ಅಜ್ಮೀರ್: ರಾಜಸ್ಥಾನದ ಅಜ್ಮೀರ್‌ನಲ್ಲಿ ಮುಸುಕುಧಾರಿಗಳು ಮಸೀದಿಗೆ ನುಗ್ಗಿ ಇಮಾಮ್‌ಗೆ ಥಳಿಸಿ ಹತ್ಯೆ ಮಾಡಿದ್ದಾರೆ. ದೌರಾಯಿ ಪ್ರದೇಶದ ಮೊಹಮ್ಮದಿ ಮದೀನಾ ಮಸೀದಿಯೊಳಗೆ ಶನಿವಾರ ಮುಂಜಾನೆ ಈ ದುರಂತ ಘಟನೆ ನಡೆದಿದೆ. ಉತ್ತರ ಪ್ರದೇಶದ ರಾಂಪುರ ಮೂಲದ ಮೌಲಾನಾ ಮಾಹಿರ್ (30) ಮೃತಪಟ್ಟವರು.
ಈ ವೇಳೆ ಆರು ಮಕ್ಕಳು ಮಸೀದಿಯೊಳಗೆ ಇದ್ದರು. ಮೂವರು ಮುಸುಕುಧಾರಿಗಳು ಇಮಾಮರನ್ನು ಥಳಿಸಿ ಕೊಂದರು. ಬೊಬ್ಬೆ ಹೊಡೆದರೆ ಸಾಯಿಸುತ್ತೇವೆ ಎಂದು ಹಲ್ಲೆಕೋರರು ಮಕ್ಕಳಿಗೆ ಬೆದರಿಕೆ ಹಾಕಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ದೌರಾದ ಕಾಂಚನ್ ನಗರ ಪ್ರದೇಶದ ಮಸೀದಿಯಲ್ಲಿ ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ರಾಮಗಂಜ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ರವೀಂದ್ರ ಸಿಂಗ್ ತಿಳಿಸಿದ್ದಾರೆ. ಮಸೀದಿಯಲ್ಲಿ ಓದುತ್ತಿರುವ ಕೆಲವು ಮಕ್ಕಳು ಸಹ ಇಲ್ಲಿ ವಾಸಿಸುತ್ತಿದ್ದರು. ಘಟನೆಯ ವೇಳೆ ಮಸೀದಿಯಲ್ಲಿ ಆರು ಮಕ್ಕಳು ಇದ್ದರು. ಮೌಲಾನಾ ಮಾಹಿರ್ ಕೂಡ ಇದೇ ಮಸೀದಿಯಲ್ಲಿ ವಾಸಿಸುತ್ತಿದ್ದರು.
ರಾತ್ರಿ ಮೂರು ಗಂಟೆಗೆ ಮಕ್ಕಳು ಕಿರುಚುತ್ತಾ ಮಸೀದಿಯಿಂದ ಹೊರಗೆ ಬಂದಾಗ ಅಕ್ಕಪಕ್ಕದವರು ಎದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದೆ ಎಂದು ಅಧಿಕಾರಿ ಹೇಳಿದರು. ದಾಳಿಕೋರರು ಮಸೀದಿಯ ಹಿಂದಿನಿಂದ ಬಂದಿದ್ದಾರೆ. ಇಮಾಮರನ್ನು ಹತ್ಯೆ ಮಾಡಿದ ಬಳಿಕ ಅದೇ ದಾರಿಯಲ್ಲಿ ಪರಾರಿಯಾಗಿದ್ದಾರೆ.
ಘಟನೆಯ ಪ್ರಮುಖ ಸಾಕ್ಷಿಗಳಾಗಿರುವ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರಿಗೆ ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಬೆಂಬಲವನ್ನು ಒದಗಿಸಲು ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು. ಮೂವರು ಮುಸುಕುಧಾರಿಗಳಿಂದ ದಾಳಿ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಾಳಿಕೋರರು ಮತ್ತು ಕೊಲೆಯ ಹಿಂದಿನ ಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದರು.
“ಅವರು ನಮ್ಮೊಂದಿಗೆ ಮಲಗಿದ್ದರು. ಇದ್ದಕ್ಕಿದ್ದಂತೆ ಮೂವರು ದಾಳಿಕೋರರು ದೊಣ್ಣೆಗಳೊಂದಿಗೆ ಕೋಣೆಗೆ ಪ್ರವೇಶಿಸಿದರು. ಮೂವರೂ ಬಟ್ಟೆಯಿಂದ ಮುಖ ಮುಚ್ಚಿಕೊಂಡಿದ್ದರು. ನಾವೆಲ್ಲರೂ ಎಚ್ಚರಗೊಂಡೆವು. ಹಲ್ಲೆಕೋರರು ನಮ್ಮನ್ನು ಕೊಠಡಿಯಿಂದ ಹೊರಗೆ ಎಸೆದು ಕೊಲೆ ಬೆದರಿಕೆ ಹಾಕಿದರು. ಇದಾದ ನಂತರ ಮೌಲಾನಾ ಸಾಹಿಬ್ ರನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿ, ಬಳಿಕ ಓಡಿ ಹೋದರು”- ಮಕ್ಕಳು ಹೇಳಿದರು.
ಅಕ್ಟೋಬರ್ 28 ರಂದು ಮಸೀದಿಯ ಮುಖ್ಯ ಇಮಾಮ್ ಮೌಲಾನಾ ಮುಹಮ್ಮದ್ ಝಹೀರ್ ಅವರ ಮರಣದ ನಂತರ ಮಾಹಿರ್ ಅವರನ್ನು ಮುಖ್ಯ ಇಮಾಮ್ ಆಗಿ ಮಾಡಲಾಯಿತು. ಅವರು ಏಳು ವರ್ಷಗಳ ಹಿಂದೆ ರಾಂಪುರದಿಂದ ಇಲ್ಲಿಗೆ ಬಂದರು ಮತ್ತು ಮಸೀದಿಯಲ್ಲಿ ತಮ್ಮ ಕೆಲಸದ ಜೊತೆಗೆ ಮಕ್ಕಳಿಗೆ ಪಾಠ ಮಾಡುತ್ತಾ ಇಲ್ಲಿ ವಾಸಿಸುತ್ತಿದ್ದಾರೆ. ಮೌಲಾನಾ ಅವರೊಂದಿಗೆ 15 ಮಕ್ಕಳು ಮಸೀದಿಯಲ್ಲಿ ವಾಸಿಸುತ್ತಿದ್ದರು.