ನವದೆಹಲಿ:ಹಣಕಾಸಿನ ವಹಿವಾಟಿನ ಯೂನಿಫೈಡ್ ಪೇಮೆಂಟ್ ಇಂಟರ್ ಫೇಸ್ ಅಥವಾ ಯುಪಿಐ ಪಾವತಿ ವ್ಯವಸ್ಥೆಯು ಎರಡು ದಿನಗಳ ಕಾಲ ರಾತ್ರಿ 1ರಿಂದ ಬೆಳಗಿನ ಜಾವದ 3ಗಂಟೆವರೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಎನ್ ಪಿಸಿಐ (ರಾಷ್ಟ್ರೀಯ ಪಾವತಿ ಕಾರ್ಪೋರೇಶನ್ ಆಫ್ ಇಂಡಿಯಾ) ಶುಕ್ರವಾರ(ಜನವರಿ 22, 2021) ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಎನ್ ಪಿಸಿಐ, ಯುಪಿಐ ಫ್ಲ್ಯಾಟ್ ಫಾರಂ ಅಪ್ ಗ್ರೇಡ್ ಪ್ರಕ್ರಿಯೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳ ಕಾಲ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಗ್ರಾಹಕರಿಗೆ ಮಾಹಿತಿ ನೀಡುತ್ತಿರುವುದಾಗಿ ತಿಳಿಸಿದೆ.
ಯುಪಿಐ ಮೂಲಕ ಹಣ ವರ್ಗಾವಣೆಯನ್ನು ಇನ್ನಷ್ಟು ಉತ್ತಮಗೊಳಿಸಲು ಅಪ್ ಗ್ರೇಡ್ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ಕೆಲವು ದಿನಗಳ ಕಾಲ ರಾತ್ರಿ 1ಗಂಟೆಯಿಂದ 3ರವರೆಗೆ ಯುಪಿಐ ಸೂಕ್ತವಾಗಿ ಕಾರ್ಯಾಚರಿಸುವುದಿಲ್ಲ ಎಂದು ಎನ್ ಪಿಸಿಐ ಟ್ವೀಟ್ ನಲ್ಲಿ ವಿವರಿಸಿದೆ.
ಗ್ರಾಹಕರು ಈ ನಿಗದಿತ ಸಮಯದಲ್ಲಿ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದು, ಯಾವುದೇ ಅನಾನುಕೂಲತೆಯಾಗದಂತೆ ತಮ್ಮ ವಹಿವಾಟನ್ನು ಬೇರೆ ಸಮಯದಲ್ಲಿ ಮಾಡಲು ತಿಳಿಸಿದೆ. ಯುಪಿಐ ಮುಂದಿನ ದಿನಗಳಲ್ಲಿ ಗೂಗಲ್ ಪೇ, ಫೋನ್ ಪೇ ರೀತಿ ಅತೀ ದೊಡ್ಡ ಡಿಜಿಟಲ್ ಪಾವತಿ ಫ್ಲ್ಯಾಟ್ ಫಾರಂ ಆಗಲಿದೆ ಎಂದು ವರದಿ ತಿಳಿಸಿದೆ.