ಮಲಪ್ಪುರಂ: ಸಮಸ್ತ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ (81) ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದಾಗಿ ಇಂದು ಮಧ್ಯಾಹ್ನ ಪೆರಿಂತಲ್ಮಣ್ಣದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಂತಿಮ ಸಂಸ್ಕಾರ (ಖಬರಡಕ್ಕಂ) ನಾಳೆ (24-07-2026 ಶುಕ್ರವಾರ) ಬೆಳಿಗ್ಗೆ 10 ಗಂಟೆಗೆ ತಿರೂರ್ಕಾಡ್ ಜುಮಾ ಮಸೀದಿಯ ಕಬರಸ್ಥಾನದಲ್ಲಿ ನಡೆಯಲಿದೆ.
2016 ರಲ್ಲಿ ಚೆರುಶ್ಶೇರಿ ಝೈನುದ್ದೀನ್ ಮುಸ್ಲಿಯಾರ್ ಅವರ ಅಗಲಿಕೆಯ ನಂತರ ಅವರು ಸಮಸ್ತದ ಜನರಲ್ ಸೆಕ್ರೆಟರಿಯಾಗಿ ನೇಮಕಗೊಂಡಿದ್ದರು. ಮಲಪ್ಪುರಂ ಜಿಲ್ಲೆಯ ಇರುಂಪುಝಿ ತೆಕ್ಕುಮ್ಮುರಿಯಲ್ಲಿ ತಿರೂರ್ಕ್ಕಾಡ್ ಕುನ್ನತ್ ಮೂಸಾ ಹಾಜಿ ಮತ್ತು ಮಾಡಂಬಿ ಇಯ್ಯತ್ತುಟ್ಟಿ ಅವರ ಮಗನಾಗಿ 1945 ರಲ್ಲಿ ಇವರ ಜನನವಾಯಿತು. 2013 ರಿಂದ ಕಾಸರಗೋಡು ಜಿಲ್ಲಾ ಖಾಝಿಯಾಗಿರುವ ಆಲಿಕ್ಕುಟ್ಟಿ ಮುಸ್ಲಿಯಾರ್ ಅವರು 2003 ರಿಂದ ಪಟ್ಟಿಕ್ಕಾಡ್ ಜಾಮಿಆ ನೂರಿಯಾ ಅರೇಬಿಕ್ ಕಾಲೇಜಿನ ಪ್ರಿನ್ಸಿಪಾಲ್ ಕೂಡ ಆಗಿದ್ದರು.
ಪ್ರಾಥಮಿಕ ಧಾರ್ಮಿಕ ಶಿಕ್ಷಣವನ್ನು ಅಜ್ಜ ಕುನ್ನತ್ ಆಲಿ ಹಾಜಿ ಅವರ ‘ಓತುಪುರ’ದಲ್ಲಿ (ಮದ್ರಸಾ) ಮತ್ತು ಲೌಕಿಕ ಶಿಕ್ಷಣವನ್ನು ತಿರೂರ್ಕ್ಕಾಡ್ ಮಾಪಿಳ ಶಾಲೆಯಲ್ಲಿ ಪೂರೈಸಿದರು. ಏಳನೇ ವಯಸ್ಸಿನಲ್ಲಿ ಇರುಂಪುಝಿ ತೆಕ್ಕುಮ್ಮುರಿಯಲ್ಲಿ ದರ್ಸ್ ಶಿಕ್ಷಣವನ್ನು ಆರಂಭಿಸಿದರು. ನಾಲ್ಕು ವರ್ಷಗಳ ನಂತರ ಪುತ್ತನಂಗಡಿ ಜುಮಾ ಮಸೀದಿ, ಬಳಿಕ ಅರಿಪ್ರ ದರ್ಸ್ ಹಾಗೂ ನಂತರ ಪಡಿಞಾಟ್ಟುಮುರಿ ದರ್ಸ್‌ನಲ್ಲಿ ಶಿಕ್ಷಣ ಮುಂದುವರಿಸಿದರು. 1964 ರಲ್ಲಿ ಜಾಮಿಆ ನೂರಿಯಾಗೆ ಸೇರಿದ ಅವರು ಅಲ್ಲಿ ನಾಲ್ಕು ವರ್ಷಗಳ ಕಾಲ ವ್ಯಾಸಂಗ ಮಾಡಿದರು.
ಶಂಸುಲ್ ಉಲಮಾ, ಕೊಟ್ಟುಮಲ ಅಬೂಬಕರ್ ಮುಸ್ಲಿಯಾರ್, ತಾಝೆಕ್ಕೋಡ್ ಕುಞಲವಿ ಮುಸ್ಲಿಯಾರ್, ಪೆರಿಂತಲ್ಮಣ್ಣ ಸೈದಾಲಿ ಮುಸ್ಲಿಯಾರ್, ವಳಪುರಂ ಕೆ.ಟಿ. ಮುಹಮ್ಮದ್ ಮುಸ್ಲಿಯಾರ್, ಅಬ್ದುಲ್ ಖಾದರ್ (ಕಾಯಿ) ಮುಸ್ಲಿಯಾರ್ ಹಾಗೂ ಪೆರುಂಬಲಂ ಬಾಪ್ಪುಟ್ಟಿ ಮುಸ್ಲಿಯಾರ್ ಇವರ ಪ್ರಮುಖ ಉಸ್ತಾದ್‌ಗಳಾಗಿದ್ದರು (ಗುರುಗಳು).
16 ನೇ ವಯಸ್ಸಿನಲ್ಲಿ ತಿರೂರ್ಕ್ಕಾಡ್ ಮಹಲ್ ಮಸೀದಿಯ ಖತೀಬರಾಗಿ ಮತ್ತು 20 ನೇ ವಯಸ್ಸಿನಲ್ಲಿ ಮಹಲ್ ಖಾಝಿಯಾಗಿ ನೇಮಕಗೊಳ್ಳುವ ಮೂಲಕ ಸಣ್ಣ ವಯಸ್ಸಿನಲ್ಲೇ ನಾಯಕತ್ವದ ಪಟುತ್ವವನ್ನು ಸಾಬೀತುಪಡಿಸಿದ ವ್ಯಕ್ತಿತ್ವ ಅವರದ್ದು.1968 ರಲ್ಲಿ ಪಟ್ಟಿಕ್ಕಾಡ್ ಜಾಮಿಆ ನೂರಿಯಾ ಅರೇಬಿಕ್ ಕಾಲೇಜಿನಿಂದ ‘ಫೈಝಿ’ ಪದವಿ ಪಡೆದ ನಂತರ ಮೀನಾರ್ಕುಝಿ ದರ್ಸ್‌ನಲ್ಲಿ ಮೊದಲ ಸೇವೆ ಸಲ್ಲಿಸಿದರು. 1978 ರಲ್ಲಿ ಚೆಮ್ಮಂಗಡವ್ ದರ್ಸ್‌ಗೆ ಬದಲಾದರಾದರೂ, 1979 ರಲ್ಲಿ ಪಟ್ಟಿಕ್ಕಾಡ್ ಜಾಮಿಆ ನೂರಿಯಾದಲ್ಲಿ ಶಂಸುಲ್ ಉಲಮಾ ಅವರ ತೆರವಾದ ಸ್ಥಾನಕ್ಕೆ ಅಧ್ಯಾಪಕರಾಗಿ ಮತ್ತು ನಂತರ 2003 ರಿಂದ ಅಲ್ಲಿ ಪ್ರಿನ್ಸಿಪಾಲ್ ಆಗಿ ನೇಮಕಗೊಂಡರು.
1970 ರಲ್ಲಿ ಸಮಸ್ತ ಪೆರಿಂತಲ್ಮಣ್ಣ ತಾಲೂಕು ಸೆಕ್ರೆಟರಿಯಾಗಿ ಮತ್ತು 1976 ರಲ್ಲಿ ಸಮಸ್ತ ಮಲಪ್ಪುರಂ ಜಿಲ್ಲಾ ವೈಸ್ ಪ್ರೆಸಿಡೆಂಟ್ ಆಗಿ ಆಯ್ಕೆಯಾದರು. 1978 ರಿಂದ ಜಾಮಿಆ ಹಳೆಯ ವಿದ್ಯಾರ್ಥಿ ಸಂಘಟನೆಯಾದ ‘ಆಸ್‌ಫೋಜನ್’ (OSFOJAN) ನ ಜನರಲ್ ಸೆಕ್ರೆಟರಿಯಾಗಿದ್ದರು. 1986 ರಲ್ಲಿ ಸಮಸ್ತ ಮುಶಾವರಾ ಸದಸ್ಯರಾಗಿ ಹಾಗೂ 1992 ರಲ್ಲಿ ಎಸ್.ವೈ.ಎಸ್. (SYS) ಜನರಲ್ ಸೆಕ್ರೆಟರಿಯಾಗಿ ಆಯ್ಕೆಯಾದರು. 2010 ರಲ್ಲಿ ಸಮಸ್ತ ಜಂಟಿ ಕಾರ್ಯದರ್ಶಿಯಾದರು (ಜಾಯಿಂಟ್ ಸೆಕ್ರೆಟರಿ). 2009 ರಿಂದ ಸಮಸ್ತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿದ್ದರು.
ಭಾರತದ ಒಳಗೂ ಮತ್ತು ಹೊರಗೂ ಹಲವಾರು ವಿಷಯಗಳ ಬಗ್ಗೆ ಪ್ರಬಂಧಗಳನ್ನು ಮಂಡಿಸಿರುವ ಹಾಗೂ ಭಾರತೀಯ ಮುಸ್ಲಿಮರನ್ನು ಪ್ರತಿನಿಧಿಸಿ ಅನೇಕ ದೇಶಗಳ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿರುವ ಆಲಿಕ್ಕುಟ್ಟಿ ಮುಸ್ಲಿಯಾರ್ ಅವರು ಪ್ರಸ್ತುತ ‘ಮುಸ್ಲಿಂ ವರ್ಲ್ಡ್ ಲೀಗ್’ನ ‘ಇಸ್ಲಾಮಿಕ್ ಫಿಖ್ಹ್ ಕೌನ್ಸಿಲ್’ ಸದಸ್ಯರೂ ಆಗಿದ್ದರು. 1978 ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುವ ಇಂಗ್ಲಿಷ್ ಮತ್ತು ಫಾರಿನ್ ಲ್ಯಾಂಗ್ವೇಜಸ್ ಯೂನಿವರ್ಸಿಟಿ (EFLU) ಯ ಪಠ್ಯಕ್ರಮ ರಚನಾ ಸಮಿತಿಯ ಸದಸ್ಯರಾಗಿದ್ದರು.
2008 ರಲ್ಲಿ ಈಜಿಪ್ಟ್‌ನ ಅಲ್ ಅಝ್ಹರ್ ವಿಶ್ವವಿದ್ಯಾಲಯದಲ್ಲಿ ಶಿಹಾಬ್ ತಂಙಳ್ ಅವರ ಪರವಾಗಿ ಅಝ್ಹರ್ ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಭಾಗವಹಿಸಿದ್ದರು. 2011 ರಲ್ಲಿ ಲಿಬಿಯಾದಲ್ಲಿ ಅಧ್ಯಕ್ಷ ಮುಅಮ್ಮರ್ ಗದಾಫಿ ನೇತೃತ್ವದಲ್ಲಿ ನಡೆದ ಅಂತರರಾಷ್ಟ್ರೀಯ ಸೂಫಿ ಸಮ್ಮೇಳನದಲ್ಲಿ, 2012 ರಲ್ಲಿ ಮೊರಾಕ್ಕೋದಲ್ಲಿ ನಡೆದ ಸೂಫಿ ಸಮ್ಮೇಳನದಲ್ಲಿ ಹಾಗೂ ನಂತರದ ಎರಡು ವರ್ಷಗಳಲ್ಲಿ ಆಫ್ರಿಕನ್ ದೇಶವಾದ ಸೆನೆಗಲ್‌ನಲ್ಲಿ ನಡೆದ ಸಮ್ಮೇಳನಗಳಲ್ಲಿ ‘ತಸವ್ವುಫ್’ (ಸೂಫಿ ತತ್ವಶಾಸ್ತ್ರ) ಕುರಿತು ಪ್ರಬಂಧಗಳನ್ನು ಮಂಡಿಸಿದರು.
2014 ರಿಂದ ‘ಸುಪ್ರಭಾತಂ’ ದಿನಪತ್ರಿಕೆಯ ಅಧ್ಯಕ್ಷರಾಗಿದ್ದರು. 2003 ರಿಂದ 2006 ರವರೆಗೆ ಕೇರಳ ಹಜ್ ಸಮಿತಿಯ ಅಧ್ಯಕ್ಷರಾಗಿದ್ದ ಅವರು, 2006 ರಿಂದ 2009 ರವರೆಗೆ ಭಾರತೀಯ ಹಜ್ ಸಮಿತಿಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಸಚಿವರಲ್ಲದ ವ್ಯಕ್ತಿಯೊಬ್ಬರು ಅಧ್ಯಕ್ಷ ಹುದ್ದೆಗೆ ತಲುಪಿದ್ದು ಆಲಿಕ್ಕುಟ್ಟಿ ಮುಸ್ಲಿಯಾರ್ ಅವರೇ ಮೊದಲು. 1992 ರಿಂದ 2016 ರವರೆಗೆ ಎಸ್.ವೈ.ಎಸ್. ಜನರಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2004 ರಿಂದ ಕೇರಳ ರಾಜ್ಯ ಮುಸ್ಲಿಂ ಅನಾಥಾಶ್ರಮ ಸಮನ್ವಯ ಸಮಿತಿಯ ಉಪಾಧ್ಯಕ್ಷರೂ ಆಗಿದ್ದರು. ‘ಅಲ್ ಮುಅಲ್ಲಿಮ್’, ‘ಅಲ್ ನೂರ್’ ಮಾಸಪತ್ರಿಕೆಗಳು ಹಾಗೂ ‘ಸುನ್ನಿ ಅಫ್ಕಾರ್’ ಪತ್ರಿಕೆಗಳ ಮುಖ್ಯ ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು.















ಇನ್ನಷ್ಟು ಸುದ್ದಿಗಳು
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ಒಪ್ಪಂದವನ್ನು ಗಾಳಿಗೆ ತೂರಿ ಇರಾನ್ ಮೇಲೆ ಯುಎಸ್ ದಾಳಿ- ಗಲ್ಫ್ ವಲಯದಲ್ಲಿ ಮತ್ತೆ ಆತಂಕ