janadhvani

Kannada Online News Paper

ಬೆಂಗಳೂರು: ವಾಟ್ಸ್‌ಆ್ಯಪ್‌ನಲ್ಲಿ ಬುಧವಾರ ಸಂಜೆ ಫೊಟೊ ಮತ್ತು ವಿಡಿಯೊ ಡೌನ್‌ಲೋಡ್‌, ಅಪ್ಲೋಡ್‌ನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಲೇ ವಾಟ್ಸ್‌ಆ್ಯಪ್‌ ನಿಷೇಧವಾಗುವ ಕುರಿತು ಎರಡು ಸಂದೇಶಗಳು ವೈರಲ್‌ ಆದವು. ಆದರೆ, ವಾಟ್ಸ್‌ಆ್ಯಪ್‌ ಅನ್ನು ಭಾರತದಲ್ಲಿ ನಿಷೇಧ ಮಾಡುವ ಕುರಿತು ಕೇಂದ್ರ ಸರ್ಕಾರವಾಗಲಿ, ಗೂಗಲ್‌ ಆಗಲಿ ಸ್ವತಃ ವಾಟ್ಸ್‌ಆ್ಯಪ್‌ ಆಗಲಿ ಈವರೆಗೆ ಎಲ್ಲಿಯೂ ಹೇಳಿಲ್ಲ.

ಬುಧವಾರ ಸಂಜೆ 6.30ರಿಂದ 7 ಗಂಟೆಯ ಹೊತ್ತಿಗೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ ಇನ್‌ಸ್ಟಾಗ್ರಾಂಗಳಲ್ಲಿ ತಾಂತ್ರಿಕ ದೋಷ ಕಾಣಿಕೊಂಡಿತು. ವಿಡಿಯೊ, ಫೋಟೊಗಳ ಡೌನ್‌ಲೋಡ್‌ ಮತ್ತು ಅಪ್‌ಲೋಡ್‌ನಲ್ಲಿ ಸಮಸ್ಯೆಯುಂಟಾಯಿತು. ಮೊದಲಿಗೆ ಇಂಟರ್‌ನೆಟ್‌ ಸಮಸ್ಯೆ ಎಂದು ಭಾವಿಸಿಕೊಂಡಿದ್ದ ಗ್ರಾಹಕರು ನಂತರ, ತಮ್ಮ ಫೋನ್‌ನಲ್ಲಿ ಸಮಸ್ಯೆ ಇರಬಹುದು ಎಂದುಕೊಂಡರು. ಆದರೆ, ಬಹುತೇಕ ಎಲ್ಲ ಬಳಕೆದಾರರಲ್ಲಿಯೂ ಸಮಸ್ಯೆ ಕಾಣಿಸಿಕೊಂಡಿತು. ಸ್ವಲ್ಪಹೊತ್ತಿನಲ್ಲೇ ಅದು ಜಾಗತಿಕ ಸಮಸ್ಯೆ ಎಂದೂ ಗೊತ್ತಾಯಿತು. ವಾಟ್ಸ್‌ಆ್ಯಪ್‌ ತೊಂದರೆಯಿಂದ ಬಳಕೆದಾರರೆಲ್ಲ ಬೇಸರದಲ್ಲಿರುವಾಗಲೇ, ವಾಟ್ಸ್‌ಆ್ಯಪ್‌ ಬಂದ್‌ ಆಗುವ ಕುರಿತು ಎರಡು ಸಂದೇಶಗಳು ಮೊಬೈಲ್‌ಗಳಿಗೆ ಬಂದು ಬಿದ್ದವು. ಈ ಸಂದೇಶಗಳು ಸಮೂಹ ಸನ್ನಿ ಸೃಷ್ಟಿ ಮಾಡಿ ವೈರಲ್‌ ಆದವು. ಜನರಲ್ಲಿ ಆತಂಕ ಸೃಷ್ಟಿಸಿದವು.

‘ಇನ್ನು ಮುಂದೆ ನಿತ್ಯ ರಾತ್ರಿ 11.30ರಿಂದ ಬೆಳಗ್ಗೆ 6.00ರ ವರೆಗೆ ವಾಟ್ಸ್‌ಆ್ಯಪ್‌ ಬಂದ್‌ ಮಾಡಲು ಮೋದಿ ಸರ್ಕಾರ ಆದೇಶ ಮಾಡಿದೆ. ಈ ಸಂದೇಶವನ್ನು ಎಲ್ಲರಿಗೂ ಫಾರ್ವಾರ್ಡ್‌ ಮಾಡಲು ಕೋರಲಾಗಿದೆ. ಫಾರ್ವಾರ್ಡ್‌ ಮಾಡದೇ ಹೋದರೆ ನಿಮ್ಮ ವಾಟ್ಸ್‌ಆ್ಯಪ್‌ ಅಕೌಂಟ್‌ ಡಿಲೀಟ್‌ ಆಗಲಿದೆ. ಅಕೌಂಟ್‌ ಅನ್ನು ಮತ್ತೆಗೆ ಚಾಲ್ತಿಗೆ ತರಬೇಕಿದ್ದರೆ ₹499 ಪಾವತಿಸಬೇಕು. ಇದರ ಜತೆಗೆ ವಾಟ್ಸ್‌ಆ್ಯಪ್‌ನಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿವೆ. ಅದನ್ನು ನಾವು ಸರಿಪಡಿಸುತ್ತೇವೆ. ನೀವು ಈ ಸಂದೇಶವನ್ನು ಮುಂದಕ್ಕೆ ತಲುಪಿಸುತ್ತಾ ಹೋಗಬೇಕು. ಇಲ್ಲವಾದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಶನಿವಾರ ಬೆಳಗ್ಗೆಯಿಂದ ನಿಮ್ಮ ವಾಟ್ಸ್‌ಆ್ಯಪ್‌ ಬಂದ್‌ ಆಗಲಿದೆ ಅದನ್ನು ತಡೆಯಬೇಕಿದ್ದರೆ 10 ಜನಕ್ಕಾದರೂ ಈ ಸಂದೇಶ ಫಾರ್ವಾರ್ಡ್ ಮಾಡಿ,’ ಎಂದು ಮೊದಲ ಸಂದೇಶದಲ್ಲಿ ಬರೆಯಲಾಗಿತ್ತು.

ವಾಸ್ತವವೇನು?

ಬುಧವಾರ ಸಂಜೆ ವಾಟ್ಸ್‌ಆ್ಯಪ್‌ ಸೇರಿದಂತೆ ಬಹುತೇಕ ಸಾಮಾಜಿಕ ತಾಣಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು ಸತ್ಯ. ಆದರೆ, ಅದು ತಾಂತ್ರಿಕ ಸಮಸ್ಯೆ ಎಂದು ತಾಣಗಳೇ ಟ್ವೀಟ್‌ ಮಾಡಿ ತಿಳಿಸಿವೆ. ಗುರುವಾರ ಬೆಳಗ್ಗೆ ಹೊತ್ತಿಗೆ ಸಮಸ್ಯೆಗಳೆಲ್ಲವೂ ನಿವಾರಣೆಯಾಗಿವೆ ಎಂದೂ ಸಾಮಾಜಿಕ ತಾಣಗಳು ತಿಳಿಸಿವೆ. ನಿನ್ನೆಯ ಸಮಸ್ಯೆ ಬಗ್ಗೆ ವಾಟ್ಸ್‌ಆ್ಯಪ್‌ ಈ ವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಹಾಗೆಯೇ ಭಾರತದಲ್ಲಿ ನಿರ್ಬಂಧವಾಗುವ ಕುರಿತೂ ಯಾವುದೇ ಮಾಹಿತಿ ನೀಡಿಲ್ಲ.

ಇನ್ನು ಮೇಲಿನ ಸಂದೇಶಗಳಲ್ಲಿ ಸ್ಪಷ್ಟತೆಯೂ ಇಲ್ಲ. ಮೊದಲ ಸಂದೇಶದಲ್ಲಿ ರಾತ್ರಿ 11.30ರಿಂದ ವಾಟ್ಸ್‌ಆ್ಯಪ್‌ ಬಂದ್‌ ಆಗಲಿದೆ ಎಂದು ಮೊದಲಿಗೆ ಹೇಳಲಾಗುತ್ತದೆ. ನಂತರ ಸಂದೇಶವನ್ನು ಫಾರ್ವಾರ್ಡ್‌ ಮಾಡಿದರೆ ರದ್ದಾಗುವುದಿಲ್ಲ ಎನ್ನಲಾಗುತ್ತದೆ. ಕೊನೆಗೆ ಈ ಸಂದೇಶವನ್ನು ಹತ್ತು ಜನರಿಗಾದರೂ ಫಾರ್ವಾರ್ಡ್‌ ಮಾಡಿ ಎಂದು ಕೇಳಿಕೊಳ್ಳಲಾಗುತ್ತದೆ. ಹೀಗಾಗಿ, ವೈರಲ್‌ ಮಾಡಲೆಂದೇ ಕಿಡಿಗೇಡಿಗಳು ಸೃಷ್ಟಿ ಮಾಡಿದ ಸುಳ್ಳು ಸಂದೇಶಗಳಿವು ಎಂದು ಹೇಳಲು ಅಡ್ಡಿ ಇಲ್ಲ.

error: Content is protected !! Not allowed copy content from janadhvani.com