janadhvani

Kannada Online News Paper

ಸೌದಿ: ಅಂತಿಮ ನಿರ್ಗಮನದಲ್ಲಿ ದೇಶ ತೊರೆಯುವವರಿಗೆ ಪ್ರಯಾಣ ವ್ಯವಸ್ಥೆ

ರಿಯಾದ್: ಸೌದಿ ಅರೇಬಿಯಾದಲ್ಲಿ ಉದ್ಯೋಗ ಒಪ್ಪಂದ ಕೊನೆಗೊಂಡು ಅಥವಾ ಅಂತಿಮ ನಿರ್ಗಮನ ಪಡೆದು ಸ್ವದೇಶಕ್ಕೆ ಮರಳಲು ಸಾಧ್ಯವಾಗದವರಿಗೆ ಸೌದಿ ಅರೇಬಿಯಾ ವಿಶೇಷ ಪ್ರಯಾಣವನ್ನು ವ್ಯವಸ್ಥೆಯನ್ನು ಒದಗಿಸಲಿದೆ. ಈ ಯೋಜನೆ ಕಾರ್ಮಿಕ ಮತ್ತು ಮಾನವ ಸಂಪನ್ಮೂಲ ಸಚಿವಾಲಯದ ಅಡಿಯಲ್ಲಿದೆ.

ಅಂತಿಮ ನಿರ್ಗಮನವನ್ನು ಪಡೆದವರು ಮತ್ತು ಅಂತಿಮ ನಿರ್ಗಮನ ನೀಡಲು ಬಯಸಿದವರನ್ನು ಈ ಮೂಲಕ ಸ್ವದೇಶಕ್ಕೆ ಕಳಿಸಲು ಕಂಪನಿಗಳಿಗೆ ಸಾಧ್ಯವಾಗಲಿದೆ. ಇದಕ್ಕಾಗಿ ದೇಶದ ಖಾಸಗಿ ಕಂಪನಿಗಳು ಅರ್ಜಿ ಸಲ್ಲಿಸಬಹುದು.ಎಲ್ಲಾ ದೇಶಗಳಿಗೂ ಪ್ರಯಾಣ ಸೌಲಭ್ಯವನ್ನು  ಒದಗಿಸಲಾಗುತ್ತದೆ.

ಕಾರ್ಯವಿಧಾನಗಳು ಇಲ್ಲಿವೆ.

1.ಅಂತಿಮ ನಿರ್ಗಮನ ಆಸಕ್ತ ಕಾರ್ಮಿಕರನ್ನು ಊರಿಗೆ ಕಳುಹಿಸಲು 14 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು. ಎರಡನೇ ಅರ್ಜಿಯನ್ನು 14 ದಿನಗಳ ನಂತರ ಮಾತ್ರ ಸಲ್ಲಿಸಬಹುದು. ಒಂದು ಅರ್ಜಿಯಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಮಿಕರಿಗೆ ಅಂತಿಮ ನಿರ್ಗಮನ ಪ್ರಯಾಣ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.

2. ಪಾಸ್‌ಪೋರ್ಟ್ನಲ್ಲಿ ನಮೂದಿಸಿದ ಪ್ರಕಾರ ಭರ್ತಿ ಮಾಡಿದ ಅರ್ಜಿಯನ್ನು ಕಾರ್ಮಿಕ ಮತ್ತು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಸಬೇಕು.

3. ಸಲ್ಲಿಸಬೇಕಾದ ದಾಖಲೆಗಳು:  ಅಂತಿಮ ನಿರ್ಗಮನ ಪಡೆದ ದಾಖಲೆ, ಕೆಲಸಗಾರನಿಗೆ ಎಲ್ಲಾ ಸವಲತ್ತುಗಳನ್ನು ಪಾವತಿಸಿರುವ ಬಗೆಗಿನ ದಾಖಲೆ, ಕೋವಿಡ್ 19 ರ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯದ ವೈದ್ಯಕೀಯ ಪ್ರಮಾಣಪತ್ರ, ನಿಗದಿತ ದಿನಾಂಕದಂದು ಕೆಲಸಗಾರನಿಗೆ ಕಂಪನಿಯು ಖರೀದಿಸಿದ ವಿಮಾನ  ಟಿಕೆಟ್‌.

4. ರೋಗಲಕ್ಷಣಗಳಿಂದಾಗಿ ಪ್ರಯಾಣ ಮೊಟಕುಗೊಂಡಲ್ಲಿ, ಆರೋಗ್ಯ ಸಚಿವಾಲಯದೊಂದಿಗೆ ಸಹಕರಿಸಿ. ವಿಮಾನ ನಿಲ್ದಾಣಕ್ಕೆ ಮತ್ತು ವಾಪಸು ಬರುವ ಸಾರಿಗೆ ವ್ಯವಸ್ಥೆಯನ್ನು ಕಂಪನಿಯು ಸಿದ್ಧಪಡಿಸಬೇಕು.

5. ಅರ್ಜಿ ಸಲ್ಲಿಸಿದ ಐದು ದಿನಗಳಲ್ಲಿ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಸಚಿವಾಲಯವು ಅರ್ಜಿಯನ್ನು ಸ್ವೀಕರಿಸುವ, ಅಥವಾ ತಿರಸ್ಕರಿಸುವ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ.

ತುರ್ತು ಸಂದರ್ಭದಲ್ಲಿ ಅಂತಿಮ ನಿರ್ಗಮನ ಪಡೆದ ಕಾರ್ಮಿಕರಿಗೆ ಇದು ಪ್ರಯೋಜನವಾಗಲಿದೆ. ಇದಲ್ಲದೆ, ಈಗಾಗಲೇ ಕಾರ್ಮಿಕರೊಂದಿಗೆ ಒಪ್ಪಂದ ಮುಗಿದಿರುವ ಕಂಪೆನಿಗಳು ಮತ್ತು ಪ್ರಸಕ್ತ ಸಂಕಷ್ಟದಲ್ಲಿರುವ ಕಂಪೆನಿಗಳಿಗೆ ಹೊಸ ವ್ಯವಸ್ಥೆಯು ಸಹಾಯವಾಗಲಿದೆ. ಮಾನವೀಯ ಪರಿಗಣನೆಗಳು ಮತ್ತು ಕಂಪನಿಗಳ ಹಿತಾಸಕ್ತಿಗಳನ್ನು ಆಧರಿಸಿ,ಕಾರ್ಮಿಕ ಮತ್ತು ಮಾನವ ಸಂಪನ್ಮೂಲ ಸಚಿವಾಲಯವು ಈ ಯೋಜನೆಯನ್ನು ಕೈಗೊಂಡಿದೆ.

error: Content is protected !! Not allowed copy content from janadhvani.com