ಮೋದಿಗೆ ಜೈ ಎಂದರೆ ದೇಶಭಕ್ತರು, ವಿರುದ್ಧ ಮಾತನಾಡಿದರೆ ದೇಶ ದ್ರೋಹಿಗಳು?

ಬೆಂಗಳೂರು,ಮಾ.13- ಮೋದಿಗೆ ಜೈ ಎಂದರೆ ದೇಶಭಕ್ತರು, ಅವರ ವಿರುದ್ಧ ಮಾತನಾಡಿದರೆ ದೇಶ ದ್ರೋಹಿಗಳು ಎಂಬ ವಾತಾವರಣವನ್ನು ದೇಶದಲ್ಲಿ ನಿರ್ಮಿಸಲಾಗಿದೆ. ನಾವು ಇರುವುದು ಪ್ರಜಾ ಪ್ರಭುತ್ವದಲ್ಲೋ ಅಥವಾ ಅಲ್ಲವೇ ಎಂಬ ಅನುಮಾನ ಕಾಡಲಾರಂಭಿಸಿದೆ ಎಂದು ಕಾಂಗ್ರೆಸ್‍ನ ಹಿರಿಯ ನಾಯಕಿ ಮಾರ್ಗರೇಟ್ ಆಳ್ವ ವಿಷಾದಿಸಿದರು.

ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕಾರಿ ಸಮಿತಿ ಸಭೆ ಮತ್ತು ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, 47 ವರ್ಷಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ನಿರುದ್ಯೋಗ ಸಮಸ್ಯೆ ಎಂದೂ ಕಾಣಿರಲಿಲ್ಲ. ಆದರೆ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಮಸ್ಯೆ ತೀವ್ರವಾಗಿದೆ. ಇದನ್ನು ಪ್ರಶ್ನಿಸಿದವರನ್ನ, ಪ್ರತಿಭಟಿಸಿದವರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ.

ಮೋದಿಗೆ ಜೈ ಎಂದವರು ಮಾತ್ರ ದೇಶಭಕ್ತರು ಎಂಬಂತಹ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಕಾಂಗ್ರೆಸ್‍ನ ವಿರುದ್ದ ಕಲ್ಲಿದ್ದಲು ಸೇರಿದಂತೆ ವಿವಿಧ ಹಗರಣಗಳ ಆರೋಪ ಮಾಡುತ್ತಾರೆ. 2ಜಿ ಮತ್ತು ಕಲ್ಲಿದ್ದಲ ಹಗರಣ ನಡೆದೇ ಇಲ್ಲ ಎಂಬ ತೀರ್ಪುಗಳು ಹೊರಬಂದಿವೆ.

ಬೋಪೋರ್ಸ್ ಹಗರಣದಲ್ಲಿ ಕೇಳಿದ ಬಂದ ಹೆಸರಿನವರೆಲ್ಲ ಸತ್ತು ಹೋಗಿದ್ದಾರೆ. ರಾಜೀವ್ ಗಾಂಧಿ ಕೂಡ ಇಲ್ಲ. ಚುನಾವಣೆ ಸಂದರ್ಭದಲ್ಲಿ ಭೋಪೋರ್ಸ್ ಹೆಸರನ್ನು ಚರ್ಚಿಸಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನಿಷ್ಠ ಜಮೀನನ್ನು ಹೊಂದಿರದ ಅನಿಲ್ ಅಂಬಾನಿ ಕಂಪನಿಗೆ ಮೋದಿ ಅವರು ರಫೇಲ್ ಯುದ್ಧ ವಿಮಾನಗಳ ತಯಾರಿಕೆಯ ಗುತ್ತಿಗೆಯನ್ನು ನೀಡಿದ್ದಾರೆ. ಅನಿಲ್ ಅವರು ಯಾವುದೇ ಉತ್ಪಾದನೆ ಮಾಡುವಂತಹ ಸಾಮಥ್ರ್ಯವನ್ನು ಹೊಂದಿಲ್ಲ. ಅನುಭವವೂ ಇಲ್ಲ. ಒಪ್ಪಂದಕ್ಕೆ ಸಹಿ ಹಾಕಿದ ನಂತರ ಫ್ರಾನ್ಸ್ ಕಂಪನಿ ನೀಡಿದ ಹಣದಲ್ಲಿ ಅನಿಲ್ ಅಂಬಾನಿ ನಾಗಪುರದಲ್ಲಿ ಜಮೀನು ಖರೀದಿಸಿದ್ದಾರೆ.

ಎಚ್‍ಎಎಲ್‍ಗೆ ನೀಡಬೇಕಾಗಿದ್ದ ಗುತ್ತಿಗೆಯನ್ನು ಮೋದಿ ಸರ್ಕಾರ ಅನಿಲ್ ಅಂಬಾನಿಗೆ ಕೊಟ್ಟು ದೇಶದ ಭದ್ರತೆ ವಿಷಯದಲ್ಲೂ ಉಡಾಫೆ ಧೋರಣೆ ಅನುಸರಿಸಿದೆ ಎಂದು ವಾಗ್ದಾಳಿ ನಡೆಸಿದರು. ಚುನಾವಣಾ ಸಂದರ್ಭದಲ್ಲಿ ಮಹಿಳೆಯರು ಸಕ್ರಿಯವಾಗಿ ಕೆಲಸ ಮಾಡಬೇಕು.

ಪ್ರತಿ ರಸ್ತೆಗೆ ಇಬ್ಬರು ಮಹಿಳೆಯರಂತೆ ಉಸ್ತುವಾರಿ ವಹಿಸಿಕೊಂಡು ಪ್ರತಿ ಬೂತ್ ಮಟ್ಟದಲ್ಲೂ ಜನರನ್ನು ಕರೆ ತಂದು ವೋಟ್ ಹಾಕಿಸಬೇಕು. ಅಭ್ಯರ್ಥಿ ಯಾರೇ ಆದರೂ ಭಿನ್ನಾಭಿಪ್ರಾಯ ತೋರಿಸದೆ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪ ಅಮರ್‍ನಾಥ್, ಶಾಸಕಿ ಸೌಮ್ಯ ರೆಡ್ಡಿ, ಮೇಯರ್ ಗಂಗಾಂಬಿಕೆ, ಮಾಜಿ ಸಚಿವೆ ರಾಣಿ ಸತೀಶ್, ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!