✍️ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ
(ರಾಜ್ಯಾಧ್ಯಕ್ಷರು ಎಸ್ಸೆಸ್ಸೆಫ್ ಕರ್ನಾಟಕ)
ಎಲ್ಲಿಂದ ಶುರು ಮಾಡಬೇಕೆಂದು ಅರ್ಥವಾಗುತ್ತಿಲ್ಲ. ಏನೆಲ್ಲಾ ಬರೆಯಬೇಕು, ಯಾವುದನ್ನು ಬಿಡಬೇಕು ಒಂದೂ ಗೊತ್ತಾಗುತ್ತಿಲ್ಲ! ಈ ಗಾಯದ ನೋವು ಕಡಿಮೆ ಆಗಲು ಇನ್ನು ದಿನಗಳೇ ಬೇಕಾಗಬಹುದು.
ನಮ್ಮ ತಾಜುಲ್ ಉಲಮಾ ನಮಗೆ ದೊಡ್ಡ ನಿಧಿಯನ್ನೇ ಬಿಟ್ಟು ಹೋಗಿದ್ದರು. ನಾವಂತೂ ರಾತ್ರಿ ಹಗಲು ಆ ನಿಧಿಯನ್ನು ಅನುಭವಿಸಿದೆವು. ಇದೀಗ ಅವರೂ ನಮ್ಮನ್ನು ಬಿಟ್ಟು ಹೋಗಿದ್ದಾರೆ. ನಾವಂತೂ ಅಕ್ಷರಶಃ ಅನಾಥರಾಗಿ ಬಿಟ್ಟಿದ್ದೇವೆ!
ಅಂದು ಅಲ್ ಮದೀನಾದ ಕೊಠಡಿಯಲ್ಲಿ ಕುಳಿತಿದ್ದ ಸಯ್ಯಿದ್ ರವರ ಬಳಿಗೆ ನನ್ನ ತಂದೆ ಹಾಗೂ ಮಸ್‌ದರ್ ಟೀಂ ಜೊತೆ ಹೋಗಿದ್ದೆ. ಉತ್ತರ ಕರ್ನಾಟಕದಲ್ಲಿ ಸಣ್ಣ ಸಂಸ್ಥೆಯೊಂದು ಕಟ್ಟುತ್ತಿದ್ದೇವೆ. ಎಪಿ ಉಸ್ತಾದ್ ಮಸ್‌ದರ್ ಎಂದು ಹೆಸರು ಕೊಟ್ಟಿದ್ದಾರೆ ಎಂದು ಹೇಳಿದ ತಕ್ಷಣ ನಮ್ಮನ್ನು ನೋಡಿ ಹೇಳಿದ ಮೊದಲ ಮಾತು ಈ ರೀತಿಯಾಗಿತ್ತು ‘ತುಂಬಾ ಸಮಸ್ಯೆಗಳು ಎದುರಾಗಬಹುದು. ಎಲ್ಲವನ್ನೂ ಎದುರಿಸಿ ನಡೆಸಲು ಸಾಧ್ಯವಾದರೆ ಮುಂದುವರಿಯಿರಿ. ಅಲ್ಲಾಹನ ಸಹಾಯ ಇರಬಹುದು, ಅಲ್ಲಿ ನಾನು ಬಹಳಷ್ಟು ಬಾರಿ ಹೋಗಿದ್ದೆ. ಮುಗ್ಧ ಜನರು. ಅವರಿಗೇನೂ ಗೊತ್ತಿಲ್ಲ. ಬಹಳಷ್ಟು ಕೆಲಸ ಆಗಬೇಕಿದೆ. ನೀವು ಶುರು ಮಾಡಿ, ನಾನಿದ್ದೇನೆ. ನಾನು ಬರುತ್ತೇನೆ.’ ಎಂದು ಹೇಳುತ್ತಾ ತುಂಬಾ ಹೊತ್ತು ಮಾತನಾಡಿದರು. ‘ತಾವು ನಮ್ಮ ಸಂಸ್ಥೆಯ ಗೌರವಾಧ್ಯಕ್ಷರಾಗಿ ಇರಬೇಕು. ಯಾವತ್ತೂ ಮಾರ್ಗದರ್ಶನ ಬೇಕು’ ಎಂದು ಹೇಳಿದಾಗ ಸಂತೋಷದಿಂದ ಒಪ್ಪಿಕೊಂಡು ದುಆ ಮಾಡಿ ಕಳಿಸಿಕೊಟ್ಟರು.
ಬಳಿಕವಂತೂ ನಮ್ಮ ಸರ್ವಸ್ವವೂ ಖುರ್ರತುಸ್ಸಾದಾತ್ ರವರಾಗಿದ್ದರು. ಈ ಮೂರೂ ವರ್ಷದಲ್ಲಿ ನಾಲ್ಕು ಬಾರಿ ನಮ್ಮ ಮಸ್‌ದರ್‌ಗಾಗಿ ಮಾತ್ರ ಉತ್ತರ ಕರ್ನಾಟಕಕ್ಕೆ ಬಂದರು! ಈಗ ನಾವು ಕಟ್ಟಿರುವ ಮಸೀದಿ ಮದ್ರಸಾಗಳಲ್ಲಿ ಬಹುತೇಕ ಕಟ್ಟಡಗಳ ಶಿಲಾನ್ಯಾಸ, ಉದ್ಘಾಟನೆ ಆ ಪವಿತ್ರ ಹಸ್ತರತ್ನಗಳಿಂದಲೇ ಮಾಡಿದ್ದು! ಅಲ್ಲಿಗೆ ಬಂದರೆ ಸಯ್ಯಿದರಿಗೆ ಇಷ್ಟು ವಯಸ್ಸಾಗಿದೆ, ದಣಿವು, ಸುಸ್ತು ಯಾವುದೂ ಗೊತ್ತಾಗುತ್ತಿರಲಿಲ್ಲ! ಬೆಳಿಗ್ಗೆಯಿಂದ ರಾತ್ರಿಯ ತನಕ ಅದೆಷ್ಟೊಂದು ಕಾರ್ಯಕ್ರಮಗಳು, ಹಳ್ಳಿಗಳಿಗೆ ಭೇಟಿ, ಮನೆಮನೆಗೆ ಅಂಗಡಿಗಳಿಗೆ ತೆರಳಿ ದುಆ, ಹೀಗೆ ಇಡೀ ದಿನ ನಮ್ಮ ಜೊತೆ ನಗುನಗುತ್ತಾ ಓಡಾಡುತ್ತಿದ್ದರು. ನಮಗೆ ದಣಿವಾದರೂ ಸಯ್ಯಿದರು ಹುರುಪು ಹುಮ್ಮಸ್ಸಿನಿಂದಲೇ ಇರುತ್ತಿದ್ದರು! ಆದ್ದರಿಂದಲೇ ನಮ್ಮ ಮಸ್‌ದರಿನ ಅಧ್ಯಕ್ಷರು ಶೈಖುನಾ ಪೊನ್ಮಳ ಉಸ್ತಾದ್ ಆಗಿದ್ದರೂ ಕೂಡ ಶೈಖುನಾರ ಆರೋಗ್ಯ ಕಡಿಮೆ ಇರುವ ಕಾರಣ ವರ್ಷಕ್ಕೆ ಒಂದೆರಡು ಬಾರಿ ಮಾತ್ರ ನಾವು ಶೈಖುನಾರ ಬಳಿಗೆ ತೆರಳುತ್ತಿದ್ದೆವು. ಬಾಕಿ ಪ್ರತಿಯೊಂದಕ್ಕೂ ಖುರ್ರತುಸ್ಸಾದಾತ್ ರವರನ್ನೇ ಅವಲಂಬಿಸುತ್ತಿದ್ದೆವು! ಇದು ಕೇವಲ ಒಂದು formalities ಗೆ ಬೇಕಾಗಿ ಮಾತ್ರ ಇರುವ ಗೌರವಾಧ್ಯಕ್ಷರಾಗಿರಲಿಲ್ಲ. ಹಲವು ಬಾರಿ ಸಯ್ಯಿದ್ ರವರ ಬಳಿಗೆ ತೆರಳಿ ವರದಿ ಓದಿ, ಲೆಕ್ಕ ಪತ್ರ ಮಂಡಿಸಿ, ಆದಾಯ ಖರ್ಚಿನ ಬಗ್ಗೆ ಮಾಹಿತಿ ನೀಡಿ ಅವರ ಆಶಿರ್ವಾದ ಪಡೆದು ಬರುತ್ತಿದ್ದೆವು! ನಮ್ಮನ್ನು ಕಂಡಕಂಡಲ್ಲಿ ನಗುತ್ತಾ ಏನಾಯಿತು? ಹೇಗಿದೆ ಸಂಸ್ಥೆ? ಎಂದು ಕೇಳುತ್ತಲೇ ಇದ್ದರು. ಆದ್ದರಿಂದಲೇ ನಮಗೊಂದು ಧೈರ್ಯ ಇತ್ತು. ಏನಿದ್ದರೂ ಕೂರ ತಂಙಳ್ ಬಳಿ ಹೇಳಿದರೆ ಸಾಕು ಅಂತ!
ಸಯ್ಯಿದ್ ರವರು ಹಾಗೇನೆ. ಎಲ್ಲದರಲ್ಲೂ ಸಮಯ ನಿಷ್ಠೆ. ಎಲ್ಲಿ ಕರೆದರೂ ಹೋಗುತ್ತಿದ್ದರು. ಯಾರನ್ನೂ ಕಾಯದೆ ಬೇಗ ಬೇಗ ದುಆ ಮಾಡಿ ಮುಂದೆ ಹೋಗಬೇಕಾದ ಕಡೆಗೆ ಸಜ್ಜಾಗುತ್ತಿದ್ದರು. ಅದೇ ರೀತಿ ಎಲ್ಲವನ್ನೂ ಬೇಗಬೇಗ ಮಾಡಿ ಮುಗಿಸಿ ಬೇಗನೆ ಅಲ್ಲಾಹನ ಬಳಿಗೆ ತೆರಳಿ ಬಿಟ್ಟರು!
2022 ನವಂಬರ್ ತಿಂಗಳಲ್ಲಿ ನಮ್ಮ ಮಸ್‌ದರ್‌ಗಾಗಿ ಮಾತ್ರ ಮೂರ್ನಾಲ್ಕು ದಿನ ಯುಎಇ ಗೆ ಬಂದಿದ್ದರು. ಆ ಮೂರ್ನಾಲ್ಕು ದಿನ ರಾತ್ರಿ ಹಗಲು ನಮ್ಮ ಮಸ್‌ದರ್‌ಗಾಗಿ ಓಡಾಡಿದ್ದು ನೆನೆಯುವಾಗ ಈಗಲೂ ಕಣ್ಣೀರು ಬರುತ್ತಿದೆ. ಆ ಮೂರ್ನಾಲ್ಕು ದಿನಗಳು ನನ್ನ ಬದುಕಿನಲ್ಲಿ ಮರೆಯಲಾಗದ ದಿನಗಳು!
ಕಳೆದ ಎರಡು ವಾರಗಳ ಹಿಂದಷ್ಟೇ ಕೊಪ್ಪಳ ಜಿಲ್ಲೆಯ ಬರಗೂರಿನಲ್ಲಿ ನಮ್ಮ ಹಿತೈಷಿಯೊಬ್ಬರ ಸಹಕಾರದಿಂದ ಮಸ್‌ದರ್ ವತಿಯಿಂದ ಮಸೀದಿ ಕಟ್ಟಿಕೊಟ್ಟೆವು. ಈ ತನಕ ತಂಙಳ್ ಬಂದರೆ ಮನೆಮನೆಗಳಿಗೆ, ಅಂಗಡಿಗಳಿಗೆ, ಹಳ್ಳಿಗಳಿಗೆ ಕರೆದುಕೊಂಡು ಹೋಗಿ ನಮಗೆ ಸಮಯವೇ ಸಿಗುತ್ತಿರಲಿಲ್ಲ. ಈ ಬಾರಿ ನಮ್ಮ ಖಾದಿಮೇ ಮಸ್‌ದರ್ ಉಸ್ತಾದ್‌ಗಳಿಗೆ ತುಂಬಾ ಹೊತ್ತು ನಸ್ವೀಹತ್, ದುಆ ಮಾಡಿಸಬೇಕೆಂದು ಬಯಸಿ ಎಟ್ಟಿಕ್ಕುಳಂನಲ್ಲಿ ಸಯ್ಯಿದ್‌ರನ್ನು ಭೇಟಿಯಾಗಿದ್ದೆ. ಬಕ್ರೀದ್‌ಗೆ ಮುಂಚೆ ಯಾವುದೇ ದಿನ ಫ್ರೀ ಇರಲಿಲ್ಲ. ನೀವೇ ಉದ್ಘಾಟನೆ ಮಾಡಿ ಮುಂದೆ ನೋಡೋಣ ಎಂದು ದುಆ ಮಾಡಿ ಕೊಟ್ಟರು. ಅದು ನನ್ನ ಕೊನೆಯ ಭೇಟಿ ಎಂದು ಕನಸಲ್ಲೂ ನೆನಸಿರಲಿಲ್ಲ! ಹೃಸ್ವ ಬದುಕಿನಲ್ಲಿ ಎಲ್ಲವನ್ನೂ ಬೇಗ ಬೇಗ ಮಾಡಿ ಮುಗಿಸಿ. ಯಾವುದೇ ಸುಳಿವು ನೀಡದೆ ಹೊರಟುಬಿಟ್ಟರು! ಮರಣಾನಂತರ ಮಹಾತ್ಮರ ಶಕ್ತಿ ಇಮ್ಮಡಿಗೊಳ್ಳುತ್ತದೆ. ಅವರು ಜೀವಂತ ಇರುವಾಗಲೂ ಮರಣದ ಬಳಿಕವೂ ನಮ್ಮ ಸಂಕಷ್ಟಕ್ಕೆ ಸ್ಪಂದಿಸಲು ಶಕ್ತಿ ಉಳ್ಳವರು ಎಂಬ ವಿಶ್ವಾಸ ಮಾತ್ರ ನಮಗೆ ಉಳಿದಿರುವ ನಿರೀಕ್ಷೆ. ನಮ್ಮ ಸಯ್ಯಿದ್ ನಮ್ಮನ್ನು ಬಿಟ್ಟು ಹೋದರೂ ನಮ್ಮನ್ನು ಕೈಬಿಡಲ್ಲ.