janadhvani

Kannada Online News Paper

ಸಿಎಎ ಪರ- ವಿರೋಧಿಗಳ ಮಧ್ಯೆ ಘರ್ಷಣೆ: ಪೋಲೀಸರಿಂದ ಅಶ್ರುವಾಯು

ನವದೆಹಲಿ: ಸಿಎಎ ವಿರೋಧಿಸಿ ಸಾಕಷ್ಟು ಭಾರೀ ಸಂಖ್ಯೆಯಲ್ಲಿ ಧರಣಿ ಕುಳಿತಿರುವ ಜಫರಾಬಾದ್ ಬಳಿಯ ಮೌಜ್ಪುರ್ ಏರಿಯಾದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿರುವುದಾಗಿ ಭಾನುವಾರ ಸಂಜೆ ವರದಿಯಾಗಿದೆ.

ಹೀಗಾಗಿ ಜಫರಾಬಾದ್ಗೆ ಹಾಗೂ ಮೌಜ್ಪುರ್ ಸಂಧಿಸುವ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೆಹಲಿ ಪೂರ್ವ ಜಿಲ್ಲೆ ಸೇರಿದಂತೆ ಇತರೆ ಪ್ರದೇಶದ ಡಿಸಿಪಿಗಳಿಗೂ ಸ್ಥಳಕ್ಕೆ ಬುಲಾವ್ ನೀಡಲಾಗಿದೆ. ಅಲ್ಲದೆ, ಅರೆಸೇನಾ ಪಡೆಯನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿತ ಮತ್ತು ಸಿಎಎ ವಿರೋಧಿಗಳ ನಡುವೆ ಕಲ್ಲು ತೂರಾಟ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿ ಇರದಿದ್ದ ಕಾರಣ ಪರಿಸ್ಥಿತಿ ನಿಯಂತ್ರಣಯನ್ನು ಮೀರಿತ್ತು. ಹೀಗಾಗಿ ಪರಿಸ್ಥಿತಿಯನ್ನು ತಹಬದಿಗೆ ತರಲು ಪೊಲೀಸ್ ಸಿಬ್ಬಂದಿ ಅಶ್ರುವಾಯು ಪ್ರಯೋಗ ಮಾಡಿದ್ದಾರೆ.

ಈ ಘಟನೆಯಲ್ಲಿ ಅನೇಕ ಪ್ರತಿಭಟನಾಕಾರರು ಕಲ್ಲು ತೂರಾಟದಿಂದ ಗಾಯಗೊಂಡಿದ್ದಾರೆ. ಘಟನೆಯ ಸ್ಥಳದಲ್ಲಿ ಜೈ ಶ್ರೀರಾಮ ಎಂಬ ಘೋಷಣೆಯು ಮೊಳಗಿತ್ತು ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ ಬಿಜೆಪಿಯ ವಿವಾದಿತ ನಾಯಕ ಕಪಿಲ್ ಮಿಶ್ರಾ ಮತ್ತು ಇತರರು ಮಧ್ಯಾಹ್ನ 3 ಗಂಟೆ ಸಮಯಕ್ಕೆ ಜಫರಾಬಾದ್ ಮೆಟ್ರೋ ನಿಲ್ದಾಣ ಬಳಿ ಬಂದು ರಸ್ತೆಯನ್ನು ಖಾಲಿ ಮಾಡುವಂತೆ ಪ್ರತಿಭಟನಾಕಾರರನ್ನು ಕೋರಿದ್ದಾರೆ. ಈ ವೇಳೆ ಮಾತಿನ ಚಕಮಕಿ ಉಂಟಾಗಿ 4 ಗಂಟೆ ಸುಮಾರಿಗೆ ರಸ್ತೆಗೆ ಇಳಿದ ಜನರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

error: Content is protected !! Not allowed copy content from janadhvani.com