janadhvani

Kannada Online News Paper

ಏರ್‌ಟೆಲ್, ವೊಡಾಫೋನ್, ಐಡಿಯಾ: ಪ್ರೀಮಿಯಂ ಪ್ಲಾನ್ ಗೆ ಟ್ರಾಯ್ ತಡೆ

ನವದೆಹಲಿ: ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದ ಆದ್ಯತೆಯ ವೇಗದ ಡೇಟಾ ನೀಡುವ ನಿರ್ದಿಷ್ಟ ಯೋಜನೆಗಳಿಗೆ (ಪ್ಲ್ಯಾನ್‌) ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತಡೆ ನೀಡಿದೆ.

ಭಾರ್ತಿ ಏರ್‌ಟೆಲ್ ಟೆಲಿಕಾಂ ಕಂಪನಿಯ ಪ್ಲಾಟಿನಂ ಹಾಗೂ ವೊಡಾಫೋನ್ ಐಡಿಯಾದ ರೆಡ್‌ಎಕ್ಸ್‌ ಪ್ಲ್ಯಾನ್‌ಗೆ ತಡೆ ನೀಡುವಂತೆ ಟ್ರಾಯ್‌ ಸೂಚಿಸಿದೆ. ಈ ಎರಡು ಪ್ಲ್ಯಾನ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಗ್ರಾಹಕರಿಗೆ ವೇಗದ ಡೇಟಾ ಮತ್ತು ಆದ್ಯತೆಯ ಸೇವೆ ಒದಗಿಸುವ ಉದ್ದೇಶ ಇತ್ತು. ಇದರಿಂದ ಇತರೆ ಪ್ಲ್ಯಾನ್‌ಗಳ ಚಂದದಾರರಿಗೆ ಗುಣಮಟ್ಟದಲ್ಲಿ ತೊಂದರೆಯಾಗುವ ಸಾಧ್ಯತೆಗಳಿವೆ ಎಂದು ಟ್ರಾಯ್‌ ಹೇಳಿದೆ.

ಹೆಚ್ಚಿನ ದರ ಪಾವತಿಸುವ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಈ ರೀತಿ ಸೇವೆ ಒದಗಿಸುವುದಾಗಿ ಏರ್‌ಟೆಲ್‌ ಹೇಳಿದ್ದು, ಜುಲೈ 6ರಂದು‌ 499 ಅಥವಾ ಮೇಲ್ಪಟ್ಟ ಪ್ರೀಮಿಯಂ ಪಡೆಯುವ ಗ್ರಾಹಕರಿಗೆ 4G ವೇಗದ ಡೇಟಾ ಹಾಗೂ ಇನ್ನಿತರ ಆದ್ಯತೆ ಸೇವೆಗಳನ್ನು ಒದಗಿಸುವುದಾಗಿ ಪ್ರಕಟಿಸಿತ್ತು. ವೊಡಾಫೋನ್ 2019ರಲ್ಲಿ 999ರ ಪ್ಲ್ಯಾನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದರಲ್ಲಿ ಹೆಚ್ಚು ವೇಗ ಮತ್ತು ವಿಶೇಷ ಸೇವೆಗಳನ್ನು ನೀಡುವ ಆಫರ್ ನೀಡಿದೆ.

ಈ ಬಗ್ಗೆ ಟೆಲಿಕಾಂ ವಿಶ್ಲೇಷಕರೊಬ್ಬರು ಪ್ರತಿಕ್ರಿಯೆ ನೀಡಿದ್ದು ದುಬಾರಿ ಹಣ ನೀಡುವ ಗ್ರಾಹಕರು ಹೆಚ್ಚಿನ ವೇಗ ಮತ್ತು ಇತರೆ ಸೇವೆಗಳನ್ನು ಪಡೆದುಕೊಳ್ಳುತ್ತಾರೆ. ಇದರಿಂದ ನೆಟ್‌ ನ್ಯೂಟ್ರಾಲಿಟಿಯ ಯಾವುದೇ ನಿಯಮಗಳು ಉಲ್ಲಂಘನೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಯು ಈತನಕ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

error: Content is protected !! Not allowed copy content from janadhvani.com