janadhvani

Kannada Online News Paper

ದೆಹಲಿಯಲ್ಲಿ ಸಿಎಎ ಸಂಘರ್ಷ: ಅಮಿತ್ ಶಾ ಸೂಕ್ತ ಕ್ರಮ ಕೈಗೊಳ್ಳಬೇಕು- ಅರವಿಂದ್ ಕೇಜ್ರಿವಾಲ್

ನವದೆಹಲಿ,ಫೆ.24: ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿಗೂ ಮುನ್ನ ದೆಹಲಿಯಲ್ಲಿ ಸಿಎಎ ಮತ್ತು ಎನ್ಆರ್ಸಿ ಪರ-ವಿರೋಧಿ ನಡುವೆ ಸಂಭವಿಸುತ್ತಿರುವ ಸಂಘರ್ಷದ ಬಗ್ಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ದೆಹಲಿಯಲ್ಲಿ ಶಾಂತಿ ಮತ್ತು ಸಾಮರಸ್ಯ ಕದಡುವ ಘಟನೆಗಳು ತೀವ್ರ ಆತಂಕಕ್ಕೀಡು ಮಾಡಿವೆ. ಹೀಗಾಗಿ ಇದರ ವಿರುದ್ಧ ಕೂಡಲೇ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್ ಬೈಜಾಲ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಂತಿ ಮತ್ತು ಸಾಮರಸ್ಯ ನೆಲಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಗುಂಪುಗಳ ನಡುವಿನ ಸಂಘರ್ಷ ಎರಡನೇ ದಿನವೂ ಮುಂದುವರಿದಿದೆ. ಇಲ್ಲಿನ ಈಶಾನ್ಯ ಭಾಗದಲ್ಲಿ ಇರುವ ಮೌಜ್ಪುರದಲ್ಲಿ ಇಂದು ಸೋಮವಾರವೂ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿವೆ. ಈ ಕಲ್ಲು ತೂರಾಟದ ವೇಳೆ ಪೊಲೀಸ್ ಕಾನ್ಸ್ಟೇಬಲ್ ಓರ್ವ ಸಾವನ್ನಪ್ಪಿದ್ದಾರೆ. ಇದರಿಂದ ದೆಹಲಿಯ ಈಶಾನ್ಯ ಭಾಗದಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಭಾನುವಾರ(ನಿನ್ನೆ) ದೆಹಲಿಯ ಈಶಾನ್ಯ ಭಾಗದಲ್ಲಿರುವ ಜಫ್ರಾಬಾದ್ನಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದಿತ್ತು. ಪರಸ್ಪರ ಕಲ್ಲುತೂರಾಟದಲ್ಲಿ ತೊಡಗಿದ್ದ ಎರಡು ಗುಂಪುಗಳನ್ನು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್ ಬಳಕೆ ಮಾಡಿದ್ದರು. ಕೆಲ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರವೂ ಕೂಡ ನಡೆಸಲಾಗಿತ್ತು. ಈ ಬೆನ್ನಲ್ಲೇ ಸೋಮವಾರ ಕೂಡ ಇದೀ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಹೀನ್ ಬಾಗ್ನಲ್ಲಿ ನಿರಂತರ ಪ್ರತಿಭಟನೆ ಕಂಡಿದ್ದ ದೆಹಲಿ ಈಗ ಜಾಫ್ರಾಬಾದ್ನಲ್ಲೂ ಪ್ರತಿಭಟನೆಯ ಬಿಸಿ ಅನುಭವಿಸುತ್ತಿದೆ. ಸೀಲಂಪುರ್ನಿಂದ ಮೌಜ್ಪುರ್ ಮತ್ತು ಯಮುನಾ ವಿಹಾರ್ಗೆ ಸಂಪರ್ಕ ಸಾಧಿಸುವ ಜಾಫ್ರಾಬಾದ್ ಮೆಟ್ರೋ ಸ್ಟೇಷನ್ ಬಳಿಯ ರಸ್ತೆಯೊಂದನ್ನು ಸಿಎಎ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದು ಸೂಕ್ಷ್ಮ ಪರಿಸ್ಥಿತಿಗೆ ಎಡೆ ಮಾಡಿಕೊಟ್ಟಿದೆ. ರಸ್ತೆಯನ್ನು ಮುತ್ತಿಗೆ ಹಾಕಿದ ನೂರಾರು ಪ್ರತಿಭಟನಾಕಾರರಲ್ಲಿ ಮಹಿಳೆಯರೇ ಹೆಚ್ಚಾಗಿದ್ದರು. ಭದ್ರತೆಯ ದೃಷ್ಟಿಯಿಂದ ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಯಿತು. ಹಾಗೆಯೇ, ಮೌಜ್ಪುರ್-ಬಾಬರ್ಪುರ್ ಮೆಟ್ರೋ ಸ್ಟೇಷನ್ನ ದ್ವಾರಗಳನ್ನೂ ಬಂದ್ ಮಾಡಲಾಯಿತು.

ಇನ್ನು, ಕಳೆದ ಎರಡು ತಿಂಗಳಿನಿಂದ ದಿನಂಪ್ರತಿ 24 ಗಂಟೆ ಪ್ರತಿಭಟನೆ ಕಂಡಿದ್ದ ಶಾಹೀನ್ ಬಾಗ್ನಲ್ಲಿ ಪರಿಸ್ಥಿತಿ ಬಹುತೇಕ ಹಾಗೇ ಮುಂದುವರಿದಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಇಬ್ಬರು ಸಂಧಾನಕಾರರು ಬಂದು ಮಾತನಾಡಿದ ಬಳಿಕ ಪ್ರತಿಭಟನಾಕಾರರು ತಾವು ಕುಳಿತಿದ್ದ ರಸ್ತೆಯ ಪಾರ್ಶ್ವ ಭಾಗವನ್ನು ವಾಹನ ಸಂಚಾರಕ್ಕಾಗಿ ತೆರವು ಮಾಡಿದ್ಧಾರೆ. ಆದರೆ, ಪೊಲೀಸರು ಭದ್ರತಾ ದೃಷ್ಟಿಯಿಂದ ರಸ್ತೆಯಲ್ಲಿ ಬ್ಯಾರಿಕೇಡ್ಗಳನ್ನು ಹಾಕಿದ್ಧಾರೆ.

error: Content is protected !! Not allowed copy content from janadhvani.com