janadhvani

Kannada Online News Paper

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಶೇ. 73.40 ವಿದ್ಯಾರ್ಥಿಗಳು ಉತ್ತೀರ್ಣ- ಬಾಲಕಿಯರೇ ಮೇಲುಗೈ

ಬಾಗಲಕೋಟೆಯ ಅಂಕಿತಾ ಬಸಪ್ಪ ಅವರು 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಮೇಧಾ ಪಿ ಶೆಟ್ಟಿ 624 ಅಂಕ ಪಡೆದು ಎರಡನೇ ಸ್ಥಾನ ಗಳಿಸಿದ್ದಾರೆ

ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ ಎಲ್‌ಸಿ ಪರೀಕ್ಷೆ-1ರ ಫ‌ಲಿತಾಂಶ ಇಂದು ಪ್ರಕಟಗೊಂಡಿದೆ. ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ 94% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 92.12% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕೊನೆಯ ಸ್ಥಾನ ಗಳಿಸಿದ ಯಾದಗಿರಿ ಜಿಲ್ಲೆಯಲ್ಲಿ ಶೇ 50.59 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.ಈ ಬಾರಿಯ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಗಲಕೋಟೆಯ ಅಂಕಿತಾ ಬಸಪ್ಪ ಅವರು 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಮೇಧಾ ಪಿ ಶೆಟ್ಟಿ 624 ಅಂಕ ಪಡೆದು ಎರಡನೇ ಸ್ಥಾನ ಗಳಿಸಿದ್ದಾರೆ.

ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 631204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 73.40 ರಷ್ಟು ಫಲಿತಾಂಶ ದಾಖಲಾಗಿದೆ.
ಈ ಬಾರಿಯ ಪರೀಕ್ಷೆಯನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಸಲಾಗಿದ್ದು, ಹೀಗಾಗಿ ಶೇಕಡಾ 30ರಷ್ಟು ಫಲಿತಾಂಶ ಕಡಿಮೆಯಾಗಿದೆ. ಹೀಗಾಗಿ ಕೃಪಾಂಕದ ಪ್ರಮಾಣವನ್ನು 10ರಿಂದ 20%ಗೆ ಹೆಚ್ಚಿಸಲಾಗಿದೆ.

ಮಾ.25ರಿಂದ ಏ.6ರವರೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿತ್ತು. ಈ ಬಾರಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್‌ https://karresults.nic.in ನಲ್ಲಿ ಫ‌ಲಿತಾಂಶ ವೀಕ್ಷಿಸಬಹುದು.

ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮೇ 16 ಕೊನೇ ದಿನವಾಗಿದ್ದು, ಶುಲ್ಕ ಪಾವತಿಗೆ ಮೇ 17 ಅಂತಿಮ ದಿನವಾಗಿದೆ. ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಮೇ 22ರವರೆಗೆ ಅವಕಾಶ ನೀಡಲಾಗಿದೆ.

ಮಂಡಳಿಯು ಈಗಾಗಲೇ ಪರೀಕ್ಷೆ-1, 2, 3 ನ ಹೊಸ ಮಾದರಿಯನ್ನು ಪರಿಚಯಿಸಿರುವುರಿಂದ ಮೊದಲನೆಯ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿ ಉತ್ತೀರ್ಣರಾಗದಿದ್ದರೆ, ವಿದ್ಯಾರ್ಥಿಯ ಫಲಿತಾಂಶವನ್ನು NC Not Completed (ಪೂರ್ಣಗೊಳಿಸಲಾಗಿಲ್ಲ) ಎಂದು ತೋರಿಸಲಾಗುತ್ತದೆ. ನಂತರ ಮೂರೂ ಪರೀಕ್ಷೆಗಳ ಪೈಕಿ ಗಳಿಸಿದ ಗರಿಷ್ಠ ಅಂಕಗಳ ಆಧಾರದ ಮೇಲೆ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುವುದು.

error: Content is protected !! Not allowed copy content from janadhvani.com