janadhvani

Kannada Online News Paper

ಸೌದಿ: ಗ್ರಾಹಕರು ಆಹಾರ ಉತ್ಪನ್ನಗಳ ಕಾಲಾವಧಿಯನ್ನು ಪರೀಕ್ಷಿಸುವುದಿಲ್ಲ

ರಿಯಾದ್: ಗ್ರಾಹಕರಲ್ಲಿ ಹಲವರು ಆಹಾರ ಉತ್ಪನ್ನಗಳ ಕಾಲಾವಧಿಯನ್ನು ಪರೀಕ್ಷಿಸುವುದಿಲ್ಲ ಎಂದು ಸೌದಿ ಅರೇಬಿಯಾದ ಫುಡ್ ಅಂಡ್ ಡ್ರಗ್ ಅಥಾರಿಟಿ ವರದಿ ಬಹಿರಂಗಪಡಿಸಿದೆ.
ವರದಿ ಪ್ರಕಾರ,ಶೇಕಡಾ 55 ರಷ್ಟು ಗ್ರಾಹಕರು ಆಹಾರ ಉತ್ಪನ್ನಗಳಲ್ಲಿ ದಾಖಲಾದ ಮಾಹಿತಿಯನ್ನು ಗಮನಿಸುವುದಿಲ್ಲ ಎಂದಿದೆ.

ಆಹಾರ ಮತ್ತು ಔಷಧ ಪ್ರಾಧಿಕಾರ ರಿಸರ್ಚ್ ಆ್ಯಂಡ್ ಸ್ಟಡಿ ಸೆಂಟರ್, ರಿಯಾದ್, ಜಿದ್ದಾ, ದಮಾಂ, ತಬೂಕ್, ಮದೀನಾ, ಹಾಯಿಲ್ ಮತ್ತು ಅಬಹಾದಲ್ಲಿ ಈ ಅಧ್ಯಯನವನ್ನು ನಡೆಸಿತು.

12,424 ಗ್ರಾಹಕರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ 12% ಮಂದಿ ಮಾತ್ರ ಗುಣಮಟ್ಟದ ಪರಿಶೀಲನೆ ನಡೆಸುತ್ತಿದ್ದಾರೆ. 21% ಜನರು ಉತ್ಪಾದನಾ ದಿನಾಂಕವನ್ನು ನೋಡುತ್ತಾರೆ. 72% ಜನರು ಉತ್ಪನ್ನದ ಅವಧಿಯು ಕೊನೆಗೊಳ್ಳುವ ದಿನಾಂಕವನ್ನು ಪರೀಕ್ಷಿಸುವುದಿಲ್ಲ. ಸುಮಾರು 60% ಜನರು ಮಾಹಿತಿಯನ್ನು ಪೂರ್ಣವಾಗಿ ನಂಬುವವರಾಗಿದ್ದಾರೆ. ಉಪಯೋಗಿಸುವ ವಸ್ತು ಅಲರ್ಜಿಯನ್ನು ಉಂಟುಮಾಡಬಹುದೇ ಎಂದು 97.7% ರಷ್ಟು ಜನರು ಪರೀಕ್ಷಿಸುವುದಿಲ್ಲ.

ಉತ್ಪನ್ನಗಳಲ್ಲಿ ಉಲ್ಲೇಖಿಸಲಾಗಿರುವ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಬಗ್ಗೆ ಗ್ರಾಹಕರಲ್ಲಿ ಸ್ಪಷ್ಟತೆ ಇಲ್ಲ. 49.6 ರಷ್ಟು ಗ್ರಾಹಕರು ಜಾಹೀರಾತುಗಳಲ್ಲಿ ನಂಬಿಕೆ ಹೊಂದಿದ್ದಾರೆ.

ಅಂತಾರಾಷ್ಟ್ರೀಯ ಗುಣಮಟ್ಟ ಮತ್ತು ಆರೋಗ್ಯ ರಕ್ಷಣೆಯನ್ನು ಖಾತರಿ ಪಡಿಸಲು ಸೌದಿ ಅರೇಬಿಯಾದ ಆಹಾರ ಮತ್ತು ಔಷಧಿ ಪ್ರಾಧಿಕಾರದ ಅನುಮತಿಯು ಮಾರುಕಟ್ಟೆಗೆ ತಲುಪುವ ಉತ್ಪನ್ನಗಳಿಗೆ ಬೇಕಾಗುತ್ತದೆ. ಗ್ರಾಹಕರಿಗೆ ಜಾಗೃತಿ ಮೂಡಿಸುವ ಭಾಗವಾಗಿ ವರದಿ ಸಿದ್ಧಪಡಿಸಲಾಗಿದೆ ಎಂದು ಪ್ರಾಧಿಕಾರ ವ್ಯಕ್ತಪಡಿಸಿದೆ.

error: Content is protected !! Not allowed copy content from janadhvani.com