janadhvani

Kannada Online News Paper

ನಿಷೇಧಿತ ಚೈನೀಸ್ ಆ್ಯಪ್‌ಗಳು ನಿಮ್ಮ ಮೊಬೈಲ್ನಲ್ಲಿದ್ದರೆ ಏನು ಮಾಡಬೇಕು?

ನವದೆಹಲಿ: ಭಾರತೀಯರ ಮೊಬೈಲ್ ಫೋನ್‌ಗಳಲ್ಲಿ ಹಾಸುಹೊಕ್ಕಾಗಿದ್ದ ಚೀನಾ ಮೂಲದ ಟಿಕ್‌ಟಾಕ್, ಹೆಲೋ, ಶೇರ್‌ಇಟ್, ಕ್ಯಾಮ್‌ಸ್ಕ್ಯಾನರ್, ಯುಸಿ ನ್ಯೂಸ್ ಸೇರಿದಂತೆ 59 ಆ್ಯಪ್‌ಗಳ ಬಳಕೆಯನ್ನು ಭಾರತ ಸರ್ಕಾರ ನಿಷೇಧಿಸಿದ್ದು, ಬಳಕೆದಾರರ ಮೇಲೆ ಏನು ಪರಿಣಾಮ? ಈ ಆ್ಯಪ್ ಇದ್ದವರು ಏನು ಮಾಡಬಹುದು? ಈ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತ ಸರ್ಕಾರ ಹೇರಿದ ನಿಷೇಧದ ಪರಿಣಾಮ, ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್‌ನ ಆ್ಯಪ್ ಸ್ಟೋರ್‌ಗಳಿಂದ ಟಿಕ್‌ಟಾಕ್ ಮತ್ತು ಹೆಲೋ ಆ್ಯಪ್‌ಗಳು ಮಾಯವಾಗಿವೆ. ಉಳಿದ 57 ಆ್ಯಪ್‌ಗಳೂ ನಿಧಾನವಾಗಿ ಮರೆಯಾಗಬಹುದು. ಭಾರತದಲ್ಲಿ ಸುಮಾರು 10 ಕೋಟಿ ಟಿಕ್‌ಟಾಕ್ ಸಕ್ರಿಯ ಬಳಕೆದಾರರಿದ್ದು, ‘ಸೆನ್ಸರ್ ಟವರ್’ ವರದಿಯ ಪ್ರಕಾರ, ಟಿಕ್‌ಟಾಕ್‌ನ ಜಾಗತಿಕ ಬಳಕೆದಾರರಲ್ಲಿ ಭಾರತದ ಪಾಲು ಭರ್ಜರಿ ಶೇ.30!

ನಿಷೇಧ ಹೇಗೆ?
ಚೀನಾದ ಬೈಟ್‌ಡ್ಯಾನ್ಸ್ ಕಂಪನಿಯ ಟಿಕ್‌ಟಾಕ್ ವಿಡಿಯೊ ಆ್ಯಪ್ ಯುವಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ಪೋಷಕರ ಮೊರೆಯನ್ನು ಆಲಿಸಿ ಮದ್ರಾಸ್ ಹೈಕೋರ್ಟ್ ಕಳೆದ ವರ್ಷ ಅದಕ್ಕೆ ನಿರ್ಬಂಧ ವಿಧಿಸಿದ್ದು ಹೇರಿದ್ದು, ಕೆಲವೇ ದಿನದಲ್ಲಿ ನಿಷೇಧ ತೆರವಾಗಿತ್ತು. ಇತ್ತೀಚೆಗೆ ಚೀನಾ ಗಡಿಯಲ್ಲಿ ಬಿಕ್ಕಟ್ಟು ಉಲ್ಬಣವಾದಾಗ, #BanTikTok ಟ್ರೆಂಡ್ ಆಗಿ, ಲಕ್ಷಾಂತರ ಬಳಕೆದಾರರು ಅನ್‌ಇನ್‌ಸ್ಟಾಲ್ ಮಾಡಿ, ಪ್ಲೇ ಸ್ಟೋರ್‌ನಲ್ಲಿ ರೇಟಿಂಗ್ ಅನ್ನೂ ತಗ್ಗಿಸಿದ್ದರು; ಕೆಲವೇ ದಿನಗಳಲ್ಲಿ ಅದು ಚೇತರಿಸಿಕೊಂಡಿತ್ತು. ಆದರೆ ಈ ಬಾರಿ ಸರ್ಕಾರ ಕೈಗೊಂಡಿರುವ ಈ ಕ್ರಮದ ಹಿಂದೆ ‘ರಾಷ್ಟ್ರೀಯ ಭದ್ರತೆ’ ಎಂಬೊಂದು ಅಂಶದ ಬಲವಿದೆ.

ಈಗಾಗಲೇ ಆ್ಯಪ್‌ಗಳಿದ್ದರೆ?
ಆ್ಯಪ್ ಸ್ಟೋರ್‌ಗಳಿಂದ ಡಿಲೀಟ್ ಆದರೂ, ಈಗಾಗಲೇ ಅಳವಡಿಸಿಕೊಂಡವರಲ್ಲಿ ಅದು ಬೇರೆ ಸರ್ವರ್‌ಗೆ ಸಂಪರ್ಕವಾಗಿ ಕೆಲಸ ಮಾಡಬಹುದಲ್ಲಾ? ಅದಕ್ಕಾಗಿ ಅವುಗಳಿಗೆ ಸಂಪರ್ಕ ನಿರ್ಬಂಧಿಸುವಂತೆ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಏರ್‌ಟೆಲ್, ಜಿಯೋ, ವೊಡಾಫೋನ್ ಮುಂತಾದ ಇಂಟರ್ನೆಟ್ ಸೇವಾದಾತರಿಗೆ (ISPಗಳು) ಸೂಚನೆ ರವಾನಿಸಲಿದೆ. ಆಗ, ಆ್ಯಪ್ ತೆರೆಯಲು ಹೋದರೆ, ‘ಸರ್ಕಾರದ ಸೂಚನೆಯನುಸಾರ ಇದನ್ನು ಬಳಸುವಂತಿಲ್ಲ’ ಎಂಬ ಸಂದೇಶವೊಂದು ಕಾಣಿಸಬಹುದು. ಹೀಗಾಗಿ ಸರ್ವರ್ ಸಂಪರ್ಕ ಅಗತ್ಯವಿರುವ ಆ್ಯಪ್‌ಗಳು ಕೆಲಸ ಮಾಡಲಾರವು.

ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್‌ನಲ್ಲಿ ಮುಂದೆ ಈ ಚೈನೀಸ್ ಆ್ಯಪ್‌ಗಳು ದೊರೆಯುವುದಿಲ್ಲವಾದರೂ, ಸಾಕಷ್ಟು ಅನ್ಯ ತಾಣಗಳಲ್ಲಿ ಅವುಗಳ APK ಫೈಲ್‌ಗಳು ದೊರೆಯುತ್ತವೆ. ನಿಷೇಧವಿದ್ದರೂ ಸುತ್ತಿ ಬಳಸಿ ಅದನ್ನು ಬಳಸುವ ವಿಧಾನವು ತಂತ್ರಜ್ಞರಿಗೆ ಗೊತ್ತಿದೆ. ಈಗಾಗಲೇ ಟಿಕ್‌ಟಾಕ್ ಆ್ಯಪ್ ಇರುವವರು ವಿಡಿಯೊಗಳನ್ನು ರಚಿಸಿದರೂ, ಅವರ ಖಾತೆಯಲ್ಲಿ ಶೇರ್ ಮಾಡಲಾಗದು; ಬೇರೆ ತಾಣಗಳಲ್ಲಿ ಹಂಚಿಕೊಳ್ಳಬಹುದು.

ದೂರಗಾಮಿ ಪರಿಣಾಮ
ಮಾಹಿತಿ ತಂತ್ರಜ್ಞಾನ ಕಾಯಿದೆ 2009 – ಇದರ 69ಎ ವಿಧಿಯಲ್ಲಿ ಪ್ರದತ್ತವಾಗಿರುವ ಅಧಿಕಾರ ಬಳಸಿ ನಿಷೇಧ ಆದೇಶ ಹೊರಬಂದಿದೆ. ಭಾರತೀಯರ ಮಾಹಿತಿಯು ಹೊರ ದೇಶದ, ವಿಶೇಷವಾಗಿ ಚೀನಾದ ಸರ್ವರ್‌ನಲ್ಲಿ ದಾಖಲಾಗಿ, ದೇಶದ ಸಾರ್ವಭೌಮತೆಗೆ ಧಕ್ಕೆಯಾಗುತ್ತದೆ ಎಂಬ ಬಗ್ಗೆ ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ. ಇದರ ಮೂಲೋದ್ದೇಶ ಭಾರತ-ಚೀನಾ ಗಡಿ ವಿವಾದದಲ್ಲಿ ಚೀನಾಕ್ಕೊಂದು ಸ್ಪಷ್ಟ ಸಂದೇಶ ನೀಡುವುದೇ ಆದರೂ, ಚೀನಾದ ಹೂಡಿಕೆಯ ಮೇಲೆ ಪರಿಣಾಮ ಬೀರುವುದಂತೂ ಸತ್ಯ. ಚೀನಾ ವಾಣಿಜ್ಯ ಸಚಿವಾಲಯದ ಪ್ರಕಾರ, ಭಾರತದಲ್ಲಿ ಚೀನಾ ಕಂಪನಿಗಳ ಹೂಡಿಕೆ 800 ಕೋಟಿ ಡಾಲರ್‌ಗೂ ಹೆಚ್ಚು. ಹೀಗಾಗಿ ಚೈನೀಸ್ ಉತ್ಪನ್ನಗಳ ನಿಷೇಧವು ಆರ್ಥಿಕವಾಗಿ ಉಭಯ ದೇಶಗಳ ಮೇಲೂ ಪರಿಣಾಮ ಬೀರುತ್ತದೆ.

ಜೊತೆಗೆ, ಈ ಆ್ಯಪ್‌ಗಳ ಭಾರತೀಯ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಉದ್ಯೋಗ ನಷ್ಟವಾಗಬಹುದು. ಭಾರತೀಯ ಸ್ಟಾರ್ಟಪ್‌ಗಳಲ್ಲಿ ಈಗಾಗಲೇ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ ಚೀನಾ ಕಂಪನಿಗಳು ಇನ್ನಷ್ಟು ಹೂಡಿಕೆ ಮಾಡಲು ಹಿಂಜರಿಯುವ ಸಾಧ್ಯತೆಗಳಿವೆ. ಟಿಕ್‌ಟಾಕ್‌ನಲ್ಲಿ ರಾತ್ರಿ-ಬೆಳಗಾಗುವುದರೊಳಗೆ ಖ್ಯಾತರಾಗಿ, ಸಾಮಾಜಿಕ ಜಾಲತಾಣದಲ್ಲಿ ‘ಪ್ರಭಾವಿಗಳು’ (ಇನ್‌ಫ್ಲುಯೆನ್ಸರ್‌ಗಳು) ಎಂದು ಗುರುತಿಸಿಕೊಂಡವರು ಈಗಾಗಲೇ ಇನ್‌ಸ್ಟಾಗ್ರಾಂಗೆ ಬನ್ನಿ ಅಂತ ತಮ್ಮ ಬಳಕೆದಾರರಿಗೆ ಕರೆ ನೀಡಲಾರಂಭಿಸಿದ್ದಾರೆ.

ಚೀನಾದಲ್ಲಿ ಟ್ವಿಟರ್, ಫೇಸ್‌ಬುಕ್, ಗೂಗಲ್ ಮ್ಯಾಪ್ಸ್ ಮುಂತಾದವುಗಳಿಗೆ ನಿಷೇಧವಿದೆ. ಚೀನಾವಂತೂ ಇಂಟರ್ನೆಟ್‌ಗೆ ಕಡಿವಾಣ ಹಾಕುವಲ್ಲಿ ಮೇಲುಗೈ. ಅಲ್ಲಿ ಸರ್ಕಾರಿ ವಿಪಿಎನ್ ಮೂಲಕವೇ ಬೇರೆ ಸೈಟುಗಳನ್ನು ನೋಡಬೇಕು ಮತ್ತು ಎಲ್ಲದಕ್ಕೂ ಕಡಿವಾಣ ಹಾಕಬಲ್ಲಂತಹಾ ಅತ್ಯಂತ ಪ್ರಬಲವಾದ ಫೈರ್‌ವಾಲ್ ವ್ಯವಸ್ಥೆಯೂ ಇದೆ. ಹೀಗಾಗಿ ಟ್ವಿಟರ್, ಗೂಗಲ್, ಫೇಸ್‌ಬುಕ್‌ಗೆ ಚೀನೀಯರು ತಮ್ಮದೇ ಆದ ಪರ್ಯಾಯ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಭಾರತ ಸರ್ಕಾರವೇನೋ ಮೇಡ್-ಇನ್-ಇಂಡಿಯಾಗೆ ಪೂರಕವಾಗಿ ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸಿದರೂ, ಆಧುನಿಕ ತಂತ್ರಜ್ಞಾನಕ್ಕೆ ಕಡಿವಾಣ ಹಾಕುವುದೇನೂ ಸುಲಭವಲ್ಲ. ಮೇಡ್-ಇನ್-ಇಂಡಿಯಾ ವಸ್ತುಗಳನ್ನೇ ಬಳಸಿದರೆ ದೇಶದ ಆರ್ಥಿಕತೆಗೆ ಅನುಕೂಲ ಎಂಬ ಪೂರಕ ಅಂಶವೊಂದಿದೆ. ಆದರೆ ಬಳಸುವುದು, ಬಿಡುವುದರ ಬಗ್ಗೆ ಭಾರತೀಯರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ.

ಸೈಬರ್‌ಪೀಸ್ ಫೌಂಡೇಶನ್ ಏನನ್ನುತ್ತದೆ?
ಸೈಬರ್‌ಪೀಸ್ ಫೌಂಡೇಶನ್‌ನ ಸಿಇಒ ವಿನೀತ್ ಕುಮಾರ್ ಅವರ ಪ್ರಕಾರ, ಸೈಬರ್ ಭದ್ರತೆ ಮತ್ತು ಡೇಟಾ ಭದ್ರತೆ – ಇವೆರಡೂ ಈ ಶತಮಾನದಲ್ಲಿ ದೇಶದ ಭದ್ರತೆ ಹಾಗೂ ಸಾರ್ವಭೌಮತೆಯ ನಿಟ್ಟಿನಲ್ಲಿ ಅತ್ಯಂತ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿರುವ ವಿಷಯಗಳು.

ಭದ್ರತೆ ಹಾಗೂ ಖಾಸಗಿತನ ಮಾನದಂಡಗಳನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿಶ್ವಾಸಾರ್ಹವಾದ ತಾಂತ್ರಿಕ ಸಲಕರಣೆಗಳ ಅಗತ್ಯವಿದೆ. ನಿಷೇಧಿತ ಪ್ಲ್ಯಾಟ್‌ಫಾರ್ಮ್‌ನಲ್ಲಿ ವಿಡಿಯೊಗಳನ್ನು ಬೇಕಾಬಿಟ್ಟಿಯಾಗಿ, ಯಾವುದೇ ಮಾನದಂಡಗಳಾಗಲೀ, ಮೇಲ್ವಿಚಾರಣೆಯಾಗಲೀ ಇಲ್ಲದೆ ಪ್ರಕಟಿಸಲಾಗುತ್ತಿದೆ ಎಂಬುದನ್ನು ನಾವು ಕಂಡಿದ್ದೇವೆ. ಭದ್ರತೆ ಮತ್ತು ಖಾಸಗಿತನದ ಉಲ್ಲಂಘನೆ ಬಗ್ಗೆ ಆದ್ಯ ಗಮನ ಹರಿಸಬೇಕಾಗಿದೆ. ಎಲ್ಲ ಹೊಸ ಸೇವೆಗಳೂ ದೇಶದ ಕಾನೂನನ್ನು ಸಂಪೂರ್ಣವಾಗಿ ಪಾಲಿಸುವ ನಿಟ್ಟಿನಲ್ಲಿ ಅವುಗಳಿಗೆ ಅವಕಾಶ ನೀಡಬೇಕು ಎನ್ನುತ್ತಾರೆ ವಿನೀತ್ ಕುಮಾರ್.

error: Content is protected !! Not allowed copy content from janadhvani.com