janadhvani

Kannada Online News Paper

ಝಮಾನ್ ಬೊಯ್ಸ್ ಹಾಗೂ ಬ್ಲಡ್ ಡೋನರ್ಸ್ ವತಿಯಿಂದ ಯಶಸ್ವಿ ರಕ್ತದಾನ ಶಿಬಿರ

ಕಲ್ಲಡ್ಕ: ಝಮಾನ್ ಬೊಯ್ಸ್ ಕಲ್ಲಡ್ಕ(ರಿ)ಮತ್ತು ಬ್ಲಡ್ ಡೋನರ್ಸ್ ಮಂಗಳೂರು(ರಿ) ಹಾಗೂ ಪಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಇದರ ಸಹ ಬಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ ಆದಿತ್ಯವಾರ ನಡೆಯಿತು.

ಈ ಕಾರ್ಯಕ್ರಮವನ್ನು ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಇಸ್ಮಾಯಿಲ್ ಫೈಝಿ ಉಸ್ತಾದರು ದುವಾ ನೆರವೇರಿಸುವ ಮೂಲಕ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಾರ್ತಾಭಾರತಿ ವರದಿಗಾರ ಲತೀಫ್ ನೇರಳಕಟ್ಟೆ ಮಾತನಾಡಿ ಜೀವನದಲ್ಲೇ ಶ್ರೇಷ್ಟ ದಾನಗಳಲ್ಲೊಂದಾದ ರಕ್ತದಾನವು ಒಬ್ಬ ವ್ಯಕ್ತಿಗೆ ಮರು ಜೀವ ನೀಡುವ ಶಕ್ತಿಯನ್ನು ಹೊಂದಿದೆ ಆ ನಿಟ್ಟಿನಲ್ಲಿ ಇಂತಹ ಶಿಬಿರಗಳ ಆಯೋಜನೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಬ್ಲಡ್ ಡೋನರ್ಸ್ ಮಂಗಳೂರು (ರಿ) ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ಅವರು ಮಾತನಾಡಿ ನಮ್ಮ ಸಂಸ್ಥೆ ಕಳೆದ 5 ವರ್ಷಗಳಿಂದ 178ಕ್ಕೂ ಅಧಿಕ ಶಿಬಿರಗಳನ್ನು ಆಯೋಜಿಸಿಕೊಂಡು 15,000ಕ್ಕಿಂತಲೂ ಮಿಕ್ಕ ರೋಗಿಗಳಿಗೆ ಕ್ಲಪ್ತ ಸಮಯದಲ್ಲಿ ರಕ್ತ ಪೂರೈಕೆಯಾಗಿರುತ್ತದೆ ಹಾಗೂ ಪಂಚ ವಾರ್ಷಿಕೋತ್ಸವದ ನೆಲೆಯಲ್ಲಿ ಅರ್ಹ ಮೂರು ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಕೈ ಹಾಕಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಿದ್ದೀಕ್ ಪನಾಮ ಅವರು ಮಾತನಾಡಿ ಹಾದಿ ತಪ್ಪುತ್ತಿರುವ ಯುವ ಸಮೂಹದ ಮಧ್ಯೆ ಇಂತಹ ನವ ಯುವ ಮನಸ್ಸುಗಳು ಸಮಾಜ ಸೇವೆಗಾಗಿ ಮಿಡಿದದ್ದು ನಿಜಕ್ಕೂ ಪ್ರಶಂಶನೀಯ ಎಂದು ಹೇಳುತ್ತಾ ಭದ್ರ ಭವಿಷ್ಯದ ಮಾದರಿ ಯುವಕರಾಗುವುದರೊಂದಿಗೆ ಕೇವಲ ಕ್ರೀಡಾ ಚಟುವಟಿಕೆ ಮಾತ್ರವಲ್ಲದೆ ಇಂತಹ ಮಹೋನ್ನತ ಮಹತ್ಕಾರ್ಯಗಳನ್ನು ಸಂಘಟಿಸುವ ಝಮಾನ್ ಬೊಯ್ಸ್ ಕಲ್ಲಡ್ಕದ ಕಾರ್ಯ ವೈಖರಿ ನಿಜಕ್ಕೂ ಮೆಚ್ಚಲೇಬೇಕೆಂದು ತಮ್ಮ ಮನದಾಳದ ಮಾತುಗಳ ಮೂಲಕ ನೆರೆದಿದ್ದ ಸಭಿಕರ ಗಮನಸೆಳೆದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ದಯಾನಂದ ಆಚಾರ್ಯ ಸೌದಿ ಅರೇಬಿಯಾ,ಸಮಾಜ ಸೇವಕರಾದ ಹಕೀಂ ಕಲ್ಲಡ್ಕ,ಡಿ ಕೆ ಅಝ್ಮಲ್ ಕಾಂತಡ್ಕ,ಸಿದ್ದೀಕ್ ಜಿ ಎಸ್ ,ಶಾಫಿ ಐ ಎನ್,ಜಾಫರ್ ಕಲ್ಲಡ್ಕ,ಝಮಾನ್ ಬಾಯ್ಸ್ ಕಲ್ಲಡ್ಕದ ಗೌರವಾಧ್ಯಕ್ಷರಾದ ರಹಿಮಾನ್ ಕೆ ಸಿ ರೋಡ್ ,ಹಜಾಜ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಇಮ್ತಿಯಾಝ್ ಗೋಳ್ತಮಜಲು,ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಾಧಿಕಾರಿ ಲಕ್ಷ್ಮೀ ಮೇಡಂ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಈ ಯಶಸ್ವೀ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ಒಟ್ಟು 133 ರಕ್ತದಾನಿಗಳು ರಕ್ತದಾನವನ್ನು ಮಾಡುವುದರೊಂದಿಗೆ ಯಶಸ್ವೀಯಾಗಿ ಪಾಲ್ಗೊಂಡರು.ಬ್ಲಡ್ ಡೋನರ್ಸ್ ಮಂಗಳೂರು ತಂಡದ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ, ಅಶ್ರಫ್. ಉಪ್ಪಿನಂಗಡಿ,ಮಾಸ್ಟರ್ ಮಹಮ್ಮದ್ ಫಾಝಿಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅವಿರತ ಸಮಾಜ ಸೇವಕರಾದ ,ತಮ್ಮ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಝಮಾನ್ ಬೊಯ್ಸ್ ಕಲ್ಲಡ್ಕ(ರಿ) ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಕಾರ್ಯ ನಿರ್ವಾಹಕರಾದ ಫಾರೂಕ್ ಬಿಗ್ ಗ್ಯಾರೇಜ್ ಹಾಗೂ ಲತೀಫ್ ಉಪ್ಪಿನಂಗಡಿ ಅವರನ್ನು ನೆರೆದಿದ್ದ ಸರ್ವ ಅತಿಥಿ ಸಮೂಹದ ಸಮಕ್ಷಮದಲ್ಲಿ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ರಕ್ತದಾನಿ ಗಳಿಗೆ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಝಮಾನ್ ಬೊಯ್ಸ್ ಕಲ್ಲಡ್ಕ(ರಿ)ಅಧ್ಯಕ್ಷರಾದ ಮನ್ಸೂರ್ ಕಲ್ಲಡ್ಕ ಸ್ವಾಗತಿಸಿ ,ವಂದಿಸಿದರು..
ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಕಾರ್ಯ ನಿರ್ವಾಹಕರಾದ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

ವರದಿ:ಬ್ಲಡ್ ಡೋನರ್ಸ್ ಮಂಗಳೂರು(ರಿ) ಮಾಧ್ಯಮ ವಿಭಾಗ

error: Content is protected !! Not allowed copy content from janadhvani.com