janadhvani

Kannada Online News Paper

ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ, ದಕ್ಷಿಣ ಕನ್ನಡ ಪ್ರಥಮ

ಬೆಂಗಳೂರು.ಜು,14:ದ್ವಿತೀಯ

ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಒಂದೇ ರೀತಿಯ ಫಲಿತಾಂಶದೊಂದಿಗೆ ಈ ಎರಡು ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ.

ನಂತರದ ಸ್ಥಾನವನ್ನು ಕ್ರಮವಾಗಿ ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳು ಪಡೆದುಕೊಂಡಿದೆ.ವಿಜಯಪುರ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದರು. ಈ ಬಾರಿ ಒಟ್ಟಾರೆ ಶೇಕಡ 61.80 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇಕಡ 68.68 ರಷ್ಟಿತ್ತು.

ಮಾರ್ಚ್‌ 4ರಿಂದ 21ರವರೆಗೆ ಪರೀಕ್ಷೆ ನಡೆದಿತ್ತು. ಈ ನಡುವೆ ಲಾಕ್‌ಡೌನ್‌ ಜಾರಿಯಾದ ಹಿನ್ನೆಲೆ ಮುಂದೂಡಲಾಗಿದ್ದ ಇಂಗ್ಲಿಷ್‌ ಪರೀಕ್ಷೆಯನ್ನು ಜೂನ್‌ 18ರಂದು ನಡೆಸಲಾಗಿತ್ತು. 6.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,17,297 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ಶೇ 61.80ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಬಾರಿ ಬಾಲಕಿಯರು ಶೇ 68.73, ಬಾಲಕರು ಶೇ 54.77ರ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ.

ಉಡುಪಿ ಜಿಲ್ಲೆ ಶೇ 90.71 ತೇರ್ಗಡೆಯ ಪ್ರಮಾಣದೊಂದಿಗೆ ಮೊದಲ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಶೇ 90.71 ತೇರ್ಗಡೆ ಪ್ರಮಾಣದೊಂದಿಗೆ ದ್ವಿತೀಯ, ಕೊಡಗು ಶೇ 81.53 ತೇರ್ಗಡೆ ಪ್ರಮಾಣದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದೆ. ವಿಜಯಪುರ ಶೇ 54.22 ರಷ್ಟು ಫಲಿತಾಂಶ ಪಡೆದಿದ್ದು ಕೊನೆಯ ಸ್ಥಾನ ಪಡೆದಿದೆ.

ರಾಜ್ಯದ 4 ಸರ್ಕಾರಿ ಕಾಲೇಜು ಸೇರಿ 92 ಕಾಲೇಜುಗಳು ಶೇ 100 ಫಲಿತಾಂಶ ಪಡೆದಿವೆ. 10 ಸರ್ಕಾರಿ ಕಾಲೇಜು ಸೇರಿ 88 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ.

ಒಟ್ಟು 68,866 ಮಂದಿ ಉನ್ನತ ಶ್ರೇಣಿ (ಡಿಸ್ಟಿಂಕ್ಷನ್), 2,21,866 ಮಂದಿ ಪ್ರಥಮ ದರ್ಜೆ, 77,455 ಮಂದಿ ದ್ವಿತೀಯ ದರ್ಜೆ, 49,110 ಮಂದಿ ಶೇ 50ಕ್ಕಿಂತ ಕಡಿಮೆ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶವನ್ನು ಪದವಿ ಪೂರ್ಣ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ www.pue.kar.nic.in ಮತ್ತು www.karresults.nic.in ರಲ್ಲಿ ನೋಡಬಹುದು.