ಬೆಂಗಳೂರು:ಅಗತ್ಯ ಸೇವೆಗಳ ವ್ಯಾಪ್ತಿಯಲ್ಲಿ ಬ್ಯಾಂಕಿಂಗ್ ಬರುವುದರಿಂದ, ಲಾಕ್‌ಡೌನ್ ಅವಧಿಯಲ್ಲಿ ಬೆಂಗಳೂರು ಮತ್ತು ಕೆಲವು ಜಿಲ್ಲೆಗಳಲ್ಲಿ ಎಲ್ಲ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಎಲ್ಲ ಎಟಿಎಂಗಳೂ ಯಥಾಸ್ಥಿತಿಯಲ್ಲಿ ಸೇವೆಗಳನ್ನು ನೀಡಲಿವೆ.
ಹೀಗಿದ್ದರೂ, ಬ್ಯಾಂಕ್ ಶಾಖೆಗಳಲ್ಲಿ ಸಿಬ್ಬಂದಿ ಸಂಖ್ಯೆ ಸೀಮಿತವಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರಾಥಮಿಕ ಬ್ಯಾಂಕಿಂಗ್ ಸೇವೆ ಹೊರತುಪಡಿಸಿ ಉಳಿದ ಸೇವೆಯಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯವಾಗಬಹುದು. ಉದಾಹರಣೆಗೆ ಚೆಕ್ ಕ್ಲಿಯರೆನ್ಸ್‌ನಲ್ಲಿ ತುಸು ವ್ಯತ್ಯಯವಾಗಬಹುದು. ಆದರೆ ಹಣವನ್ನು ಠೇವಣಿ ಇಡಲು ಹಾಗೂ ಹಿಂತೆಗೆದುಕೊಳ್ಳಲು ಯಾವುದೇ ತೊಂದರೆ ಆಗದು ಎಂದು ಬ್ಯಾಂಕ್ ಒಕ್ಕೂಟಗಳ ವಕ್ತಾರರು ತಿಳಿಸಿದ್ದಾರೆ.
ಶನಿವಾರ ಬ್ಯಾಂಕ್‌ಗೆ ರಜೆ: ಎಲ್ಲ ಬ್ಯಾಂಕ್‌ಗಳಿಗೆ 2020ರ ಆಗಸ್ಟ್ 2ನೇ ವಾರದ ತನಕ ಪ್ರತಿ ಶನಿವಾರ ರಜೆ ಘೋಷಿಸಿರುವುದರಿಂದ ಜುಲೈ 18ರಂದು ಬ್ಯಾಂಕ್ ಗಳಿಗೆ ರಜೆ ಇರಲಿದೆ. ಈಗಾಗಲೇ ತಿಂಗಳ ಪ್ರತಿ 2 ಮತ್ತು 4ನೇ ಶನಿವಾರದ ರಜೆಯೊಂದಿಗೆ ಇತರ ಶನಿವಾರಗಳಂದೂ ರಜೆ ಇರಲಿದೆ.
”ಬ್ಯಾಂಕ್‌ಗಳಲ್ಲಿ ಅಗತ್ಯ ಸೇವೆ ಸಿಗಲಿದೆ. ಆದರೆ ಸಿಬ್ಬಂದಿ ಎಷ್ಟಿರಬೇಕು ಎಂಬುದನ್ನು ಆಯಾ ಬ್ಯಾಂಕ್‌ಗಳು ನಿರ್ಧರಿಸಲಿವೆ. ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್, ಜನ್‌ಧನ್, ಗರೀಬ್ ಕಲ್ಯಾಣ್ ಯೋಜನೆಗಳ ನೆರವು ಇತ್ಯಾದಿಗಳು ಬ್ಯಾಂಕ್ ಖಾತೆಗಳ ಮೂಲಕ ನಡೆಯುತ್ತಿವೆ. ಎಟಿಎಂ, ಡಿಜಿಟಲ್ ಮಾಧ್ಯಮಗಳ ಪ್ರಯೋಜನ ಪಡೆಯಬಹುದಿದ್ದರೂ, ಬ್ಯಾಂಕ್ ಶಾಖೆಗಳಿಗೆ ತೆರಳಿ ಸೇವೆ ಪಡೆಯುವ ಗ್ರಾಹಕರು ಸಾಕಷ್ಟು ಮಂದಿ ಇದ್ದಾರೆ,” ಎನ್ನುತ್ತಾರೆ ಹಿರಿಯ ಬ್ಯಾಂಕ್ ಅಧಿಕಾರಿ ಆರ್.ಕೆ ಬಾಲಚಂದ್ರ.