ಮುನ್ನಾರ್, ಆ.9- ಕೇರಳದ ವಿವಿಧ ಜಿಲ್ಲೆಗಳು ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳಿಂದ ತತ್ತರಿಸಿ ಸಾವು-ನೋವು ಹೆಚ್ಚಾಗುತ್ತಲೇ ಇವೆ. ಕೇರಳದ ವಿವಿಧೆಡೆ ನೆರೆ ಹಾವಳಿಯಿಂದ ಈವರೆಗೆ 36 ಮಂದಿ ಮೃತಪಟ್ಟಿದ್ಧಾರೆ.
ಕುಂಭ್ರದ್ರೋಣ ಮಳೆಯಿಂದ ಕೇರಳ ತತ್ತರಿಸಿದ್ದು, ಇಡುಕಿ ಜಿಲ್ಲೆಯ ಮೂನ್ನಾರ್ ಪರ್ವತಸ್ತೋಮದ ಪೆಟ್ಟಿಮುಡಿಯಲ್ಲಿ ಮೊನ್ನೆ ನಸುಕಿನಲ್ಲಿ ಭೂಕುಸಿತಗಳು ಸಂಭವಿಸಿದ್ದು, ಮೃತರ ಸಂಖ್ಯೆ 28ಕ್ಕೇರಿದೆ.
ಈ ದುರ್ಘಟನೆಯಲ್ಲಿ ಸುಮಾರು 50 ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಗುಡ್ಡ ಮತ್ತು ಭೂಕುಸಿತಗಳಿಂದಾಗಿ ಕಣ್ಣನ್ ದೇವನ್ ಚಹಾ ತೋಟಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಒಂದೇ ಕುಟುಂಬದ 80ಕ್ಕೂ ಹೆಚ್ಚು ಕಾರ್ಮಿಕರು ಮಣ್ಣಿನ ಆವಶೇಷಗಳಡಿ ಸಿಲುಕಿದರು.
ಈವರೆಗೆ 28 ಮೃತ ದೇಹಗಳನ್ನು ಹೊರ ತೆಗೆಯಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಇಡುಕ್ಕಿ ಜಿಲ್ಲೆಯ ರಾಜಮಾಲಾ ಮತ್ತು ಮೂನ್ನಾರ್ ಪರ್ವತ ಶ್ರೇಣಿಯ ಪೆಟ್ಟಿಮುಡಿಯ ಹಲವೆಡೆ ನಿನ್ನೆ ಕೂಡ ಧಾರಾಕಾರ ಮಳೆಯಿಂದ ಭೂಕುಸಿತಗಳು ಸಂಭವಿಸಿವೆ.
ಕೇರಳದ ಹಲವು ಜಿಲೆಗಳಲ್ಲಿ ವರುಣಾಸುರನ ಆರ್ಭಟ ತೀವ್ರಗೊಂಡಿದೆ. ಇಡುಕ್ಕಿ, ಪಾಲಾಕ್ಕಾಡ್, ತ್ರಿಶೂರ್, ವಯನಾಡ್, ಕಣ್ಣೂರು, ಗುರುವಾಯೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆ, ಭೀಕರ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿದ್ದು, ಸಾವು-ನೋವಿ ಮತ್ತು ಭಾರೀ ಹಾನಿಯ ವರದಿಯಾಗಿದೆ.
ಮುಂದಿನ 24 ತಾಸುಗಳಲ್ಲಿ ಕೇರಳದ ವಿವಿಧೆಡೆ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
