janadhvani

Kannada Online News Paper

ಬುರ್ಖಾ ಧರಿಸದ್ದಕ್ಕೆ ಕೂದಲಿಗೆ ಕತ್ತರಿ: ಸಾಮಾಜಿಕ ತಾಣದಲ್ಲಿ ವೈರಲ್ ಆದ ಸುಳ್ಳು ಸುದ್ದಿ

ಬೆಂಗಳೂರು: ಬುರ್ಖಾ ಧರಿಸದೇ ಇದ್ದರೆ ಮಹಿಳೆಗೆ ಈ ರೀತಿ ಶಿಕ್ಷೆ ನೀಡಲಾಗುತ್ತಿದೆ. ಮಡಿಲಲ್ಲಿ ಮಗುವನ್ನು ಕೂರಿಸಿಕೊಂಡಿರುವ ಮಹಿಳೆಯ ಕೂದಲನ್ನು ವ್ಯಕ್ತಿಯೊಬ್ಬ ಕತ್ತರಿಸುತ್ತಿದ್ದಾನೆ. “ಇಂಥಾ ಹೇಡಿಗಳು ಜಗತ್ತನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಈ ಮುಜಾಹಿದ್‍ಗಳು ಜಗತ್ತಿನ ಅತೀ ದೊಡ್ಡ ಹೇಡಿಗಳು. ಇವರು ಅಸಹಾಯಕ ಮನುಷ್ಯರಿಗೆ ಮಾತ್ರ ಕಿರುಕುಳ ನೀಡುತ್ತಾರೆ. ಅವರು ನಿಜವಾದ ಗಂಡಸರನ್ನು ಎದುರಿಸುವುದಿಲ್ಲ” ಎಂಬ ಒಕ್ಕಣೆಯೊಂದಿಗೆ ಸಿಂಗ್ ಸಿಂಗ್ ಎಂಬ ಟ್ವಿಟರ್‌ ಖಾತೆಯಲ್ಲಿ 2018 ಜೂನ್ 26ರಂದು ವಿಡಿಯೊ ಶೇರ್ ಮಾಡಿದ್ದರು.

ಬುರ್ಖಾ ಧರಿಸಲು ನಿರಾಕರಿಸಿದ್ದಕ್ಕಾಗಿ ಆಕೆಯ ಕೂದಲನ್ನು ಕತ್ತರಿಸಲಾಗಿದೆ ಎಂದು ಟ್ವೀಟ್‍ನಲ್ಲಿ ಹೇಳಲಾಗಿತ್ತು. ಈ ಟ್ವೀಟ್ 1800 ಕ್ಕಿಂತಲೂ ಹೆಚ್ಚು ಬಾರಿ ರೀಟ್ವೀಟ್ವ್ ಆಗಿದ್ದು 1300ಕ್ಕಿಂತಲೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೊದಲ್ಲಿರುವ ದೃಶ್ಯಗಳಿಗೂ ಅಲ್ಲಿ ಹೇಳಿರುವ ಆರೋಪಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

ಇದೇ ವಿಡಿಯೊವನ್ನು ಅಖಿಲ್ ಅಗರ್‍ವಾಲ್ ಎಂಬವರು ಟ್ವೀಟ್ ಮಾಡಿದ್ದು, ಅದು 760 ಬಾರಿ ರೀಟ್ವೀಟ್ ಆಗಿದೆ. 600ಕ್ಕಿಂತಲೂ ಹೆಚ್ಚು ಮಂದಿ ಇದನ್ನು ಲೈಕ್ ಮಾಡಿದ್ದಾರೆ, ಆದಾಗ್ಯೂ, ಈ ವಿಡಿಯೊದಲ್ಲಿರುವ ದನಿ ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ಈ ವಿಡಿಯೊ ಫೇಸ್‍ಬುಕ್‍ನಲ್ಲಿಯೂ ಶೇರ್ ಆಗಿದೆ.

ವಿಡಿಯೊ ಹಿಂದಿನ ನಿಜ ಸಂಗತಿ ಏನು? 
man cuts off woman’s hair ಎಂದು ಗೂಗಲಿಸಿದರೆ ಡೈಲಿ ಪಾಕಿಸ್ತಾನ್ಪತ್ರಿಕೆಯ ಲೇಖನವೊಂದರ ಲಿಂಕ್‍ನಲ್ಲಿ ಈ ವಿಡಿಯೊ ಕಾಣಿಸುತ್ತದೆ. ಆ ಲೇಖನದಲ್ಲಿರುವ ವಿಡಿಯೊ ಲಿಂಕ್ ಫೇಸ್‍ಬುಕ್ ಪೋಸ್ಟ್ ಆಗಿದ್ದು, ಆ ಪೋಸ್ಟ್ ಈಗ ಡಿಲೀಟ್ ಆಗಿದೆ. ಅಲ್ಲಿರುವ ಲೇಖನದ ಪ್ರಕಾರ ಸಂಬಂಧಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯ ಕೂದಲನ್ನು ಆಕೆಯ ಪತಿ ಕತ್ತರಿಸುತ್ತಿರುವ ವಿಡಿಯೊ ಅದಾಗಿದೆ. ಈ ಪ್ರಕರಣ ನಡೆದಿದ್ದು ಬ್ರೆಜಿಲ್‍ನ ಗೌರಾಪುವಾ ಎಂಬ ನಗರದಲ್ಲಿ. ವಿಡಿಯೊ ದೃಶ್ಯದಲ್ಲಿರುವವರುಜಿಪ್ಸಿಗಳಾಗಿದ್ದಾರೆ. ಕೂದಲು ಕತ್ತರಿಸುತ್ತಿರುವ ವ್ಯಕ್ತಿಯ ಹೆಸರು ಫಬ್ರಿಕೊ ಯನೋವಿಚ್.

ಇದೇ ವಿಡಿಯೊದ ಮೂಲ ಪತ್ತೆ ಹಚ್ಚುವುದಕ್ಕಾಗಿ man cuts woman’s hair ಎಂಬ ವಾಕ್ಯವನ್ನು ಪೊರ್ಚುಗೀಸ್  ಭಾಷೆಯಲ್ಲಿ (“homem corta o cabelo da mulher” ) ಗೂಗಲಿಸಿದಾಗ  ‘Mulher tem os cabelos cortados na frente da filha (Woman has her hair cut in front of her daughter – ಮಗಳ ಮುಂದೆಯೇ ಅಮ್ಮನ ಕೂದಲಿಗೆ ಕತ್ತರಿ) ಎಂಬ ವಿಡಿಯೊ ಲಭಿಸಿದೆ. ಆ ವಿಡಿಯೊ ಅಪ್‍ಲೋಡ್ ಆಗಿದ್ದು 2017, ಜನವರಿ 18ರಂದು. ಈ ವಿಡಿಯೊ 50000 ಕ್ಕಿಂತಲೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು ಪೋರ್ಚುಗೀಸ್ ಭಾಷೆಯಲ್ಲಿ 220ಕ್ಕಿಂತಲೂ ಹೆಚ್ಚು ಕಾಮೆಂಟ್‍ಗಳಿವೆ. ಈ ವಿಡಿಯೊದಲ್ಲಿ ದನಿ ಕೇಳಿಸುತ್ತದೆ.

ಈ ವಿಡಿಯೊ ಬಗ್ಗೆ ಮತ್ತಷ್ಟು ಹುಡುಕಿದಾಗ Diretão da Verdade(Truth Directory) ಎಂಬ ಲಿಂಕ್‍ನಲ್ಲಿ 2016 ನವಂಬರ್ 12ಕ್ಕೆ ಪ್ರಕಟವಾದ ಲೇಖನದಲ್ಲಿ  “Ele foi traído e pra se vingar cortou o cabelo da esposa (ಮೋಸ ಮಾಡಿದ್ದಕ್ಕಾಗಿ ಪತ್ನಿಯ ಕೂದಲು ಕತ್ತರಿಸಿ ಪ್ರತಿಕಾರ) ಎಂಬ ತಲೆಬರಹವಿದೆ. ಈ ವಿಡಿಯೊ ಮೊದಲು ಪ್ರಕಟವಾಗಿದ್ದು ಇಲ್ಲಿಯೇ.

2017 ಏಪ್ರಿಲ್‍ನಲ್ಲಿ Blasting News ನಲ್ಲಿ ಈ ವಿಡಿಯೊ ಅಪ್‍ಲೋಡ್ ಆಗಿದ್ದು  “Marido faz vídeo cortando cabelo de sua esposa por traição (ಮೋಸ ಮಾಡಿದ್ದಕ್ಕಾಗಿ ಪತ್ನಿಯ ಕೂದಲು ಕತ್ತರಿಸಿದ ಪತಿ) ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.
ಪೋರ್ಚುಗೀಸ್ ಭಾಷೆಯಲ್ಲಿ ಪ್ರಕಟವಾದ ಈ ಎರಡೂ ಲೇಖನಗಳಲ್ಲಿ ವಿವಾಹೇತರ ಸಂಬಂಧದ ವಿಷಯದಲ್ಲಿ ಪತ್ನಿಯ ಕೂದಲಿಗೆ ಕತ್ತರಿ ಹಾಕಲಾಗಿದೆ ಎಂದು ಬರೆದಿದ್ದಾರೆ. ಆದರೆ ಎಲ್ಲಿಯೂ ಅವರು ಮುಸ್ಲಿಂ ದಂಪತಿಗಳು, ಬುರ್ಖಾ ಧರಿಸಲು ನಿರಾಕರಿಸಿದ್ದಕಾಗಿ ಕೂದಲು ಕತ್ತರಿಸಲಾಗಿದೆ ಎಂಬ ಉಲ್ಲೇಖವಿಲ್ಲ, ಏತನ್ಮಧ್ಯೆ, ಸಿಂಗ್ ಸಿಂಗ್ ಟ್ವೀಟ್ ಮಾಡಿದ ವಿಡಿಯೊದಲ್ಲಿ ಬಳಸಲಾದ ಆಡಿಯೊ ಅಸಲಿ ಅಲ್ಲ.

ದೆಹಲಿಯಲ್ಲಿ ಪೋರ್ಚುಗೀಸ್ ಭಾಷೆ ಕಲಿಸುತ್ತಿರುವ ವಂದನ್ ಕುಮಾರ್ ಎಂಬವರನ್ನು ಆಲ್ಟ್ ನ್ಯೂಸ್ ಸಮೀಪಿಸಿದ್ದು,  ವಿಡಿಯೊದಲ್ಲಿರುವ ಭಾಷೆ ಬಗ್ಗೆ ವಿವರಿಸುವಂತೆ ಕೇಳಿತ್ತು. ವಿಡಿಯೊದಲ್ಲಿ ಬಳಕೆಯಾಗಿರುವುದು ಪೋರ್ಚುಗೀಸ್ ಭಾಷೆಯಾಗಿದ್ದು, ಬ್ರೆಜಿಲ್ ‍ನ ಉಚ್ಛಾರಣೆ ಇದೆ ಎಂದು ವಂದನ್ ಕುಮಾರ್  ಹೇಳಿದ್ದಾರೆ. ವಿಡಿಯೊದಲ್ಲಿರುವ ವ್ಯಕ್ತಿ ಮೋಸ ಮಾಡಿದ ಪತ್ನಿಯನ್ನು ಬೈಯುತ್ತಿದ್ದಾನೆ. ಆದರೆ ಬುರ್ಖಾ ಧರಿಸದೇ ಇರುವುದರಕ್ಕೆ ಮಹಿಳೆಗೆ ಶಿಕ್ಷೆ ನೀಡುತ್ತಿರುವ ವಿಷಯ ಈ ವಿಡಿಯೊದಲ್ಲಿ ಇಲ್ಲ ಎಂದಿದ್ದಾರೆ.

ಕೃಪೆ:ಪ್ರಜಾವಾಣಿ

error: Content is protected !! Not allowed copy content from janadhvani.com