janadhvani

Kannada Online News Paper

ತಪ್ಪು ಮುನ್ನೆಚ್ಚರಿಕೆ ಸಂದೇಶ- ತಾಂತ್ರಿಕ ದೋಷಕ್ಕೆ ವಿಷಾದ ವ್ಯಕ್ತಪಡಿಸಿದ ಯುಎಇ

ಸಂಘರ್ಷದ ಸಮಯವನ್ನು ನೆನಪಿಸುವಂತಹ ಮುನ್ನೆಚ್ಚರಿಕೆಯು ಮೊಬೈಲ್ ಫೋನ್‌ಗಳಿಗೆ ಬಂದಿತ್ತು. ಯುದ್ಧ ಕೊನೆಗೊಂಡ ನೆಮ್ಮದಿಯಲ್ಲಿದ್ದ ಜನರನ್ನು ಇದು ಆತಂಕಕ್ಕೀಡು ಮಾಡಿತು.

ದುಬೈ: ಕ್ಷಿಪಣಿ ದಾಳಿಯ ಸಾಧ್ಯತೆಯಿದೆ ಎಂಬ ರೀತಿಯಲ್ಲಿ ಮೊಬೈಲ್ ಫೋನ್‌ಗಳಿಗೆ ಬಂದ ಮುನ್ನೆಚ್ಚರಿಕೆಯು ಯುಎಇ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಶುಕ್ರವಾರ ಸಂಜೆ ದುಬೈ ಮತ್ತು ಅಬುಧಾಬಿಯ ಮೊಬೈಲ್ ಫೋನ್‌ಗಳಿಗೆ ಈ ಜಾಗರೂಕತೆಯ ಸಂದೇಶ ಬಂದಿತ್ತು. ಆದರೆ, ಇದು ತಾಂತ್ರಿಕ ದೋಷದಿಂದ ಸಂಭವಿಸಿದೆ ಎಂದು ರಾಷ್ಟ್ರೀಯ ಭದ್ರತಾ ಸುಪ್ರೀಂ ಕೌನ್ಸಿಲ್ ನಂತರ ಸ್ಪಷ್ಟಪಡಿಸಿದೆ. ಅಲ್ಲದೆ, ದೇಶದ ನಿವಾಸಿಗಳಲ್ಲಿ ಅಧಿಕಾರಿಗಳು ಕ್ಷಮೆಯಾಚಿಸಿದ್ದಾರೆ.

ಶುಕ್ರವಾರ ಸಂಜೆ ಸುಮಾರು 5.17 ಕ್ಕೆ ನಿವಾಸಿಗಳಿಗೆ ಬಂದ ಮೊದಲ ತುರ್ತು ಸಂದೇಶದಲ್ಲಿ, ‘ಕ್ಷಿಪಣಿ ದಾಳಿಯ ಭೀತಿ ಉಂಟಾಗುವ ಸಾಧ್ಯತೆಯಿದೆ’ ಎಂಬ ಮುನ್ನೆಚ್ಚರಿಕೆಯೊಂದಿಗೆ ‘ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ’ ವಿನಂತಿಸಲಾಗಿತ್ತು. ಸಂಘರ್ಷದ ಸಮಯವನ್ನು ನೆನಪಿಸುವಂತಹ ಮುನ್ನೆಚ್ಚರಿಕೆಯು ಮೊಬೈಲ್ ಫೋನ್‌ಗಳಿಗೆ ಬಂದಿತ್ತು. ಯುದ್ಧ ಕೊನೆಗೊಂಡ ನೆಮ್ಮದಿಯಲ್ಲಿದ್ದ ಜನರನ್ನು ಇದು ಆತಂಕಕ್ಕೀಡು ಮಾಡಿತು. ಈ ಮುನ್ನೆಚ್ಚರಿಕೆಯ ಬೆನ್ನಲ್ಲೇ ಪರಿಸ್ಥಿತಿ ಸುರಕ್ಷಿತವಾಗಿದೆ ಮತ್ತು ಸಹಕಾರಕ್ಕೆ ಧನ್ಯವಾದಗಳು ಎಂದು ತಿಳಿಸುವ ಸಂದೇಶ ಬಂದಿತು.

ಆದರೆ, ಅಸಹಜವಾದ ರೀತಿಯಲ್ಲಿ ಬಂದಿದ್ದ ಮುನ್ನೆಚ್ಚರಿಕೆಯ ಸಂದೇಶವನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿತು. “ನಿಮಗೆ ಬಂದಿರುವ ಹಿಂದಿನ ಮುನ್ನೆಚ್ಚರಿಕೆ ಸಂದೇಶವನ್ನು ನಿರ್ಲಕ್ಷಿಸಿ” ಎಂದು ಗೃಹ ಸಚಿವಾಲಯವು ನಿವಾಸಿಗಳಿಗೆ ಸ್ಪಷ್ಟಪಡಿಸಿತು. ಏನಾಗುತ್ತಿದೆ ಎಂದು ತಿಳಿಯದೆ ಹಲವರು ಸಂಶಯದಿಂದ ನಿಂತಿದ್ದಾಗ, ರಾಷ್ಟ್ರೀಯ ಭದ್ರತಾ ಸುಪ್ರೀಂ ಕೌನ್ಸಿಲ್‌ನ ವಿವರಣೆ ಹೊರಬಂದಿತು.

ಮೊಬೈಲ್‌ನಲ್ಲಿ ಬಂದ ಸಂದೇಶಗಳು ತಾಂತ್ರಿಕ ದೋಷದಿಂದಾಗಿ ಸಂಭವಿಸಿವೆ ಎಂದು ರಾಷ್ಟ್ರೀಯ ಭದ್ರತಾ ಸುಪ್ರೀಂ ಕೌನ್ಸಿಲ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ಪ್ರಕಟಣೆ ಹೊರಡಿಸಿವೆ. ಜನರಿಗೆ ಉಂಟಾದ ಅನಾನುಕೂಲತೆಗೆ ಅಧಿಕಾರಿಗಳು ಕ್ಷಮೆ ಯಾಚಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲಾಗಿದೆ ಮತ್ತು ಅಧಿಕೃತ ಚಾನೆಲ್‌ಗಳ ಹೊರತಾಗಿ ಬರುವ ಯಾವುದೇ ಮಾಹಿತಿಯನ್ನು ಸಾರ್ವಜನಿಕರು ಪ್ರಚಾರ ಮಾಡಬಾರದು ಎಂದು ಅಧಿಕಾರಿಗಳು ವಿನಂತಿಸಿದ್ದಾರೆ.

ಇದನ್ನೂ ಓದಿರಿ...