janadhvani

Kannada Online News Paper

ವಿಮಾನದಲ್ಲಿ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಹರಿದಾಡುತ್ತಿತ್ತು ಹುಳು!- ಬೆಚ್ಚಿಬಿದ್ದ ಪ್ರಯಾಣಿಕೆ

ಕುಶ್ಬೂ ಗುಪ್ತಾ ಅವರ ಸಂದೇಶಕ್ಕೆ ಇಂಡಿಗೋ ಪ್ರತಿಕ್ರಿಯೆ ನೀಡಿದೆ. ಇಂಡಿಗೋ ಪ್ರಯಾಣಿಕರಾದ ಗುಪ್ತಾಗೆ ಕ್ಷಮೆಯಾಚಿಸಿದೆ ಮತ್ತು ವಿಷಯವು ಪ್ರಸ್ತುತ ತನಿಖೆಯಲ್ಲಿದೆ ಎಂದು ಹೇಳಿದೆ.

ನವದೆಹಲಿ:ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬರು ತಮಗೆ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಜೀವಂತ ಹುಳು ಹರಿದಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಕುಶ್ಬೂ ಗುಪ್ತಾ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸ್ಯಾಂಡ್‌ವಿಚ್‌ನಲ್ಲಿ ಜೀವಂತ ಹುಳು ಹರಿದಾಡುವ ಫೋಟೋ ಕೂಡ ಶೇರ್ ಮಾಡಿದ್ದಾರೆ.

ಇದು ಜನಾಕ್ರೋಶಕ್ಕೆ ಗುರಿಯಾಗಿದೆ. ಕುಶ್ಬೂ ಗುಪ್ತಾ ಅವರು ಈ ಘಟನೆಯನ್ನು ವಿಮಾನಯಾನ ಸಂಸ್ಥೆಗೆ ಟ್ಯಾಗ್ ಮಾಡುವ ಮೂಲಕ ವಿವರಿಸಿದ್ದಾರೆ. ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಕುಶ್ಬೂ ಅವರಿಗೆ ಸಸ್ಯಾಹಾರಿ ಸ್ಯಾಂಡ್‌ವಿಚ್ ನೀಡಲಾಯಿತು.

ಅವರು ವಿಮಾನ ಟಿಕೆಟ್‌ನೊಂದಿಗೆ ಊಟವನ್ನು ಮೊದಲೇ ಕಾಯ್ದಿರಿಸಿದ್ದರು. ಸ್ಯಾಂಡ್‌ವಿಚ್ ಅನ್ನು ತಿನ್ನುವಾಗ ಕುಶ್ಬೂ ಗುಪ್ತಾ ಅವರಿಗೆ ಅದರಲ್ಲಿ ಏನೋ ಹರಿದಾಡುವುದು ಕಾಣಿಸಿದೆ. ಅದನ್ನು ಹತ್ತಿರದಿಂದ ನೋಡಿದಾಗ ಅವರು ಅಕ್ಷರಶ: ಬೆಚ್ಚಿಬಿದ್ದಿದ್ದಾರೆ. ಅದರಲ್ಲಿ ಜೀವಂತ ಹುಳವೊಂದು ಹರಿದಾಡುತ್ತಿರುವುದನ್ನು ಕುಶ್ಬೂ ಗುಪ್ತಾ ಅವರು ಗಮನಿಸಿದ್ದಾರೆ.

ತಕ್ಷಣ ಅವರು ಗಗನ ಸಖಿಗೆ ಅದನ್ನು ತೋರಿಸಿದ್ದಾರೆ. ಈ ವೇಳೆ ವಿಮಾನ ಸಿಬ್ಬಂದಿ ಕುಶ್ಬೂ ಗುಪ್ತಾ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ ಎನ್ನಲಾಗಿದೆ. ಕುಶ್ಬೂ ಗುಪ್ತಾ ಅವರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಇಂಡಿಗೋ ವಿಮಾನದಲ್ಲಿ ತನ್ನ ಸಂಕಷ್ಟದ ಅನುಭವವನ್ನು ಅವರು ವಿವರಿಸಿದ್ದಾರೆ. ಆಹಾರದ ಗುಣಮಟ್ಟ ಮತ್ತು ಸೇವಾ ಗುಣಮಟ್ಟದಲ್ಲಿನ ಕುಸಿತಕ್ಕಾಗಿ ವಿಮಾನಯಾನ ಸಂಸ್ಥೆಯನ್ನು ದೂಷಿಸಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ.

ಇಂಡಿಗೋ ಪ್ರತಿಕ್ರಿಯೆ ಏನು?
ಕುಶ್ಬೂ ಗುಪ್ತಾ ಅವರ ಸಂದೇಶಕ್ಕೆ ಇಂಡಿಗೋ ಪ್ರತಿಕ್ರಿಯೆ ನೀಡಿದೆ. ಇಂಡಿಗೋ ಪ್ರಯಾಣಿಕರಾದ ಗುಪ್ತಾಗೆ ಕ್ಷಮೆಯಾಚಿಸಿದೆ ಮತ್ತು ವಿಷಯವು ಪ್ರಸ್ತುತ ತನಿಖೆಯಲ್ಲಿದೆ ಎಂದು ಹೇಳಿದೆ. “ನಮ್ಮ ಗ್ರಾಹಕರಲ್ಲಿ ಒಬ್ಬರು ದೆಹಲಿಯಿಂದ ಮುಂಬೈಗೆ 6E 6107 ವಿಮಾನದಲ್ಲಿ ತಮ್ಮ ಅನುಭವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ನಮಗೆ ತಿಳಿದಿದೆ. ವಿಮಾನದಲ್ಲಿ ಆಹಾರ ಮತ್ತು ಪಾನೀಯ ಸೇವೆಯ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿರುತ್ತೇವೆ. ತನಿಖೆಯ ನಂತರ, ನಮ್ಮ ಸಿಬ್ಬಂದಿ ಸ್ಯಾಂಡ್‌ವಿಚ್‌ನ ಸೇವೆಯನ್ನು ತಕ್ಷಣವೇ ನಿಲ್ಲಿಸಿದೆ, “ಎಂದಿದೆ.

“ಪ್ರಸ್ತುತ ವಿಷಯವು ಸಂಪೂರ್ಣ ಪರೀಕ್ಷೆಯಲ್ಲಿದೆ. ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಅಡುಗೆದಾರರೊಂದಿಗೆ ಮಾತನಾಡಿದ್ದೇವೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ” ಎಂದು ಅದು ಹೇಳಿದೆ

error: Content is protected !! Not allowed copy content from janadhvani.com