janadhvani

Kannada Online News Paper

ಒಂದೇ ಕುಟುಂಬದ ನಾಲ್ವರ ಹತ್ಯೆ: ನರಹಂತಕ ಪ್ರವೀಣ್‌ ಚೌಗುಲೆಯ ಜಾಮೀನು ಅರ್ಜಿ ವಜಾ

ಇದೊಂದು ಮರಣದಂಡನೆ ಶಿಕ್ಷೆ ಕೊಡುವ ಗಂಭೀರ ಹಾಗೂ ತ್ರೀವ ಸ್ವರೂಪದ ಪ್ರಕರಣ ಮತ್ತು ಪ್ರಕರಣದ ತನಿಖೆ ಇನ್ನೂ ಬಾಕಿ ಇರುವುದರಿಂದ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಉಡುಪಿ, ಡಿ.30:ಇಲ್ಲಿನ ನೇಜಾರಿನ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಮಾಡಿದ್ದ ಆರೋಪಿ ಪ್ರವೀಣ್‌ ಚೌಗುಲೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿ ಆದೇಶ ಹೊರಡಿಸಿದೆ.

ಆರೋಪಿ ಪ್ರವೀಣ್‌ ಚೌಗುಲೆ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನು ಕೋರಿ ಡಿಸೆಂಬರ್ 14ರಂದು ವಕೀಲ ಕೆ.ಎಸ್‌.ಎನ್‌.ರಾಜೇಶ್ ಮೂಲಕ ಅರ್ಜಿ ಸಲ್ಲಿಸಿದ್ದ. ಜಾಮೀನಿಗೆ ಸರ್ಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಧೀಶ ದಿನೇಶ್ ಹೆಗ್ಡೆ ಆದೇಶ ಹೊರಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯಲ್ಲಿ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳಿಂದ ಆರೋಪಿ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೆ ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಕೂಡ ಇದ್ದಾರೆ. ಇದೊಂದು ಮರಣದಂಡನೆ ಶಿಕ್ಷೆ ಕೊಡುವ ಗಂಭೀರ ಹಾಗೂ ತ್ರೀವ ಸ್ವರೂಪದ ಪ್ರಕರಣ ಮತ್ತು ಪ್ರಕರಣದ ತನಿಖೆ ಇನ್ನೂ ಬಾಕಿ ಇರುವುದರಿಂದ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣ ಸಂಬಂಧ ಕುಟುಂಬಸ್ಥರು, ಹಂತಕನ ವಿರುದ್ಧ ಕಠಿಣ ಕ್ರಮಕ್ಕೆ ಪಟ್ಟು ಹಾಕಿದ್ದರು. ಇನ್ನು, ಕೆಲಸ ಮಾಡೋ ಸ್ಥಳದಲ್ಲಿ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ. ಇದು ಕೊನೆ ಆಗ್ಬೇಕೆಂದು ಆಗ್ರಹಿಸಿದ್ದರು.

error: Content is protected !! Not allowed copy content from janadhvani.com