ಇತ್ತೀಚೆಗೆ ಮಂಗಳೂರಿನ ಮಸೀದಿಯೊಂದರ ಮುಂಬಾಗದ ರಸ್ತೆಯಲ್ಲಿ ನಮಾಝ್ ಮಾಡಿದ್ದಾರೆ ಎಂದು ಹೇಳಿ ಸುಮೊಟೊ ಕೇಸ್ ದಾಖಲಿಸಿರುವುದು ಖಂಡನೀಯವಾಗಿದೆ.
ಉದ್ದೇಶಪೂರ್ವಕವಾಗಿ ಯಾರೂ ಸಾರ್ವಜನಿಕ ಸ್ಥಳದಲ್ಲಿ ನಮಾಝ್ ಮಾಡಿಲ್ಲ. ಬದಲು ಅನಿವಾರ್ಯವಾಗಿ ಶುಕ್ರವಾರದಂದು ಸ್ಥಳಾವಕಾಶ ಕಡಿಮೆ ಇದ್ದುದರಿಂದ ಬೆರಳೆಣಿಕೆಯಷ್ಟು ಜನ ಸಾರ್ವಜನಿಕ ರಸ್ತೆಯಲ್ಲಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕೇವಲ ಐದರಿಂದ ಹತ್ತು ನಿಮಿಷದೊಳಗೆ ನಮಾಝ್ ಮಾಡಿ ತೆರಳಿದ್ದಾರೆ.
ಇದಕ್ಕೆ ಸರ್ಕಾರದ ಅಧಿಕಾರಿಗಳು ಸ್ವಯಂ ಪ್ರೇರಿತ ಕೇಸ್ ದಾಖಲಿಸಿರುವುದು ಆಶ್ಚರ್ಯಕರವಾದ ಸಂಗತಿಯಾಗಿದೆ . ಮುಸ್ಲಿಮರು ಸರ್ಕಾರದ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಆದರೆ ಸರ್ಕಾರವು ಮುಸ್ಲಿಮರನ್ನು ಕಡೆಗಣಿಸುವ ಮತ್ತು ಕೋಮು ಶಕ್ತಿಗಳನ್ನು ಮೆಚ್ಚಿಸುವ
ಕೆಲಸ ಮಾಡುತ್ತಿದೆ. ಯಾವುದೇ ಧರ್ಮಿಯರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಸಂದರ್ಭದಲ್ಲಿ ಜನಸಂದಣಿಯಿಂದ ಕೆಲವೊಮ್ಮೆ ರಸ್ತೆಗಳು ತುಂಬಿ ವಾಹನ ಸಂಚಾರಕ್ಕೆ ತಡೆ ಉಂಟಾಗುವುದು ಸಹಜವಾಗಿದೆ.
ಆದರೆ ಪೋಲೀಸ್ ಅಧಿಕಾರಿಗಳು ಯಾರನ್ನೋ ತೃಪ್ತಿ ಪಡಿಸಲು ಸ್ವಯಂ ಪ್ರೇರಿತ ಕೇಸ್ ದಾಖಲಿಸಿರುವುದು ಮತ್ತು ಇದನ್ನು ಮಾತ್ರ ದೊಡ್ಡ ವಿಷಯವಾಗಿ ಪೋಲೀಸ್ ಅಧಿಕಾರಿಗಳು ಮಾಡಿರುವುದು ಅತ್ಯಂತ ಖಂಡನೀಯವಾಗಿದೆ. ಈ ರೀತಿಯಾಗಿ ಅಧಿಕಾರಿಗಳ ದುರ್ವರ್ಥನೆಯನ್ನು ಮುಂದುವರಿಸಿದರೆ ಹೋರಾಟ ಅನಿವಾರ್ಯವಾಗಲಿದೆ .
ಈ ಕೇಸನ್ನು ಕೂಡಲೇ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಸುನ್ನಿ ಮ್ಯಾನೇಜ್ಮೆಂಟ್ SMA ರಾಜ್ಯ ಅಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಹಾಗೂ ಕೋಶಾಧಿಕಾರಿ ಹಾಜಿ ಹಮೀದ್ ಕೊಡುಂಗಾಯಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.