janadhvani

Kannada Online News Paper

ಅಮೆರಿಕದ ಆರ್ಥಿಕತೆ ಉತ್ತೇಜಿಸಲು ಟ್ರಂಪ್ ಆಗಮನ- ಭಾರತಕ್ಕೆ ಏನೂ ಪ್ರಯೋಜನವಿಲ್ಲ

ಭುವನೇಶ್ವರ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಿಂದ ಭಾರತಕ್ಕೆ ಪ್ರಯೋಜನವಿಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಅಮೆರಿಕದ ಆರ್ಥಿಕತೆ ಉತ್ತೇಜಿಸುವ ಸಲುವಾಗಿ ಟ್ರಂಪ್ ಬರುತ್ತಿದ್ದಾರೆ. ಅವರ ಭೇಟಿಯಿಂದ ನಮ್ಮ ದೇಶಕ್ಕೆ ಪ್ರಯೋಜವಿದೆ ಎಂದೆನಿಸುತ್ತಿಲ್ಲ’ ಎಂದು ಹೇಳಿದ್ದಾರೆ.

‘ಟ್ರಂಪ್ ಭೇಟಿ ವೇಳೆ ಕೆಲವು ರಕ್ಷಣಾ ಒಪ್ಪಂದಗಳಾಗಬಹುದು. ಅದೂ ಕೂಡ ಅಮೆರಿಕದ ಆರ್ಥಿಕತೆಯ ಉತ್ತೇಜನದ ಸಲುವಾಗಿಯೇ. ರಕ್ಷಣಾ ಸಾಮಗ್ರಿಗಳಿಗಾಗಿ ನಾವು ಪಾವತಿ ಮಾಡುತ್ತೇವೆ, ಅವರೇನೂ ಉಚಿತವಾಗಿ ಕೊಡುವುದಿಲ್ಲ’ ಎಂದು ಸ್ವಾಮಿ ಹೇಳಿದ್ದಾರೆ.

ಟ್ರಂಪ್ ಅವರು ಸೋಮವಾರದಿಂದ ಎರಡು ದಿನ ಭಾರತ ಪ್ರವಾಸ ಕೈಗೊಂಡಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ‘ಅಮೆರಿಕದ ರೈತರಿಗೆ ನೆರವು ಮಾಡಿಕೊಡುವ ಉದ್ದೇಶದಿಂದ ಟ್ರಂಪ್ ಬರುತ್ತಿದ್ದಾರೆ’ ಎಂದು ಹೇಳಿದ್ದಾರೆ.

ನಿಧಾನಗತಿಯ ಭಾರತದ ಆರ್ಥಿಕತೆಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಇಬ್ಬರೂ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಆರ್ಥಿಕತೆಯ ಉತ್ತೇಜನಕ್ಕೆ ಇಬ್ಬರೂ ಭಿನ್ನ ಸಲಹೆಗಳನ್ನು ನೀಡಿದ್ದಾರೆ. ಜಿಎಸ್‌ಟಿ, ಆದಾಯ ತೆರಿಗೆ ರದ್ದುಗೊಳಿಸಬೇಕು ಎಂದು ಸ್ವಾಮಿ ಸಲಹೆ ನೀಡಿದರೆ, ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮಾಡಬೇಕು ಮತ್ತು ಅಲ್ಪಾವಧಿ–ದೀರ್ಘಾವಧಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಯೆಚೂರಿ ಹೇಳಿದ್ದಾರೆ.

error: Content is protected !! Not allowed copy content from janadhvani.com