janadhvani

Kannada Online News Paper

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವಿಲ್ಲ, 2024ರಲ್ಲಿ ಚುನಾವಣೆ ನಡೆಸಬೇಕು- ಸುಪ್ರೀಂಕೋರ್ಟ್

2024ರ ಸೆಪ್ಟೆಂಬರ್ 30 ರೊಳಗೆ ಜಮ್ಮು ಕಾಶ್ಮೀರದ ಶಾಸನಸಭೆಗೆ ಚುನಾವಣೆಗಳನ್ನು ನಡೆಸಲು ಭಾರತದ ಚುನಾವಣಾ ಆಯೋಗವು ಕ್ರಮಗಳನ್ನು ತೆಗೆದುಕೊಳ್ಳಬೇಕು

ನವದೆಹಲಿ: ಜಮ್ಮ-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370ನೇ ವಿಧಿ ರದ್ದುಗೊಳಿಸುವ ಕೇಂದ್ರ ಸರ್ಕಾರದ ಆದೇಶದ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಇಂದು ಎತ್ತಿಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಈ ಬಗ್ಗೆ ಇಂದು ಮಹತ್ವದ ತೀರ್ಪು ನೀಡಿದ್ದು, ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ತಾತ್ಕಾಲಿಕವಾಗಿದ್ದು, ಅದನ್ನು ರದ್ದು ಮಾಡುವ ಅಧಿಕಾರವು ರಾಷ್ಟ್ರಪತಿಗಳಿಗಿದೆ ಎಂದು ಹೇಳಿದೆ.

ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಹಲವು ಸೂಚನೆಗಳನ್ನೂ ಸರ್ವೋಚ್ಛ ಪೀಠ ನೀಡಿದೆ. ಜಮ್ಮು ಕಾಶ್ಮೀರ ಮರು ಸಂಘಟನಾ ಕಾಯ್ದೆಯಡಿ ಕಿತ್ತುಕೊಂಡಿರುವ ರಾಜ್ಯ ಸ್ಥಾನಮಾನವನ್ನು ಮರಳಿ ನೀಡಬೇಕು ಎಂದಿದೆ. 2019ರಿಂದ ಜಮ್ಮು ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾಗಿದೆ.

ಶಾಸನಸಭೆಗೆ ಚುನಾವಣೆ ನಡೆಸುವುದನ್ನು ನಿಯಂತ್ರಣದಲ್ಲಿರಿಸಬಾರದು. 2024ರ ಸೆಪ್ಟೆಂಬರ್ 30 ರೊಳಗೆ ಜಮ್ಮು ಕಾಶ್ಮೀರದ ಶಾಸನಸಭೆಗೆ ಚುನಾವಣೆಗಳನ್ನು ನಡೆಸಲು ಭಾರತದ ಚುನಾವಣಾ ಆಯೋಗವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ.

ನಾಲ್ಕು ವರ್ಷಗಳ ಹಿಂದೆ 370ನೇ ವಿಧಿ ರದ್ದು ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. ಕೇಂದ್ರದ ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.

370ನೇ ವಿಧಿ ರದ್ದಾದ ನಂತರ ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂದು ವಿಭಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿತ್ತು. ಐವರು ನ್ಯಾಯಮೂರ್ತಿಗಳಾದ ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರು 16 ದಿನಗಳ ಕಾಲ ಅರ್ಜಿದಾರರು ಮತ್ತು ಕೇಂದ್ರದ ವಾದವನ್ನು ಆಲಿಸಿದ್ದರು. ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 5 ರಂದು ಈ ಪ್ರಕರಣದ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.

ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ರಾಷ್ಟ್ರಪತಿಗಳ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಕೇಂದ್ರದ ಒಪ್ಪಿಗೆಯೊಂದಿಗೆ ಸಂವಿಧಾನದ ಎಲ್ಲ ನಿಬಂಧನೆಗಳನ್ನು ರಾಷ್ಟ್ರಪತಿಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸಬಹುದಿತ್ತು. ರಾಜ್ಯ ವಿಧಾನಸಭೆಯ ಒಪ್ಪಿಗೆಯನ್ನೂ ಪಡೆಯುವ ಅಗತ್ಯವಿಲ್ಲ ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

error: Content is protected !! Not allowed copy content from janadhvani.com