janadhvani

Kannada Online News Paper

ರಾಜಕೀಯ ಪಕ್ಷದ ಕುತಂತ್ರಗಳಿಗೆ ಹರಕೆಯ ಕುರಿಗಳಾಗುತ್ತಿರುವ ಮುಸ್ಲಿಂ ರಾಜಕಾರಣಿಗಳು – ಮೌಲಾನ ಶಾಫಿ ಸಅದಿ.

ಗದಗ : (ಜನಧ್ವನಿ ವಾರ್ತೆ) ಮುಸ್ಲಿಂ ಸಮುದಾಯವನ್ನು ಮತಬ್ಯಾಂಕ್ ಗಳನ್ನಾಗಿ ಬಳಸುತ್ತಿರುವ ರಾಜಕೀಯ ಪಕ್ಷಗಳು , ಚುನಾಯಿತರಾಗಿ ಆಯ್ಕೆಯಾದ ಮುಸ್ಲಿಂ ರಾಜಕಾರಣಿಗಳನ್ನು ಹರಕೆಯ ಕುರಿಗಳನ್ನಾಗಿ ಬಳಸುತ್ತಿರುವುದು ಖಂಡನೀಯ. ಮುಸ್ಲಿಂ ಶಾಸಕರ ನಡುವೆ ಭಿನ್ನತೆಯನ್ನು ಸೃಷ್ಟಿಸಿ ಪರಸ್ಪರ ಆರೋಪ – ಪ್ರತ್ಯಾರೋಪ ನಡೆಸುವಂತೆ ಪ್ರೇರೇಪಿಸುವುದು ರಾಜಕೀಯ ಷಡ್ಯಂತ್ರವಾಗಿದೆ. ತೊಂಬತ್ತು ಶೇಕಡಾ ಮುಸ್ಲಿಮರು ಒಂದೇ ಪಕ್ಷಕ್ಕೆ ಮತ ನೀಡಿದರೂ, ಕೇವಲ ಇಬ್ಬರಿಗೆ ಸಚಿವ ಸ್ಥಾನ ನೀಡಿ ಅವರ ನಡುವೆ ಪರಸ್ಪರ ಭಿನ್ನತೆಯನ್ನು ಸೃಷ್ಟಿಸುವಂತೆ ಮಾಡುವ ಮೂಲಕ ಮುಸ್ಲಿಂ ಶಾಸಕರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆಯನ್ನು ವಹಿಸದಂತೆ ತಡೆಯುವ ಹುನ್ನಾರವಾಗಿದೆ. ತಮ್ಮ ಜಾತಿಯ ಶಾಸಕರಿಗೆ ಸಚಿವ ಸ್ಥಾನ ಅಥವಾ ಪಕ್ಷದಲ್ಲಿ ಸೂಕ್ತ ಸ್ಥಾನಮಾನಗಳು ಸಿಗದೆ ಇರುವಾಗ ಪ್ರತಿಭಟನೆಯ ಎಚ್ಚರಿಕೆ ನೀಡಿ, ಅವರ ಪರವಾಗಿ ಸ್ವಾಮೀಜಿಗಳು ಮಾತನಾಡುವುದಾದರೆ ಮುಸ್ಲಿಂ ಶಾಸಕರನ್ನು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಯನ್ನಾಗಿಸಲು ಮುಸ್ಲಿಂ ಸಮುದಾಯ ಯಾಕೆ ಆಗ್ರಹಿಸಬಾರದೆಂದು ಮೌಲಾನ ಎನ್.ಕೆ. ಎಂ ಶಾಫಿ ಸ ಅದಿಯವರು ಪ್ರಶ್ನಿಸಿದರು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಝ್ರತ್ ಸುಲೇಮಾನ್ ಬಾದ್ ಶಾ ಖಾದಿರಿ ಊರೂಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮುಸ್ಲಿಂ ಸಮುದಾಯವನ್ನು ಪ್ರಸಕ್ತವಾಗಿ ರಾಜಕೀಯ ರಂಗದಲ್ಲಿ ಹರಕೆಯ ಕುರಿಗಳನ್ನಾಗಿ ಬಳಸುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಸಮುದಾಯದಲ್ಲಿ ಮುಖ್ಯಮಂತ್ರಿ ಆಗುವ ಎಲ್ಲಾ ಅವಕಾಶಗಳನ್ನು ಹೊಂದಿದ್ದ ಜಾಫರ್ ಶರೀಫ್ ರವರನ್ನು ಮೂಲೆಗುಂಪಾಗಿಸಿ , ರಹ್ಮಾನ್ ಖಾನ್ ರವರನ್ನು ಬೆಳೆಸಿದರು. ರಹ್ಮಾನ್ ಖಾನ್ ರಾಜಕೀಯದಲ್ಲಿ ಮುಂದುವರಿಯುತ್ತಿರುವಾಗ ಅವರನ್ನು ಮೂಲೆಗುಂಪಾಗಿಸಿ ಖಮರುಲ್ ಇಸ್ಲಾಂ ರವರನ್ನು ಬೆಳೆಸಿದರು. ನಂತರ ಅವರನ್ನು ಮೂಲೆಗುಂಪಾಗಿಸಿ ಸಿ.ಎಂ ಇಬ್ರಾಹಿಂ ರವರನ್ನು ಬೆಳೆಸಿದರು, ನಂತರ ರೋಷನ್ ಬೇಗ್ ರವರನ್ನು ಬೆಳೆಸಿದರು, ಇದೀಗ ರೋಷನ್ ಬೇಗ್ ರವರನ್ನು ಮೂಲೆಗುಂಪಾಗಿಸಿ ಜಮೀರ್ ಅಹ್ಮದ್ ರವರನ್ನು ಬೆಳೆಸುತ್ತಿದ್ದಾರೆ. ವಿಪರ್ಯಾಸವೆಂದರೆ ಇದುವರೆಗೂ ಯಾವುದೇ ಒಬ್ಬ ಮುಸ್ಲಿಂ ಶಾಸಕರನ್ನು ಉಪ ಮುಖ್ಯಮಂತ್ರಿ ಸಹ ಮಾಡದೇ ಇರುವುದು ಮುಸ್ಲಿಮರನ್ನು ರಾಜಕೀಯದಲ್ಲಿ ಬೆಳೆಯದಂತೆ ಮಾಡುವ ಹುನ್ನಾರವಾಗಿದೆ.


ಯು.ಟಿ ಖಾದರ್ ಹಾಗೂ ಜಮೀರ್ ಅಹ್ಮದ್ ರವರಿಗೆ ಮಂತ್ರಿ ಸ್ಥಾನ ನೀಡಿದಾಗ , ಇನ್ನೂ ಇಬ್ಬರು ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಬೇಕಾದ ಮುಸ್ಲಿಂ ಶಾಸಕರು ಪರಸ್ಪರ ಕಾಲೆಳೆಯುವುದರಲ್ಲಿ ಮಗ್ನರಾಗಿರುವುದು ಸಮುದಾಯದ ದುರಂತವೆಂದು ಹೇಳಿದ ಅವರು, ಮುಸ್ಲಿಂ ಸಮುದಾಯವನ್ನು ರಾಜಕೀಯ ಪಕ್ಷಗಳು ಓಟ್ ಬ್ಯಾಂಕ್ ಆಗಿ ಮಾತ್ರ ಬಳಸಲ್ಪಡುತ್ತಿರುವುದಕ್ಕೆ ಇದೆಲ್ಲ ಕೆಲವು ನಿದರ್ಶನವಾಗಿದೆ ಎಂದು ಅವರು ಹೇಳಿದರು.
ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯವು ಎರಡನೇ ಅತೀ ದೊಡ್ಡ ಸಮುದಾಯವಾಗಿ ಗುರುತಿಸಲ್ಪಡುತ್ತಿದ್ದರೂ ರಾಜಕೀಯವಾಗಿ ಪ್ರಾತಿನಿಧ್ಯ ಸಿಗದೇ ಇರುವುದು , ಮುಸ್ಲಿಂ ಏರಿಯಾಗಳು ಬಹುತೇಕ ಸ್ಲಂ ಏರಿಯಾಗಳಾಗಿಯೇ ಗುರುತಿಸಲ್ಪಡುತ್ತಿರುವುದು ದುರಂತವಾಗಿದೆ. ಮುಸ್ಲಿಂ ಸಮುದಾಯವು ಪ್ರತೀ ಕ್ಷೇತ್ರದಲ್ಲೂ ಪ್ರಬುದ್ಧತೆಯನ್ನು ಮೆರೆಯುವ ಮೂಲಕ ಸಮುದಾಯದ ನಡುವೆ ನಡೆಯುವ ಷಡ್ಯಂತ್ರಗಳನ್ನು ತಡೆಯಬೇಕಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಬಳಿಕ ನೆರೆದ ಪತ್ರಕರ್ತರು ಜಾತ್ಯಾತೀತ ಪಕ್ಷವೆಂದು ಗುರುತಿಸುತ್ತಿರುವ ಜನತಾದಳ ಸಹ ಬಿ.ಎಂ ಫಾರೂಕ್ ರವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆಂದು ಹೇಳಿಯೂ ಮಾಡಲಿಲ್ಲ ಎಂದು ಪ್ರಶ್ನಿಸಿದಾಗ ,ಚುನಾವಣಾ ಪೂರ್ವದಲ್ಲಿ ಕುಮಾರಸ್ವಾಮಿ ಹೇಳಿದ್ದರೂ, ಸ್ವಂತ ಬಲದಿಂದ ಅಧಿಕಾರಕ್ಕೆ ಬಾರದ ಕಾರಣದಿಂದ ಬಿ.ಎಂ ಫಾರೂಕ್ ರವರನ್ನು ಮುಂದಿನ ದಿನದಲ್ಲಿ ಸಚಿವ ಸಂಪುಟದಲ್ಲಿ ಸೇರಿಸುತ್ತೇವೆಂದು ಮುಸ್ಲಿಂ ನಾಯಕರಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಭರವಸೆ ನೀಡಿದುದರಿಂದ ಅದರ ಕುರಿತು ಮಾತನಾಡುವುದು ಉಚಿತವಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದರು.
ಕಾರ್ಯಕ್ರಮದಲ್ಲಿ ಸುನ್ನೀ ದಾವತೇ ಇಸ್ಲಾಮಿ ಅಖಿಲ ಭಾರತ ನಾಯಕ ಮೌಲಾನ ಶಾಕಿರ್ ಅಲಿ ನೂರಿ ಸಾಬ್ ಮುಖ್ಯ ಭಾಷಣ ಮಾಡಿದರು.

error: Content is protected !! Not allowed copy content from janadhvani.com