janadhvani

Kannada Online News Paper

ಒಮಾನ್‌ನಲ್ಲಿ ಭಾರೀ ಮಳೆ : ಓರ್ವ ಭಾರತೀಯ ಸೇರಿದಂತೆ 12 ಮಂದಿ ಮೃತ್ಯು

ಒಮಾನ್ ನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಪ್ರವಾಹದಲ್ಲಿ ಓರ್ವ ಭಾರತೀಯ ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದಾರೆ. ಕೊಲ್ಲಂ ಮೂಲದ ಸುನೀಲಕುಮಾರ್ ಸದಾನಂದನ್ ಮೃತರು. ದಕ್ಷಿಣ ಶಾರ್ಕಿಯಲ್ಲಿ ಗೋಡೆ ಬಿದ್ದು ಸುನೀಲ್ ಕುಮಾರ್ ಮೃತಪಟ್ಟಿದ್ದಾರೆ. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ತುರ್ತು ನಿರ್ವಹಣೆಗಾಗಿ ರಾಷ್ಟ್ರೀಯ ಸಮಿತಿಯ ಪ್ರಕಾರ, ಮೃತರಲ್ಲಿ 9 ವಿದ್ಯಾರ್ಥಿಗಳು, ಇಬ್ಬರು ಸ್ಥಳೀಯರು ಮತ್ತು ಒಬ್ಬ ವಲಸಿಗರು ಸೇರಿದ್ದಾರೆ. ಪ್ರವಾಹದಲ್ಲಿ ಎಂಟು ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಒಮಾನ್ ಸುದ್ದಿ ಸಂಸ್ಥೆ (ಒಎನ್‌ಎ) ವರದಿ ಮಾಡಿದೆ.

ಒಮಾನ್‌ನ ವಿವಿಧ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಅಲ್ ಮುದೈಬಿಯ ವಾಡಿ ಅಲ್ ಬತ್ತಾ ಎಂಬಲ್ಲಿ ಮಗುವಿನ ಶವ ಪತ್ತೆಯಾಗಿತ್ತು.

ಭಾರೀ ಮಳೆಯಿಂದಾಗಿ ಮಸ್ಕತ್, ಉತ್ತರ ಅಲ್ ಶರ್ಕಿಯಾ, ದಕ್ಷಿಣ ಅಲ್ ಶರ್ಕಿಯಾ, ಅಲ್ ದಖಿಲಿಯಾ ಮತ್ತು ಅಲ್ ದಹಿರಾ ಗವರ್ನರೇಟ್‌ಗಳಲ್ಲಿರುವ ಸಾರ್ವಜನಿಕ, ಖಾಸಗಿ ಮತ್ತು ಅಂತರಾಷ್ಟ್ರೀಯ ಶಾಲೆಗಳನ್ನು ಸೋಮವಾರ, ಏಪ್ರಿಲ್ 15 ರಂದು ಮುಚ್ಚಲಾಗುವುದು ಎಂದು ಶಿಕ್ಷಣ ಸಚಿವಾಲಯ ಪ್ರಕಟಿಸಿದೆ.

error: Content is protected !! Not allowed copy content from janadhvani.com