ಜಿದ್ದಾ, ಏಪ್ರಿಲ್.8|ಸೌದಿ ಅರೇಬಿಯಾದಲ್ಲಿ ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ನಾಳೆ (ಏಪ್ರಿಲ್.9) ರಮಳಾನ್ 30 ಆಗಿದ್ದು,ಬುಧವಾರ ಏಪ್ರಿಲ್ 10 ರಂದು ಶವ್ವಾಲ್ ಒಂದು ಅಥವಾ ಈದುಲ್ ಫಿತರ್ ಆಚರಿಸುವಂತೆ ಸೌದಿ ಸುಪ್ರೀಂಕೋರ್ಟ್ ವಿಶ್ವಾಸಿಗಳಿಗೆ ಕರೆ ನೀಡಿದೆ.
ಸೌದಿ ಅರೇಬಿಯಾವನ್ನು ಅನುಸರಿಸುವ ಯುಎಇ, ಕುವೈತ್, ಕತಾರ್ ಮತ್ತು ಬಹರೈನ್ ದೇಶಗಳಲ್ಲಿ ಬುಧವಾರ ಈದುಲ್ ಫಿತರ್ ಹಬ್ಬ ಆಚರಿಸಲಾಗುವುದು. ಒಮಾನ್‌ನಲ್ಲಿ ನಾಳೆ ಚಂದ್ರ ದರ್ಶನವಾದಲ್ಲಿ, ಬುಧವಾರ ಹಬ್ಬ ಇರಲಿದೆ. ಚಂದ್ರದರ್ಶನ ಆಗದಿದ್ದಲ್ಲಿ ಗುರುವಾರ ಈದುಲ್ ಫಿತರ್ ಹಬ್ಬ ಆಚರಣೆ.
ಪವಿತ್ರ ರಮಳಾನ್ ಮುಸಲ್ಮಾನರ ಮಟ್ಟಿಗೆ ಅತ್ಯಂತ ಪವಿತ್ರವಾದ ತಿಂಗಳಾಗಿದೆ. ಈ ತಿಂಗಳಿನಲ್ಲಿ ಕಠಿಣ ವೃತವನ್ನು ಆಚರಿಸಿ, ಅಲ್ಲಾಹನ ಇಷ್ಟ ದಾಸರ ಸಾಲಿನಲ್ಲಿ ಸೇರುವ ಉದ್ದೇಶದಿಂದ ಎಲ್ಲಾ ವಿಧ ಕೆಡುಕುಗಳಿಂದಲೂ ದೂರ ಸರಿದು ಹೆಚ್ಚೆಚ್ಚು ಒಳಿತನ್ನು ಮಾಡುತ್ತಾ ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಲು ಶ್ರಮಿಸುತ್ತಾರೆ.
ರಮಳಾನ್ ತಿಂಗಳ ಕಡ್ಡಾಯ ವೃತವನ್ನು ಕೊನೆಗೊಳಿಸುವ ದಿನದಂದು ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ರಮಳಾನ್ 29 ನೇ ಉಪವಾಸ ತೊರೆದ ಬಳಿಕ ಶವ್ವಾಲ್ ಚಂದ್ರ ದರ್ಶನವಾದಲ್ಲಿ ಮರುದಿನ ಈದ್ ಆಚರಿಸಲಾಗುತ್ತದೆ. ಚಂದ್ರ ದರ್ಶನವಾಗದಿದ್ದಲ್ಲಿ ರಮಳಾನ್ 30 ಪೂರ್ತೀಕರಿಸಿದ ನಂತರ ಈದ್ ಆಚರಿಸಲಾಗುತ್ತದೆ.
ಈದ್ ದಿನದಂದು ಯಾವೊಬ್ಬನೂ ಹಸಿವಿನಿಂದ ಇರಕೂಡದು ಎಂಬ ಉದ್ದೇಶದಿಂದ,ಆ ದಿನದಲ್ಲಿ ಫಿತರ್ ಝಕಾತ್ ಸಂಪ್ರದಾಯವನ್ನು ಕಡ್ಡಾಯಗೊಳಿಸಲಾಗಿದೆ. ಆಯಾ ಊರಿನಲ್ಲಿ ಸಾಮಾನ್ಯವಾಗಿ ಸೇವಿಸಲ್ಪಡುವ ಧಾನ್ಯಗಳನ್ನು ನಿರ್ದಿಷ್ಟ ಅಳತೆಯಲ್ಲಿ ಫಿತರ್ ಝಕಾತ್ ರೂಪದಲ್ಲಿ ನೀಡಬೇಕು.ಈದ್ ಎಂಬುದು ಪರಸ್ಪರ ಸ್ನೇಹ, ಸಹಬಾಳ್ವೆ ಸೌಹಾರ್ಧತೆಯನ್ನು ಸಾರುವ ಸಂಕೇತವಾಗಿದೆ.