janadhvani

Kannada Online News Paper

ಸೌದಿ: ಮುಂದಿನ ಹಂತ ಕಠಿಣ, ರೋಗಿಗಳ ಸಂಖ್ಯೆ ಹೆಚ್ಚಳ ಸಾಧ್ಯತೆ-ಆರೋಗ್ಯ ಸಚಿವ

ರಿಯಾದ್: ಸೌದಿಯಲ್ಲಿ ಮುಂದಿನ ಹಂತವು ಕಠಿಣವಾಗಲಿದ್ದು, ಮುಂದಿನ ವಾರದಿಂದ ಕೊರೋನ ರೋಗಿಗಳ ಸಂಖ್ಯೆಯು ತೀವ್ರವಾಗಿ ಹೆಚ್ಚಾಗಲಿದೆ ಎಂದು ಸೌದಿ ಆರೋಗ್ಯ ಸಚಿವ ಡಾ.ಅಬ್ದುಲ್ಲಾ ಅಲ್-ರಬೀಅ ಹೇಳಿದರು. ಇದನ್ನು ಎದುರಿಸಲು ಎಲ್ಲರ ಸಹಕಾರ ಅತ್ಯಗತ್ಯ. ದುರದೃಷ್ಟವಶಾತ್, ಕೆಲವರು ಸಂಪೂರ್ಣವಾಗಿ ಸಹಕರಿಸುತ್ತಿಲ್ಲ ಎಂದು ಅವರು ಹೇಳಿದರು.

ಸಚಿವಾಲಯದ ನಿರ್ದೇಶನದಂತೆ ಕರ್ಫ್ಯೂ ವಿಸ್ತರಿಸಲಾಗಿದೆ. ಮುಂಬರುವ ವಾರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ. ಸೌದಿಯಲ್ಲಿ ಲಭ್ಯವಿರುವ ಅಧ್ಯಯನಗಳ ಪ್ರಕಾರ, ಮುಂಬರುವ ವಾರಗಳಲ್ಲಿ ರೋಗಿಗಳ ಸಂಖ್ಯೆ ಕನಿಷ್ಠ 10,000 ದಿಂದ ಗರಿಷ್ಠ 2 ಲಕ್ಷವನ್ನು ತಲುಪಬಹುದು. ಪ್ರಸಕ್ತ ಪರಿಸ್ಥಿತಿಯು ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದಾಗಿ ಗೋಚರಿಸುತ್ತಿದೆ. ಆದರೆ, ನಾವು ಒಟ್ಟಾಗಿ ಕೆಲಸ ಮಾಡಿದರೆ ಇದನ್ನು ತಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರು.

ಇಲ್ಲಿಯವರೆಗೆ, 90 ಪ್ರತಿಶತ ಪ್ರಕರಣಗಳನ್ನು ತಡೆಗಟ್ಟಲಾಗಿದೆ. ಟ್ರಾಫಿಕ್‌ನಲ್ಲಿ ಶೇಕಡಾ 46 ರಷ್ಟು ಜನ ತಮ್ಮ ವಾಹನಗಳೊಂದಿಗೆ ಬೀದಿಗೆ ಬರುತ್ತಿದ್ದಾರೆ. ಇದನ್ನು ಕಡಿಮೆ ಮಾಡಬೇಕು. ಸಚಿವಾಲಯವು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಪ್ರತಿಯೊಂದು ಹಂತಗಳನ್ನು ಪ್ರಕಟಿಸುತ್ತದೆ. ಪ್ರತಿಯೊಬ್ಬರೂ ಸಹಕರಿಸಬೇಕು ಮತ್ತು ಪೂರ್ಣ ಸಮಯ ಮನೆಯೊಳಗೆ ಇರಬೇಕು. ಕರ್ಫ್ಯೂ ವಿಧಿಸಲಾದ ಕಡೆ ಸೋಂಕು ರಹಿತಗೊಳಿಸುವ ಕಾರ್ಯ ಮುಂದುವರಿಸಲಾಗುವುದು.

ರಸ್ತೆಗಳಲ್ಲಿ ವಾಹನಗಳು ಇನ್ನೂ ಕಡಿಮೆಯಾಗಿಲ್ಲ ಮತ್ತು ಇದು ಗುರಿಯನ್ನು ಅಡ್ಡಿಪಡಿಸುತ್ತಿದೆ ಎಂದು ಸಚಿವರು ಹೇಳಿದರು. ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಮತ್ತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಚಿವಾಲಯ ಸೂಕ್ತ ಸಮಯದಲ್ಲಿ ಸಭೆ ಕರೆದು ತೀರ್ಮಾನಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com