janadhvani

Kannada Online News Paper

ಹಮಾಸ್-ಇಸ್ರೇಲ್ ಸಂಘರ್ಷ: ಇಂದಿನಿಂದ ಕದನ ವಿರಾಮ ಅನುಷ್ಠಾನಕ್ಕೆ

ಹಮಾಸ್‌ ನಿಂದ 50 ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್‌ನಿಂದ 150 ಪ್ಯಾಲೆಸ್ಟೀನಿಗಳ ಬಿಡುಗಡೆ ಕುರಿತಂತೆ ಒಪ್ಪಂದ

ಟೆಲ್ ಅವೀವ್: ಇಸ್ರೇಲ್-ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಇಂದಿನಿಂದ ಆರಂಭಗೊಂಡಿದ್ದು, ಮೊದಲ ದಿನದಂದು ಹಮಾಸ್ ವಶದಲ್ಲಿರುವ 13 ಒತ್ತೆಯಾಳು ಸೇರಿದಂತೆ ಇಸ್ರೇಲ್ ಬಂಧಿಸಿರುವ ಪ್ಯಾಲೆಸ್ಟೀನಿಯರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಕತಾರ್ ಘೋಷಿಸಿದೆ.

ಕತಾರ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್-ಅನ್ಸಾರಿ ಮಾತನಾಡಿ, ಇಂದು ಬೆಳಿಗ್ಗೆ 7 ಗಂಟೆಯಿಂದ ಕದನ ವಿರಾಮವು ಪ್ರಾರಂಭವಾಗಿದ್ದು, ಮಹಿಳೆ ಮತ್ತು ಮಕ್ಕಳು ಸೇರಿದಂತೆ 13 ಮಂದಿ ಒತ್ತೆಯಾಳುಗಳನ್ನು ಸಂಜೆ 4 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಬಿಡುಗಡೆ ಮಾಡಲು ನಿರ್ಧರಿಸಲಾದ ಪ್ಯಾಲೆಸ್ಟೀನ್‌ ಪ್ರಜೆಗಳ ಪಟ್ಟಿಯನ್ನು ಇಸ್ರೇಲ್‌ ಗುಪ್ತಚರ ಇಲಾಖೆ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.

ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಟ್ಜಾಚಿ ಹನೆಗ್ಬಿ ಮಾತನಾಡಿ, ನಿರೀಕ್ಷೆಯಂತೆ ಪ್ರಕ್ರಿಯೆ ಗುರುವಾರ ಆರಂಭವಾಗಬೇಕಿತ್ತು. ಹಂತ, ಹಂತವಾಗಿ ಹಮಾಸ್‌ ನಿಂದ 50 ಒತ್ತೆಯಾಳುಗಳ ಬಿಡುಗಡೆ ಹಾಗೂ ಪ್ರತಿಯಾಗಿ ಇಸ್ರೇಲ್‌ನಿಂದ 150 ಪ್ಯಾಲೆಸ್ಟೀನಿಗಳ ಬಿಡುಗಡೆ ಕುರಿತಂತೆ ಒಪ್ಪಂದ ಆಗಿತ್ತು. ‘ಮೂಲ ಒಪ್ಪಂದದಂತೇ ನಿಗದಿತ ಸ್ಥಳದಲ್ಲೇ ಬಿಡುಗಡೆ ಕಾರ್ಯ ನಡೆಯಲಿದೆ’ ಎಂದು ತಿಳಿಸಿದ್ದಾರೆ.

ಸೇನೆ ಆಧಿಕಾರಿಯೊಬ್ಬರು ಮಾತನಾಡಿ, ‘ತಾತ್ಕಾಲಿಕ ಕದನ ವಿರಾಮವು ಮುಂದೆ ಹೋಗಿದೆ. ಕಾರ್ಯಾಚರಣೆ ಮುಂದುವರಿದಿದೆ’ ಎಂದು ತಿಳಿಸಿದ್ದಾರೆ.ಕದನ ನಿರತ ಹಮಾಸ್‌ ಹಾಗೂ ಇಸ್ರೇಲ್‌ ಸೇನೆಯ ನಡುವೆ ಒತ್ತೆಯಾಳುಗಳ ಬಿಡುಗಡೆಗಾಗಿ ಒಡಂಬಡಿಕೆ ಮೂಡಿತ್ತು. ಇಸ್ರೇಲ್‌, ಅಮೆರಿಕ, ಕತಾರ್‌ ಇದಕ್ಕಾಗಿ ಮಧ್ಯಸ್ಥಿಕೆಯನ್ನು ವಹಿಸಿದ್ದವು.

ಅಕ್ಟೋಬರ್‌ 7ರಂದು ಹಮಾಸ್ ಇಸ್ರೇಲ್‌ ಮೇಲೆ ನಡೆಸಿದ ಮಾರಕ ದಾಳಿಗಳಲ್ಲಿ 250ಕ್ಕೂ ಅಧಿಕ ಇಸ್ರೇಲಿ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಒಯ್ದಿತ್ತು. ಪ್ರತಿಯಾಗಿ ಗಾಜಾದಲ್ಲಿರುವ ನಾಗರಿಕರ ಮೇಲೆ ಬಾಂಬ್‌ ದಾಳಿಗಳನ್ನು ಇಸ್ರೇಲ್‌ ನಡೆಸಿದೆ. ಮಹಿಳೆ, ಮಕ್ಕಳ ಸಹಿತ 15,000ಕ್ಕೂ ಅಧಿಕ ಮಂದಿ ಈ ದಾಳಿಗಳಲ್ಲಿ ಮೃತಪಟ್ಟಿದ್ದಾರೆ.

ಇಸ್ರೇಲ್ ನಡೆಸಿರುವ ಈ ಕಿರಾತಕ ಕೃತ್ಯ ವಿರುದ್ಧ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ, ಗಾಝಾದಲ್ಲಿನ ಆಸ್ಪತ್ರೆಗಳ ಮೇಲೆ ಹಾಗೂ ನಿರಾಶ್ರಿತರ ಕೇಂದ್ರಗಳ ಮೇಲೆ ದಾಳಿ ನಡೆಸಿ, ಕ್ರೂರ ಹತ್ಯಾಕಾಂಡ ನಡೆಸಿದೆ.

ಹಮಾಸ್ ನ ಅಡಗುತಾಣವನ್ನು ಪತ್ತೆ ಹಚ್ಚುವ ನೆಪವೊಡ್ಡಿ ಇಸ್ರೇಲ್ ಈ ರಾಕ್ಷಸೀಯ ದಾಳಿ ನಡೆಸಿದೆ,ಆದರೆ. ಹಮಾಸ್ ನಿರ್ಮಿಸಿದ ಕೃತಕ ತಾಣವನ್ನಲ್ಲದೆ, ಹಮಾಸ್‌ನ ನೈಜ ತಾಣವನ್ನು ತಲುಪಲು ಇಸ್ರೇಲ್ ಸೇನೆಗೆ ಸಾಧ್ಯವಾಗಿಲ್ಲ.

error: Content is protected !! Not allowed copy content from janadhvani.com