✍️ Moulana N K M Shafi Sa’adi
ಉಪಾಧ್ಯಕ್ಷರು ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತು /ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್
ಮುಹರ್ರಂ 10 ಮುಸ್ಲಿಮರ ಪಾಲಿನ ಅತ್ಯಂತ ಪವಿತ್ರ ಹಾಗೂ ಐತಿಹಾಸಿಕ ದಿನಗಳಲ್ಲಿ ಒಂದಾಗಿದೆ. ಈ ಪುಣ್ಯದಿನದಂದು ಅಲ್ಲಾಹು ಈ ಉಮ್ಮತ್‌ಗೆ (ಸಮುದಾಯಕ್ಕೆ) ಉನ್ನತ ಐಕ್ಯತೆ, ಆತ್ಮಗೌರವ, ಜಾಗತಿಕ ಶಾಂತಿ ಹಾಗೂ ಸಮೃದ್ಧಿಯನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ. ಆಮೀನ್.
ಐತಿಹಾಸಿಕ ಹಿನ್ನೆಲೆ: ‘ಸಮಸ್ತ’ದ ಉದಯ ಮತ್ತು ವಿಕಾಸ
ಸ್ವಾತಂತ್ರ್ಯಪೂರ್ವ ಭಾರತದ ಮಲಬಾರ್ ಪ್ರದೇಶದಲ್ಲಿ 1926ರ ಜೂನ್ 26ರವರೆಗೆ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕವಾಗಿ ಸಂಘಟಿತರಾಗುವ ದೊಡ್ಡ ಅನಿವಾರ್ಯತೆ ಎದುರಾಗಿರಲಿಲ್ಲ. ನಮ್ಮ ಪೂರ್ವಜರಿಂದ ಹರಿದುಬಂದ ಧಾರ್ಮಿಕ ಪರಂಪರೆಯು ಉಲಮಾಗಳ (ಧಾರ್ಮಿಕ ಪಂಡಿತರ) ದಕ್ಷ ನಾಯಕತ್ವದಲ್ಲಿ ಯಾವುದೇ ಕಲ್ಮಶವಿಲ್ಲದೆ ಅತ್ಯಂತ ಸುಸೂತ್ರವಾಗಿ ಮುಂದುವರಿಯುತ್ತಿತ್ತು. ಖಾಝಿಗಳು, ಉಲಮಾಗಳು ಹಾಗೂ ಧಾರ್ಮಿಕ ಪ್ರಜ್ಞೆಯುಳ್ಳ ಉಮರಾಗಳು (ಸಮುದಾಯದ ಮುಖಂಡರು) ಅಂದಿನ ಸಮಾಜದ ಮುನ್ನಡೆಗೆ ದಾರಿದೀಪವಾಗಿದ್ದರು.
ಆದರೆ, 1920ರ ದಶಕದ ಸುಮಾರಿಗೆ ಸಮಾಜದ ಆಂತರಿಕ ವಲಯದಲ್ಲಿ ಕೆಲವು ವಿಕೃತ ಚಿಂತನೆಗಳು ಮತ್ತು ಭಿನ್ನಮತದ ಬೀಜಗಳು ಮೊಳಕೆಯೊಡೆಯಲು ಆರಂಭಿಸಿದವು. ಈ ಅಪಾಯವನ್ನು ಸಕಾಲದಲ್ಲಿ ಮನಗಂಡ ಅಂದಿನ ದೂರದೃಷ್ಟಿಯ ಉಲಮಾಗಳು ಎಚ್ಚೆತ್ತುಕೊಂಡರು. ಅದರ ಐತಿಹಾಸಿಕ ಫಲವೇ 1926ರಲ್ಲಿ ಅಸ್ತಿತ್ವಕ್ಕೆ ಬಂದ ‘ಕೇರಳ ಜಂಇಯ್ಯತುಲ್ ಉಲಮಾ’. ಆರಂಭದಲ್ಲಿ ಸಂಘಟನೆಯ ಹೆಸರು “ಕೇರಳ ಜಂಇಯ್ಯತುಲ್ ಉಲಮಾ” ಎಂದಾಗಿತ್ತು.
ಕಾನೂನುಬದ್ಧ ನೋಂದಣಿ: 1933ರ ಮಾರ್ಚ್ 5ರಂದು ಫರೂಕ್‌ನಲ್ಲಿ ನಡೆದ 6ನೇ ವಾರ್ಷಿಕ ಸಮ್ಮೇಳನದಲ್ಲಿ ಸಂಘಟನೆಯನ್ನು ಕಾನೂನುಬದ್ಧವಾಗಿ ನೋಂದಾಯಿಸುವ ಪ್ರಕ್ರಿಯೆ ಚರ್ಚೆಗೆ ಬಂದಿತು. ಅದರಂತೆ, ಸಂಘಟನೆಯ ಹೆಸರಿಗೆ “ಸಮಸ್ತ” ಎಂಬ ಪದವನ್ನು ಜೋಡಿಸಿ, 1934ರ ನವೆಂಬರ್ 12ರಂದು ನಿಯಮಾವಳಿಗಳನ್ನು ಅಧಿಕೃತವಾಗಿ ನೋಂದಾಯಿಸಲಾಯಿತು.
ಇತ್ತೀಚೆಗೆ ಕರ್ನಾಟಕದಲ್ಲಿ ಸಂಘಟನೆಗಳ ನೋಂದಣಿ ಕುರಿತು ಗೃಹ ಸಚಿವರಿಂದ ನಡೆದ ಚರ್ಚೆಗಳ ಹಿನ್ನೆಲೆಯಲ್ಲಿ ,ಭಾರತೀಯ ಮುಸ್ಲಿಮರು ಸ್ವಾತಂತ್ರ್ಯಪೂರ್ವದಲ್ಲೇ ಎಂತಹ ಬಲಿಷ್ಠ ಹಾಗೂ ಕಾನೂನುಬದ್ಧ ಸಂಘಟನಾ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಹೆಮ್ಮೆಯ ಸಂಗತಿಯಾಗಿದೆ.
ಸವಾಲುಗಳೇ ಸಾಧನೆಯ ಮೆಟ್ಟಿಲುಗಳು:
‘ಸಮಸ್ತ’ದ ನೇತೃತ್ವದಲ್ಲಿ ಸುನ್ನೀ ಸಮುದಾಯವು ಭಾರತದ ಇತರ ಪ್ರದೇಶಗಳಿಗಿಂತ ಭಿನ್ನವಾಗಿ, ಅತ್ಯಂತ ಪ್ರಬುದ್ಧ ಧಾರ್ಮಿಕ ಜಾಗೃತಿಯೊಂದಿಗೆ ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಪ್ರಗತಿಯನ್ನು ಸಾಧಿಸಿತು. ಆದರೆ, ಈ ಅದ್ಭುತ ಬೆಳವಣಿಗೆಯನ್ನು ಸಹಿಸದ ಕೆಲವು ರಾಜಕೀಯ ಶಕ್ತಿಗಳು 1980ರ ದಶಕದಲ್ಲಿ ಸಮುದಾಯದೊಳಗೆ ಭಿನ್ನಾಭಿಪ್ರಾಯ ಮೂಡಿಸಲು ಪ್ರಯತ್ನಿಸಿದವು. ಇದರ ಪರಿಣಾಮವಾಗಿ ಸಂಘಟನೆಯೊಳಗೆ ಕೆಲವು ಗೊಂದಲ ಹಾಗೂ ವಿಭಜನೆಗಳು ಉಂಟಾದವು.
ಆದರೆ, ಕಾಲಾಂತರದಲ್ಲಿ ಆ ಸವಾಲುಗಳು ಸಮಾಜಕ್ಕೆ ಆಶೀರ್ವಾದವಾಗಿ ಪರಿಣಮಿಸಿದವು. ಸಮಾಜದಲ್ಲಿ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ಸಾಮಾಜಿಕ ಹಾಗೂ ಧಾರ್ಮಿಕ ಸೇವೆಗಳಲ್ಲಿ ಪರಸ್ಪರ ಪೈಪೋಟಿ ನಡೆದು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಯಿತು.
ಬ್ರಿಟಿಷರ ಕಾಲದಿಂದಲೂ ಸಮಾಜವನ್ನು ಕಾಡುತ್ತಿದ್ದ ಅಪಮೌಲ್ಯದ ಚಿಂತನೆಗಳ ಪ್ರಭಾವ ತಾನಾಗಿಯೇ ಕುಂಠಿತಗೊಂಡಿತು.
ಇಂದು ಮತ್ತೊಮ್ಮೆ ನಮ್ಮ ಸಮಾಜದಲ್ಲಿ ಐಕ್ಯತೆಯ ಧ್ವನಿ ಮೊಳಗುತ್ತಿದೆ. ಕರ್ನಾಟಕದಲ್ಲಿ ವಕ್ಫ್ ಹೋರಾಟದ ಸಂದರ್ಭದಲ್ಲಿ ಸುನ್ನೀ ಉಲಮಾಗಳು ಸಮನ್ವಯದ ಮೂಲಕ ಈ ಒಗ್ಗಟ್ಟನ್ನು ಸಾಬೀತುಪಡಿಸಿದ್ದಾರೆ. ಬಳಿಕ ಈ ಸಮನ್ವಯವನ್ನು ಮುರಿಯಲು ಹಲವಾರು ರಾಜಕೀಯ ಕುತಂತ್ರಗಳು ನಡೆದರೂ, ವಿಶೇಷವಾಗಿ ಕರಾವಳಿ ಕರ್ನಾಟಕದಲ್ಲಿ ಸುನ್ನೀ ಸಮುದಾಯದೊಳಗೆ ಇಂದು ವ್ಯಾಪಕ ಭಿನ್ನಾಭಿಪ್ರಾಯಗಳಿಲ್ಲ. ಐಕ್ಯತೆಯ ವಾತಾವರಣ ಮತ್ತಷ್ಟು ಬಲಗೊಂಡಿದೆ. ಜೊತೆಗೆ ಸಮಾಜದಲ್ಲಿ ರಾಜಕೀಯ ಪ್ರಜ್ಞೆ ಹಾಗೂ ಆರೋಗ್ಯಕರ ಚರ್ಚೆಗಳೂ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ದೂರದೃಷ್ಟಿಯ ನಾಯಕತ್ವ: ನೂರುಲ್ ಉಲಮಾ ಮತ್ತು ಸುಲ್ತಾನುಲ್ ಉಲಮಾ
ನಮ್ಮ ಉಲಮಾಗಳು ಕಾಲಕಾಲಕ್ಕೆ ತೋರಿಸಿದ ದೂರದೃಷ್ಟಿಯ ಫಲವಾಗಿ ಸಮಾಜದಲ್ಲಿ ಮಹತ್ತರ ಜಾಗೃತಿ ಮೂಡಿದೆ. 2000ನೇ ಇಸವಿಯಲ್ಲಿ ನಾನು ಜಾಮಿಅ ಸಅದಿಯ್ಯದ ಕನ್ನಡ ವಿದ್ಯಾರ್ಥಿ ಸಂಘಟನೆ “ಮಿಸ್ಬಾಹುಸ್ಸುಅದಾ”ದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ, ನನ್ನ ಗುರು ನೂರುಲ್ ಉಲಮಾ ಎಂ.ಎ. ಉಸ್ತಾದರ “ಓರ್ಮಯಿಲೆ ಏಡುಕಲ್” ಎಂಬ ಮಲಯಾಳಂ ಕೃತಿಯನ್ನು ಸಾಲೆತ್ತೂರು ಫೈಝಿಯವರು “ನೆನಪಿನ ಪುಟಗಳು” ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. ಸಮಸ್ತದ ಇತಿಹಾಸವನ್ನು ಸಮಯ, ಸಂದರ್ಭ ಹಾಗೂ ದಿನಾಂಕಗಳೊಂದಿಗೆ ದಾಖಲಿಸಿರುವ ಅಮೂಲ್ಯ ಗ್ರಂಥ ಅದು. ನೂರುಲ್ ಉಲಮಾರ ಅನುಭವ, ಪಾಂಡಿತ್ಯ ಹಾಗೂ ದೂರದೃಷ್ಟಿ ಈ ಕೃತಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಇಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಮದ್ರಸ ಶಿಕ್ಷಣ ವ್ಯವಸ್ಥೆಯ ಬುನಾದಿಯಲ್ಲಿಯೂ ನೂರುಲ್ ಉಲಮಾರ ಚಿಂತನೆ ಪ್ರಮುಖವಾಗಿದೆ. 1951ರ ಫೆಬ್ರವರಿಯಲ್ಲಿ ಸಮಸ್ತದ ‘ಅಲ್-ಬಯಾನ್’ ಪತ್ರಿಕೆಯಲ್ಲಿ ಅವರು ಮದ್ರಸ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ ಮಹತ್ವದ ಲೇಖನ ಬರೆದರು. ನಂತರ 1951ರ ಮಾರ್ಚ್‌ನಲ್ಲಿ ವಡಗರದಲ್ಲಿ ನಡೆದ 19ನೇ ವಾರ್ಷಿಕ ಸಮ್ಮೇಳನಕ್ಕೆ ತಮ್ಮ ಚಿಂತನೆಗಳನ್ನು ನಿರ್ಣಯದ ರೂಪದಲ್ಲಿ ಕಳುಹಿಸಿದರು. ಆ ನಿರ್ಣಯದ ಆಧಾರದಲ್ಲಿ ಪರವಣ್ಣ ಉಸ್ತಾದರ ನೇತೃತ್ವದಲ್ಲಿ ಉಪಸಮಿತಿ ರಚನೆಯಾಗಿ, ಕೇವಲ 27ನೇ ವಯಸ್ಸಿನ ನೂರುಲ್ ಉಲಮಾ ಅದರ ಸದಸ್ಯರಾಗಿ ಆಯ್ಕೆಯಾದರು. ಆ ಕಾಲದ ಉಲಮಾಗಳ ದೂರದೃಷ್ಟಿ, ಸಂಘಟನಾ ಚಾತುರ್ಯ ಹಾಗೂ ಭವಿಷ್ಯದ ಯೋಜನೆಗಳು ಇಂದಿಗೂ ನಮಗೆ ಮಾದರಿಯಾಗಿವೆ.
2010–13ರ ಅವಧಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದ ಅಡ್ವೊಕೇಟ್ ರಿಯಾಝ್ ಖಾನ್ ಅವರೊಂದಿಗೆ ನೂರುಲ್ ಉಲಮಾರನ್ನು ಭೇಟಿಯಾಗುವ ಅವಕಾಶ ನನಗೆ ದೊರಕಿತ್ತು. ಆ ಸಂದರ್ಭದಲ್ಲಿ ನೂರುಲ್ ಉಲಮಾ ಅವರು ರಿಯಾಝ್ ಖಾನ್ ಅವರಿಗೆ, “ಇಂದು ನೀವು ಅಧ್ಯಕ್ಷರಾಗಲು ಶಾಫಿ ಸಅದಿಯವರು ಬೆಂಬಲ ನೀಡಿದ್ದಾರೆ. ನಾಳೆ ಶಾಫಿ ಸಅದಿಯವರು ಅಧ್ಯಕ್ಷರಾಗುವ ಸಂದರ್ಭ ನೀವು ಅವರ ಬೆಂಬಲಕ್ಕೆ ನಿಲ್ಲಬೇಕು” ಎಂದು ಹೇಳಿದ್ದರು. ಅಲ್ಲಾಹನ ಇಚ್ಛೆಯಂತೆ ಮುಂದೆ ಆ ಸಂದರ್ಭ ಬಂದಾಗ ಅಡ್ವೊಕೇಟ್ ರಿಯಾಝ್ ಖಾನ್ ಅವರು ನನಗೆ ಬೆಂಬಲವಾಗಿ ನಿಂತರು. ಹೀಗೆ ನೂರುಲ್ ಉಲಮಾರ ದೂರದೃಷ್ಟಿಯ ಮತ್ತೊಂದು ಕನಸು ನನಸಾಯಿತು.
ನಾನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸದಸ್ಯನಾಗುವವರೆಗೆ ಸುನ್ನೀ ಉಲಮಾ ಕೋಟಾದಿಂದ ಯಾವುದೇ ಶಾಫಿಈ ಅಥವಾ ಹನಫೀ ಉಲಮಾಗಳಿಗೆ ಆ ಸ್ಥಾನ ದೊರೆತಿರಲಿಲ್ಲ. ಅಂತಹ ಅವಕಾಶದ ಕನಸನ್ನೂ ಕಾಣಲಾಗದ ಸ್ಥಿತಿ ಇತ್ತು. ಕಳೆದ ಎರಡು ದಶಕಗಳಿಂದ ಕರಾವಳಿ ಮತ್ತು ಬೆಂಗಳೂರಿನ ರಾಜಕೀಯದ ನಡುವಿನ ವ್ಯತ್ಯಾಸವನ್ನು ನಾನು ನೇರವಾಗಿ ಕಂಡಿದ್ದೇನೆ.
ಕರ್ನಾಟಕದ ಮುಸ್ಲಿಂ ಸಮುದಾಯದ ವಿಚಾರದಲ್ಲಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರ ಭಾಗವಹಿಸುವಿಕೆ, ಅವರ ಕಾಲಾನುಸಾರ ಬದಲಾವಣೆಗಳನ್ನು ಸ್ವೀಕರಿಸುವ ಮನೋಭಾವ ಮತ್ತು ದೂರದೃಷ್ಟಿಯ ಮಾರ್ಗದರ್ಶನಕ್ಕೆ ಸಮನಾದ ನಾಯಕತ್ವವನ್ನು ನಾನು ಇನ್ನೊಬ್ಬರಲ್ಲಿ ಕಂಡಿಲ್ಲ. ಈ ಚಿಂತನೆಯ ಶಕ್ತಿಗೆ ಸಮಸ್ತದ ದೀರ್ಘಕಾಲದ ಅನುಭವ ಹಾಗೂ ಸಂಘಟನಾ ಪರಂಪರೆಯೇ ಮೂಲ ಕಾರಣವೆಂದು ನಾನು ನಂಬುತ್ತೇನೆ.
ಇತಿಹಾಸವು ಕೇವಲ ನೆನಪಿಗಾಗಿ ಅಲ್ಲ; ಅದು ಭವಿಷ್ಯಕ್ಕೆ ದಾರಿದೀಪವಾಗಬೇಕು. ನಮ್ಮ ಪೂರ್ವಜರ ದೂರದೃಷ್ಟಿ, ಉಲಮಾಗಳ ಐಕ್ಯತೆ ಹಾಗೂ ಸಂಘಟನಾ ಮನೋಭಾವವನ್ನು ಮುಂದುವರಿಸುವ ಜವಾಬ್ದಾರಿ ಇಂದು ನಮ್ಮೆಲ್ಲರ ಮೇಲಿದೆ.
ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಅವರ ಮಾರ್ಗದರ್ಶನ
ಸಮಸ್ತದ ಸುದೀರ್ಘ ಅನುಭವ ಸಂಪತ್ತಿನ ವಾರಸುದಾರರಾದ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರು ಕೆಲವು ದಿನಗಳ ಹಿಂದೆ ಮಾತನಾಡುತ್ತಾ ಸಮಸ್ತದ ವಿಭಜನೆಗೆ ಕಾರಣವಾದ ಅಂಶಗಳನ್ನು ಸೂಚಿಸಿದ್ದರು. ಅವರು ಪ್ರಸ್ತಾಪಿಸಿದ ಅನೇಕ ವಿಷಯಗಳು ಇಂದಿಗೂ ಸಮಾಜದ ಮುಂದೆ ಸ್ಪಷ್ಟವಾಗಿ ಗೋಚರಿಸುತ್ತಿವೆ. ಈ ವಿಭಜನೆಯ ರಾಜಕೀಯ ಷಡ್ಯಂತ್ರಗಳು ಚೆನ್ನಾಗಿ ಅನುಭವದ ಮೂಲಕ ತಿಳಿದಿರುವ ಉಸ್ತಾದರು ಪ್ರತಿಯೊಂದು ಸಂದರ್ಭಗಳಲ್ಲೂ ನನಗೆ ವೈಯಕ್ತಿಕವಾಗಿ ಶಕ್ತಿ ಮತ್ತು ಸಾಂತ್ವನವಾಗಿದ್ದಾರೆ.
ನನ್ನ ರಾಜಕೀಯ ಮತ್ತು ಸಾಮಾಜಿಕ ಬದುಕಿನಲ್ಲಿ ಎದುರಾದ ಷಡ್ಯಂತ್ರಗಳು, ಅಪಹಾಸ್ಯಗಳು ಹಾಗೂ ಆನ್‌ಲೈನ್ ಟೀಕೆಗಳ ಸಂದರ್ಭದಲ್ಲಿ ಉಸ್ತಾದರು ನನಗೆ ತಂದೆಯಂತೆ ಸಾಂತ್ವನ ನೀಡಿದ್ದಾರೆ. ಕೇರಳದ ಚುನಾವಣಾ ಸಂದರ್ಭ ಸುಲ್ತಾನುಲ್ ಉಲಮಾರ ಮಾರ್ಗದರ್ಶನದಲ್ಲಿ ಕೆಲವೊಂದು ಭೇಟಿಗಳು ನಿರ್ಧಾರವಾಗಿತ್ತು.ಅವುಗಳನ್ನು ಮುಂದಿಟ್ಟುಕೊಂಡು ಕೆಲವರು ನನ್ನನ್ನು ಅಪಹಾಸ್ಯ ಮಾಡಿದಾಗ ಉಸ್ತಾದರು ಕರೆ ಮಾಡಿ: “ನನ್ನ ಸಂಘಟನಾ ಬದುಕಿನ ಆರಂಭದಲ್ಲಿ ನನ್ನ ವಿರುದ್ಧ ಮಾತನಾಡಿದ್ದೇ ನನ್ನ ಸ್ವಂತ ಸಂಘಟನಾ ವ್ಯವಸ್ಥೆಯಾಗಿತ್ತು. ನಿನ್ನನ್ನು ನಾನು ಮಗನಂತೆ ನೋಡಿದ್ದೇನೆ; ಯಾವುದೇ ಆರೋಪಗಳಿಗೆ ತಿರುಗಿ ನೋಡಬೇಡ, ನಿನ್ನ ಗುರಿ ಮಾತ್ರ ನಿನ್ನ ಕಣ್ಣಮುಂದಿರಲಿ” ಎಂದು ಧೈರ್ಯ ತುಂಬಿದ್ದರು. ಆ ಮಾತುಗಳೇ ನನ್ನ ಇಂದಿನ ಯಶಸ್ಸಿಗೆ ಶಕ್ತಿ. ಇದು ಸಾಂದರ್ಭಿಕವಾಗಿ ನೆನಪಿಸಿದ್ದು ಯಾಕೆಂದರೆ ನನ್ನ ವಿರುದ್ದದ ಕಾಮೆಂಟ್ ಗಳು , ಬರಹಗಳು ಕೆಲವರು ವೈಯುಕ್ತಿಕವಾಗಿ ಕಳುಹಿಸಿ ನೋವು ಹಂಚಿಕೊಳ್ಳುದಿದೆ. ಅಲ್ಲಾಹನ ತೌಫೀಕ್ ನಿಂದ ನಾನು ಸಾಮಾಜಿಕ ತಾಣಗಳು ಗಮನಿಸುವುದೇ ಇಲ್ಲ, ನನ್ನ ಮಾಧ್ಯಮ ವಿಭಾಗ , ಶಿಷ್ಯಂದಿರು ಗಮನಿಸುತ್ತಾರೆ ಅಷ್ಟೆ. ನಾವು ಬರುವ ಅಪಹಾಸ್ಯಗಳ ಕಡೆ ಗಮನಹರಿಸುವ ಅಗತ್ಯವಿಲ್ಲ, ನಮ್ಮ ಗುರಿ ಮಾತ್ರ ನೋಟವಿದ್ದರೆ ಸಾಕು.
ಕರ್ನಾಟಕದ ಸದ್ಯದ ಸಾಮಾಜಿಕ-ರಾಜಕೀಯ ವಾಸ್ತವಗಳು
ಇಂದು ಕರ್ನಾಟಕದ ಮುಸ್ಲಿಂ ಸಮುದಾಯ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇತ್ತೀಚೆಗೆ ನಡೆದ ಜಾತಿ ಜನಗಣತಿಯ ಸಂದರ್ಭದಲ್ಲಿ ಸಮಾಜದಲ್ಲಿ ವ್ಯಾಪಕ ಚರ್ಚೆಗಳು ನಡೆದವಾದರೂ, ಅವು ಕೇವಲ ‘ಉಪಜಾತಿಗಳ’ ಚರ್ಚೆಗೆ ಸೀಮಿತವಾದವು.
- ಈ ಜನಗಣತಿಯು ಸಮುದಾಯದ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಹಕ್ಕುಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು?
- ಅದಕ್ಕೆ ಸಮುದಾಯವಾಗಿ ನಾವು ಯಾವ ಕಾರ್ಯತಂತ್ರ ರೂಪಿಸಬೇಕು?
ಎಂಬುದರ ಬಗ್ಗೆ ಗಂಭೀರ ಹಾಗೂ ಪ್ರಾಮಾಣಿಕ ಚಿಂತನೆಗಳು ನಡೆದಂತೆ ಕಾಣುತ್ತಿಲ್ಲ. ಇತರ ಸಮುದಾಯಗಳ ರಾಜಕೀಯ ನಾಯಕರು ತಮ್ಮ ಹಕ್ಕುಗಳಿಗಾಗಿ ಪಕ್ಷಾತೀತವಾಗಿ ಒಗ್ಗಟ್ಟಿನ ಧ್ವನಿ ಎತ್ತುತ್ತಾರೆ. ಆದರೆ ನಮ್ಮ ಸಮಾಜದಲ್ಲಿ ಅಂತಹ ಒಮ್ಮತ ಇನ್ನೂ ಮೂಡಿಬರಬೇಕಿದೆ.
ಇಂತಹ ಸಂದರ್ಭದಲ್ಲಿ ನೂರುಲ್ ಉಲಮಾ ಎಂ.ಎ. ಉಸ್ತಾದರಂತಹ ದೂರದೃಷ್ಟಿಯ ಚಿಂತನೆಗಳು ಈ ಕಾಲಕ್ಕೆ ಹೊಂದುವ ರೀತಿಯಲ್ಲಿ ಮತ್ತೆ ಸಮಾಜದ ಮುಂದೆ ಬರಬೇಕಾಗಿದೆ. ಅವರ ಚಿಂತನೆಗಳನ್ನು ಆಧಾರವಾಗಿಟ್ಟುಕೊಂಡು ಸಮಸ್ತದ ಉಲಮಾ ನೇತೃತ್ವವು ಕರ್ನಾಟಕದ ವಾಸ್ತವ ಪರಿಸ್ಥಿತಿಗೆ ಅನುಗುಣವಾದ ಕಾರ್ಯಯೋಜನೆಗಳನ್ನು ರೂಪಿಸಬೇಕಾಗಿದೆ.
ಕೇರಳ ಮತ್ತು ಕರ್ನಾಟಕದ ಮುಸ್ಲಿಂ ಸಮಾಜವನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ಅಳೆಯುವುದು ಸಾಧ್ಯವಿಲ್ಲ. ಎರಡೂ ರಾಜ್ಯಗಳ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಪರಿಸ್ಥಿತಿಗಳು ಪರಸ್ಪರ ವಿಭಿನ್ನವಾಗಿವೆ. ಆದ್ದರಿಂದ ನಮ್ಮ ಮಣ್ಣಿನ ವಾಸ್ತವಿಕತೆಯನ್ನು ಅರ್ಥಮಾಡಿಕೊಂಡು, ಎಲ್ಲ ಆಯಾಮಗಳನ್ನು ಅಳೆದು-ತೂಗಿ ಸೂಕ್ತ ನಿರ್ಣಯಗಳು ಮತ್ತು ಮಾರ್ಗದರ್ಶನಗಳನ್ನು ನೀಡಬಲ್ಲ ಉಲಮಾ ನಾಯಕತ್ವ ಇಂದು ಅತ್ಯಗತ್ಯವಾಗಿದೆ.
ಈ ನಿಟ್ಟಿನಲ್ಲಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರ ಚಿಂತನೆಗಳು ನನಗೆ ಅತ್ಯಂತ ಪ್ರಬುದ್ಧ ಹಾಗೂ ದೂರದೃಷ್ಟಿಯುತವಾಗಿ ಕಂಡಿವೆ. ಕರ್ನಾಟಕದ ಪರಿಸ್ಥಿತಿಗೆ ಅನುಗುಣವಾದ ರಾಜಕೀಯ ಭಾಗವಹಿಸುವಿಕೆ, ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯದ ಭವಿಷ್ಯದ ಕುರಿತು ಅವರು ನೀಡುವ ಮಾರ್ಗದರ್ಶನ ಕಾಲದ ಅಗತ್ಯಕ್ಕೆ ತಕ್ಕದ್ದಾಗಿದೆ.
ಸಮಸ್ತದ ಶತಮಾನೋತ್ಸವ (ಸೆಂಟಿನರಿ) ಕೇವಲ ಒಂದು ಸಂಭ್ರಮಾಚರಣೆಯಾಗದೆ, ಮುಂದಿನ ನೂರು ವರ್ಷಗಳ ದಿಕ್ಕನ್ನು ನಿರ್ಧರಿಸುವ ಚಿಂತನೆಯ ವೇದಿಕೆಯಾಗಬೇಕು ಎಂಬುದು ನನ್ನ ಆಶಯ. ನಮ್ಮ ಕರುನಾಡಿನ ಮುಸ್ಲಿಂ ಸಮಾಜಕ್ಕೆ ಸಮಸ್ತದ ಆಶೀರ್ವಾದ ಮತ್ತು ಮಾರ್ಗದರ್ಶನ ತಲೆತಲಾಂತರಗಳಿಂದ ದೊರಕಿದೆ. ಈಗ ನಮ್ಮ ಮಣ್ಣಿನ ಅಗತ್ಯಗಳಿಗೆ ಹೊಂದುವಂತಹ ನಿಲುವುಗಳು, ನಿರ್ಧಾರಗಳು ಮತ್ತು ಕಾರ್ಯತಂತ್ರಗಳನ್ನು ರೂಪಿಸಿ, ಸಮಸ್ತದ ನೂರು ವರ್ಷಗಳ ಇತಿಹಾಸವನ್ನು ಮುಂದಿನ ತಲೆಮಾರಿಗೆ ಆದರ್ಶಪೂರ್ಣ ಪರಂಪರೆಯಾಗಿ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಅಲ್ಲಾಹು ನಮ್ಮ ಉಲಮಾಗಳಿಗೆ ಆರೋಗ್ಯ, ಆಯುಷ್ಯ ಮತ್ತು ದೂರದೃಷ್ಟಿಯನ್ನು ಹೆಚ್ಚಿಸಲಿ. ನಮ್ಮ ಸಮಾಜಕ್ಕೆ ಐಕ್ಯತೆ, ಪ್ರಗತಿ ಹಾಗೂ ಸನ್ಮಾರ್ಗವನ್ನು ಅನುಗ್ರಹಿಸಲಿ. ಆಮೀನ್.
✍️ ಲೇಖನ: ಮೌಲಾನಾ ಎನ್ ಕೆ ಎಂ ಶಾಫಿ ಸಅದಿ
(ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತು / ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್)















ಇನ್ನಷ್ಟು ಸುದ್ದಿಗಳು
‘ಸಮಸ್ತ’: ಇತಿಹಾಸ ಮತ್ತು ವರ್ತಮಾನದ ನೆನಪುಗಳನ್ನು ಮೆಲುಕು ಹಾಕಿದ ನಾಯಕರು
ಅನಿವಾಸಿಗಳಿಗೆ ಭಾರಿ ಹೊಡೆತ; ಪಾಸ್ಪೋರ್ಟ್ ದರಗಳಲ್ಲಿ ಗಣನೀಯ ಹೆಚ್ಚಳ- ಪರಿಷ್ಕೃತ ಶುಲ್ಕ ಜುಲೈ 1 ರಿಂದ ಜಾರಿ
ಗಲ್ಫ್ ಸೇರಿದಂತೆ ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ‘ಏರ್ ಸುವಿಧಾ’ ಡಿಕ್ಲರೇಷನ್ ಕಡ್ಡಾಯ
ಪಾಸ್ಪೋರ್ಟ್ ಮತ್ತು ಪೌರತ್ವದ ವಿರೋಧಾಭಾಸ – ಜಗತ್ತಿಗೆ ಭಾರತೀಯ, ಸ್ವದೇಶದಲ್ಲೇ ಪ್ರಶ್ನಾರ್ಹ?
ಆಧಾರ್ ಮತ್ತು ಪಾಸ್ಪೋರ್ಟ್ ಪೌರತ್ವ ದಾಖಲೆಯಲ್ಲ: ಹಾಗಾದ್ರೆ ನಿಜವಾದ ದಾಖಲೆ ಯಾವುದು?
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ