janadhvani

Kannada Online News Paper

ಸಮ್ಮಿಶ್ರ ಸರ್ಕಾರದ ಸ್ಥಿರತೆ ಬಗ್ಗೆ ಅನುಮಾವಿಲ್ಲ -ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಗ್ಗೆ ನನಗೆ ಯಾವುದೇ ಅಸಮಾಧಾನವೂ ಇಲ್ಲ ಮತ್ತು ಸರ್ಕಾರ ಸ್ಥಿರತೆ ಬಗ್ಗೆ ಅನುಮಾನವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಒಂದು ಕೋಮುವಾದಿ ಪಕ್ಷ. ಅದನ್ನು ಅಧಿಕಾರದಿಂದ ದೂರುವಿಡುವುದಕ್ಕಾಗಿ ಜೆಡಿಎಸ್ ಜೊತೆ ಕೈ ಜೋಡಿಸಿದ್ದೇವೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಆಡಳಿತ ನಡೆಸಲಿದೆ. ಇದರಲ್ಲಿ ಸಂದೇಹವೇ ಬೇಡ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದ ಸ್ಥಿರತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮತ್ತು ಬಜೆಟ್ ಗೆ ವಿರೋಧ ವ್ಯಕ್ತಪಡಿಸಿದ ವಿಡಿಯೋ ಭಾರಿ ವಿವಾದಕ್ಕೆ ಕಾರಣವಾದ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ನಾನು ಸಹಜವಾಗಿ ಮಾತನಾಡುತ್ತಿದ್ದಾಗ ವಿಡಿಯೋ ಮಾಡಿಕೊಳ್ಳಲಾಗಿದ್ದು, ಆ ವಿಡಿಯೋದಲ್ಲಿ ಹಿಂದಿನ ಹಾಗೂ ಮುಂದಿನ ದೃಶ್ಯ ಕತ್ತರಿಸಿ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಧ್ಯಮಗಳ ವಿರುದ್ಧ ದೂರಿದರು.
ಇಂದು ಸಂಜೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ಇದೆ. ಹೀಗಾಗಿ ಅದಕ್ಕೂ ಮೊದಲು ಕೆಪಿಸಿಸಿ ಕಚೇರಿಯಲ್ಲಿ ಸಂಸದ ವೀರಪ್ಪ ಮೋಯ್ಲಿ, ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಆರ್.ವಿ.ದೇಶಪಾಂಡೆ ಅವರೊಂದಿಗೆ ಸಭೆ ನಡೆಸಲಾಗಿದೆ ಎಂದರು.
ಧರ್ಮಸ್ಥಳದ ಶಾಂತಿ ವನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಿದ್ದರಾಮಯ್ಯ ಅವರು ತಮ್ಮ ಆಪ್ತರೊಂದಿಗೆ ದೋಸ್ತಿ ಸರ್ಕಾರದ ಭವಿಷ್ಯದ ಬಗ್ಗೆ ಶಂಕೆ ವ್ಯಕ್ತಪಡಿಸಿದ ವಿಡಿಯೋ ಭಾರೀ ಚರ್ಚೆ ಹುಟ್ಟು ಹಾಕಿತ್ತು.

error: Content is protected !! Not allowed copy content from janadhvani.com