janadhvani

Kannada Online News Paper

ಜೆಡಿಎಸ್- ಬಿಜೆಪಿ ಮೈತ್ರಿಗೆ ಡೆಡ್ ಲೈನ್: ಡಿ‌.9 ರಂದು ಹೊಸ ರಾಷ್ಟ್ರೀಯ ಅಧ್ಯಕ್ಷರ ನೇಮಕ

ಸಭೆಯ ಕುರಿತಾಗಿ ಮಾತನಾಡಿರುವ ಜೆಡಿಎಸ್ ಉಚ್ಛಾಟಿತ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, " ರಾಷ್ಟ್ರೀಯ ಕಾರ್ಯಕಾರಣಿ ಸಭೆಗೆ 11 ಜನ ರಾಜ್ಯಾಧ್ಯಕ್ಷರು ಭಾಗಿಯಾಗಿದ್ದರು. ಇದರಿಂದ ಎಚ್‌ಡಿ ಕುಮಾರಸ್ವಾಮಿ ಅವರು ಗಾಬರಿ ಬಿದ್ದಿದ್ದಾರೆ. ಇವರ ಜೊತೆ ಯಾರು ಉಳಿದಿಲ್ಲ " ಎಂದರು.

ಬೆಂಗಳೂರು: ವಿವಿಧ ರಾಜ್ಯಗಳ 11 ಜನ ಜೆಡಿಎಸ್ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಡೆಡ್‌ ಲೈನ್ ನನ್ನು ನೀಡಲಾಗಿದೆ.

ಈ ಮೈತ್ರಿಗೆ ವಿವಿಧ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿದ್ದು, ಡಿಸೆಂಬರ್ 9 ರ ಒಳಗಾಗಿ ಮೈತ್ರಿ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಅಸಮಾಧಾನಿತರು ತಿಳಿಸಿದ್ದಾರೆ. ಮೈತ್ರಿಯಿಂದ ಜೆಡಿಎಸ್ ಹಿಂದೆ ಸರಿಯದೇ ಇದ್ದಲ್ಲಿ ಡಿ‌. 9 ರಂದು ಸಭೆ ಕರೆದು ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಕ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಕೇರಳ, ತಮಿಳುನಾಡು ಸೇರಿದಂತೆ ಜೆಡಿಎಸ್ ಸಕ್ರಿಯವಾಗಿರುವ ರಾಜ್ಯಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ‌.ಕೆ.ನಾಣು ಅವರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರಿಗೆ ಪತ್ರವನ್ನು ಬರೆದು, ಮೈತ್ರಿ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದರು.

ಈ ಪತ್ರದ ಬೆನ್ನಲ್ಲೇ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಿ ಆದೇಶ ಮಾಡಲಾಯಿತು. ಈ ನಡುವೆ ಸಿಎಂ ಇಬ್ರಾಹಿಂ ವಿವಿಧ ರಾಜ್ಯಗಳ ಜೆಡಿಎಸ್ ನಾಯಕರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ರಾಷ್ಟ್ರೀಯ ಕಾರ್ಯಕಾರಣಿ ಸಭೆಯೂ ನಡೆದಿದೆ.

ಎಚ್‌ಡಿಕೆ ಜತೆ ಯಾರೂ ಉಳಿದಿಲ್ಲ-ಸಿಎಂ
ಸಭೆಯ ಕುರಿತಾಗಿ ಮಾತನಾಡಿರುವ ಜೆಡಿಎಸ್ ಉಚ್ಛಾಟಿತ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ” ರಾಷ್ಟ್ರೀಯ ಕಾರ್ಯಕಾರಣಿ ಸಭೆಗೆ 11 ಜನ ರಾಜ್ಯಾಧ್ಯಕ್ಷರು ಭಾಗಿಯಾಗಿದ್ದರು. ಇದರಿಂದ ಎಚ್‌ಡಿ ಕುಮಾರಸ್ವಾಮಿ ಅವರು ಗಾಬರಿ ಬಿದ್ದಿದ್ದಾರೆ. ಇವರ ಜೊತೆ ಯಾರು ಉಳಿದಿಲ್ಲ ” ಎಂದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ‌.ಕೆ.ನಾಣು ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿ, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗಿದೆ. ನಮಗೆ ಮೈತ್ರಿ ಕುರಿತು ಕೇಳಿಲ್ಲ. ಮಗನಿಗಾಗಿ ಮೈತ್ರಿ ಮಾಡಿಕೊಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಅಲ್ಲದೆ, ಡಿ‌. 9 ರಂದು ಸಭೆ ಕರೆದು ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಕ ಮಾಡೋಣ ಅಂತ ತೀರ್ಮಾನ ಮಾಡಿದ್ದಾರೆ ಎಂದು ಇಬ್ರಾಹಿಂ ತಿಳಿಸಿದ್ದಾರೆ.

ಒಟ್ಟಿನಲ್ಲಿ ಜೆಡಿಎಸ್‌ ಪಕ್ಷದ ವರಿಷ್ಠರ ನಡೆಗೆ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಬೇರೆ ರಾಜ್ಯಗಳಲ್ಲಿ ಪಕ್ಷಗಳನ್ನು ಉಳಿಸುವ ನಿಟ್ಟಿನಲ್ಲಿ ದೇವೇಗೌಡರು ಯಾವ ಹೆಜ್ಜೆಯನ್ನು ಇಡುತ್ತಾರೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.

error: Content is protected !! Not allowed copy content from janadhvani.com