಮುಂಭಾಗದಿಂದ ಮೆರವಣಿಗೆ ಹೊರಟ ಸಿಐಟಿಯು, DYFI, CWFI, ಕೋಟೆಕಾರ್ ಸರ್ಕಲ್ ಬೀಡಿ ಲೇಬರ್ ಯೂನಿಯನ್, ಜನವಾದಿ ಮಹಿಳಾ ಸಂಘಟನೆ, ಬಿಸಿಯೂಟ ನೌಕರರ ಸಂಘ, ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಕಾರ್ಯಕರ್ತರು ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಸಭೆ ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕರನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲಿಯಾನ್ ಕೋವಿಡ್ ಮೆರೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಜನವಿರೋಧಿ ಮಸೂದೆಗಳನ್ನು ಮಂಡಿಸಿವೆ. ಇವು ಕೇವಲ ಕಾರ್ಪೊರೇಟ್ ಕಂಪೆನಿಗಳ ಹಿತಕಾಯುವ ಉದ್ದೇಶದಿಂದ ಮಂಡಿಸಲಾಗಿದ್ದು ಇವು ದುಡಿಯುವ ವರ್ಗದ ಜನರ ಪಾಲಿಗೆ ಮರಣಶಾಸನವಾಗಲಿದೆ ಎಂದರು.

ಸಭೆನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ದಕ ಜಿಲ್ಲೆಯ ಅಭಿವೃದ್ದಿಯ ಹರಿಕಾರರಾಗಿದ್ದ ಉಳ್ಳಾಲ್ ಶ್ರೀನಿವಾಸ್ ಮಲ್ಯ ಅವರ ಪರಿಶ್ರಮದಿಂದ ನಿರ್ಮಾಣವಾದ ವಿಮಾನ ನಿಲ್ದಾಣವನ್ನು ಮೋದಿ ಸರ್ಕಾರ ಅದಾನಿಗೆ ಕೊಡುವ ಮೂಲಕ ಜಿಲ್ಲೆಯ ಜನರ ಅಸ್ಮಿತೆಗೆ ಧಕ್ಕೆ ತಂದಿದೆ. ಇನ್ನು ಜಿಲ್ಲೆಯ ಕೆಲ ಪಕ್ಷಗಳು ವಿಮಾನ ನಿಲ್ದಾಣದಕ್ಕೆ ಕೋಟಿ ಚೆನ್ನಯ್ಯ, ತುಳುನಾಡು, ರಾಣಿ ಅಬ್ಬಕ್ಕ ಹೆಸರಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಕೇವಲ ಜಿಲ್ಲೆಯ ಮಹಾಪುರುಷರ ಹೆಸರಿಟ್ಟರೆ ಸಾಲದು. ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿಯಿಂದ ವಾಪಾಸ್ಸು ಪಡೆದು ಜಿಲ್ಲೆಯ ಮಹಾಪುರುಷರ ಹೆಸರು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡ ಜಯಂತ್ ನಾಯ್ಕ್ , ಪದ್ಮಾವತಿ ಶೆಟ್ಟಿ, ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ, ಉಳ್ಳಾಲ ವಲಯ ಸಮಿತಿಯ ಕಾರ್ಯದರ್ಶಿ ಸುನಿಲ್ ತೇವುಲ, ಪದಾಧಿಕಾರಿಗಳಾದ ರಝಾಕ್ ಮೊಂಟೆಪದವು, ಸಂಕೇತ್ ಕಂಪ, ಕಾರ್ತಿಕ್ ಕುತ್ತಾರ್, ರಝಾಕ್ ಮುಡಿಪು, ನವಾಜ್ ದೇರಳಕಟ್ಟೆ, ಅಶ್ರಫ್ ಹರೇಕಳ, ಸಿಪಿಐಎಂ ಮುಖಂಡರಾದ ಮಹಾಬಲ ದೆಪ್ಪಳಿಮಾರ್, ಇಬ್ರಾಹಿಂ ಮದಕ, ದಲಿತ ಹಕ್ಕುಗಳ ಸಮಿತಿಯ ನಾರಾಯಣ ತಲಪಾಡಿ, ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಜಗದೀಶ್ ನಾಯ್ಕ್ ದೇರಳಕಟ್ಟೆ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com