ಇಸ್ಲಾಮಾಬಾದ್: ಮುಂದಿನ 24 ಗಂಟೆಗಳ ಒಳಗೆ ಯು.ಎಸ್-ಇರಾನ್ ಶಾಂತಿ ಒಪ್ಪಂದವು ಅಂತಿಮ ಹಂತಕ್ಕೆ ತಲುಪಲಿದ್ದು, ನಂತರ ಎಲೆಕ್ಟ್ರಾನಿಕ್ ವ್ಯವಸ್ಥೆಯ ಮೂಲಕ ಸಹಿ ಹಾಕಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ತಿಳಿಸಿದ್ದಾರೆ. ಮುಂದಿನ ವಾರ ತಾಂತ್ರಿಕ ಮಟ್ಟದ ಮಾತುಕತೆಗಳು ನಡೆಯಲಿವೆ ಎಂದು ಶಹಬಾಜ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಮಾತುಕತೆಯುದ್ದಕ್ಕೂ ತೋರಿದ ಬದ್ಧತೆಗಾಗಿ ಅವರು ಅಮೆರಿಕ ಮತ್ತು ಇರಾನ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ಜೊತೆಗೆ ಬೆಂಬಲ ನೀಡಿದ ವಲಯದ ಇತರ ದೇಶಗಳಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
“ಈ ಐತಿಹಾಸಿಕ ಶಾಂತಿ ಒಪ್ಪಂದವು ಶಾಶ್ವತ ಶಾಂತಿಗೆ ಬಲವಾದ ಅಡಿಪಾಯವಾಗಲಿದೆ ಎಂದು ನಮಗೆ ಖಚಿತತೆಯಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದರೊಂದಿಗೆ ಪಶ್ಚಿಮ ಏಷ್ಯಾದಲ್ಲಿ ಯುದ್ಧ ವಿರಾಮಕ್ಕೆ ಹಾದಿ ಸುಗಮವಾಗಿದೆ. ಹಾರ್ಮುಜ್ ಜಲಸಂಧಿಯ ಸಮೀಪವಿರುವ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದ ಹಲವಾರು ಇರಾನಿನ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ಹಕ್ಕು ಸಾಧಿಸಿದ ಕೆಲವೇ ಗಂಟೆಗಳ ನಂತರ ಪಾಕ್ ಪ್ರಧಾನಿಯ ಈ ಪ್ರತಿಕ್ರಿಯೆ ಬಂದಿದೆ. ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಹಾಕುವ ಸಾಧ್ಯತೆ ಶೇಕಡಾ 85 ರಷ್ಟಿದೆ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಬಹಿರಂಗಪಡಿಸಿದ್ದರು.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಕೂಡ ಶುಕ್ರವಾರ ಸರ್ಕಾರಿ ದೂರದರ್ಶನದ ಮೂಲಕ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಮುಂಬರುವ ದಿನಗಳಲ್ಲೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಅವರು ಹೇಳಿದ್ದರು. ಫೆಬ್ರವರಿಯಲ್ಲಿ ಪ್ರಾರಂಭವಾದ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವು ಹತ್ತಿರದಲ್ಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಪುನರುಚ್ಚರಿಸಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ಕಡಲ ಸಂಚಾರಕ್ಕಾಗಿ ಮುಕ್ತಗೊಳಿಸಲು ಮತ್ತು ಇರಾನ್‌ನ ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಗಳನ್ನು ಯು.ಎಸ್ ಬಿಡುಗಡೆ ಮಾಡಲು ಒಪ್ಪಂದಕ್ಕೆ ಬರಲಾಗಿದೆ. ಮತ್ತೊಂದೆಡೆ, ಇರಾನ್‌ನ ಪರಮಾಣು ಇಂಧನ ಪುಷ್ಟೀಕರಣ ಯೋಜನೆಗಳ ಮೇಲೆ ನಿಯಂತ್ರಣ ಹೇರುವ ಯು.ಎಸ್-ಇಸ್ರೇಲ್ ಕ್ರಮವು ಹೊಸ ಒಪ್ಪಂದದೊಂದಿಗೆ ಭಾಗಶಃವಾದರೂ ಜಾರಿಗೆ ಬರಬಹುದು. ಈ ವಿಷಯದಲ್ಲಿ ಇರಾನ್ ಮಣಿಯಲಿದೆ ಎಂದು ವರದಿಗಳು ತಿಳಿಸಿವೆ.
ಒಪ್ಪಂದವು ಕಾರ್ಯರೂಪಕ್ಕೆ ಬರುವುದರೊಂದಿಗೆ, ಹಾರ್ಮುಜ್‌ನಲ್ಲಿನ ನಿರ್ಬಂಧಗಳನ್ನು ಇರಾನ್ ತೆಗೆದುಹಾಕಲಿದೆ. ಇದರಿಂದಾಗಿ ಜಾಗತಿಕ ತೈಲ ಬಿಕ್ಕಟ್ಟಿಗೆ ಪರಿಹಾರ ಸಿಗಲಿದೆ.
ಶಾಂತಿ ಒಪ್ಪಂದವು ಗಲ್ಫ್ ದೇಶಗಳಿಗೂ ನಿರಾಳತೆ ತರಲಿದೆ. ಇಸ್ಲಾಮಿಕ್ ಗಣರಾಜ್ಯದ ಯುರೇನಿಯಂ ಪುಷ್ಟೀಕರಣದ ಕುರಿತಾದ ಮಾತುಕತೆಗಳು ಮಧ್ಯಂತರ ಒಪ್ಪಂದಕ್ಕೆ ಸಹಿ ಹಾಕಿದ ನಂತರ ನಡೆಯಲಿವೆ. ಶುಕ್ರವಾರ ಮುಂಜಾನೆ ಇರಾನ್ ಮೇಲೆ ಪ್ರಬಲ ದಾಳಿ ನಡೆಸಲಾಗುವುದು ಎಂದು ಕಳೆದ ದಿನ ಟ್ರಂಪ್ ಹೇಳಿದ್ದರು. ಆದರೆ, ಶಾಂತಿ ಒಪ್ಪಂದದತ್ತ ಮುನ್ನಡೆಯುತ್ತಿರುವ ಕಾರಣ, ಕೊನೆಯ ಕ್ಷಣದಲ್ಲಿ ದಾಳಿಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಟ್ರಂಪ್ ತಿಳಿಸಿದರು.
ಒಪ್ಪಂದದ ಪ್ರಮುಖ ಭಾಗದ ಕುರಿತು ಅಂತಿಮ ಹಂತದ ಸಹಮತ ಮೂಡಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯವೂ ತಿಳಿಸುವುದರೊಂದಿಗೆ, 105 ದಿನಗಳನ್ನು ಪೂರೈಸಿದ ಯುದ್ಧವು ಕೊನೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಮೊದಲ ಹಂತದಲ್ಲಿ 60 ದಿನಗಳ ಸಂಪೂರ್ಣ ಕದನ ವಿರಾಮವಿರಲಿದೆ. ಈ ದಿನಗಳಲ್ಲಿ ಅಂತಿಮ ಒಪ್ಪಂದಕ್ಕೆ ರೂಪ ನೀಡಲಾಗುವುದು. ಏಪ್ರಿಲ್ 8 ರಂದು ಎರಡೂ ದೇಶಗಳು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದವು. ಕದನ ವಿರಾಮದ ಭಾಗವಾಗಿ, ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ಸಹ ನಿಲ್ಲಿಸಬೇಕೆಂಬ ಇರಾನ್‌ನ ಶರತ್ತನ್ನು ಇಸ್ರೇಲ್ ನಿರಂತರವಾಗಿ ಉಲ್ಲಂಘಿಸಿರುವುದೇ ಪ್ರಸ್ತುತ ದಾಳಿಗಳಿಗೆ ಪ್ರಮುಖ ಕಾರಣವಾಗಿದೆ.
















ಇನ್ನಷ್ಟು ಸುದ್ದಿಗಳು
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ಒಪ್ಪಂದವನ್ನು ಗಾಳಿಗೆ ತೂರಿ ಇರಾನ್ ಮೇಲೆ ಯುಎಸ್ ದಾಳಿ- ಗಲ್ಫ್ ವಲಯದಲ್ಲಿ ಮತ್ತೆ ಆತಂಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ: ನಾಳೆ (ಜುಲೈ 8) ಶಾಲಾ-ಕಾಲೇಜುಗಳಿಗೆ ರಜೆ
ಅಜ್ಜಿನಡ್ಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ