janadhvani

Kannada Online News Paper

ನೇಜಾರು ಹತ್ಯೆ ಪ್ರಕರಣ: ಪೋಲೀಸರ ಕ್ಷಿಪ್ರ ಕಾರ್ಯಾಚರಣೆ ಅಭಿನಂದನಾರ್ಹ, ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆಗ್ರಹ

ಪ್ರಕರಣದಲ್ಲಿ ಈವರೆಗಿನ ಪೊಲೀಸರ ಕಾರ್ಯವೈಖರಿ ಅಭಿನಂದನಾರ್ಹವಾಗಿದ್ದು, ಪೊಲೀಸರ ಮೇಲೆ ಜನರಿಗಿರುವ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ಉಡುಪಿ: ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ ಉಡುಪಿ ನೇಜಾರಿನ ತಾಯಿ ಹಾಗೂ ಮೂರು ಮಕ್ಕಳನ್ನು ಅಮಾನುಷವಾಗಿ ಹತ್ಯೆಗೈದ ನರ ಹಂತಕನನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿ, ಬಂಧಿಸಿದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯನ್ನು ಅಭಿನಂದಿಸಿರುವ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಈ ಪ್ರಕರಣದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವಂತೆ ರಾಜ್ಯ ಸರಕಾರ ವನ್ನು ಆಗ್ರಹಿಸಿದ್ದಾರೆ.

ಪ್ರಕರಣದಲ್ಲಿ ಈವರೆಗಿನ ಪೊಲೀಸರ ಕಾರ್ಯವೈಖರಿ ಅಭಿನಂದನಾರ್ಹವಾಗಿದ್ದು, ಪೊಲೀಸರ ಮೇಲೆ ಜನರಿಗಿರುವ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಸರ್ಕಾರವು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಬೆಂಗಳೂರಿನ ಚರ್ಚ್ ಬಾಂಬ್ ಸ್ಪೋಟ ವಿಶೇಷ ನ್ಯಾಯಾಲಯದಲ್ಲಿ ಸದ್ಯ ಯಾವುದೇ ಪ್ರಕರಣ ವಿಚಾರಣೆಗೆ ಬಾಕಿ ಇಲ್ಲದಿರುವ ಹಿನ್ನೆಲೆಯಲ್ಲಿ ನೇಜಾರು ಕೊಲೆ ಪ್ರಕರಣವನ್ನು ಈ ವಿಶೇಷ ನ್ಯಾಯಾಲಯಕ್ಕೆ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ವಿಶೇಷ ನ್ಯಾಯಾಲಯವನ್ನು ಪೀಠಾಸೀನಾಧಿಕಾರಿ, ಪೂರಕ ಸಿಬ್ಬಂದಿ ಮತ್ತು ಪೀಠೋಪಕರಣ ಇತ್ಯಾದಿಗಳೊಂದಿಗೆ ಈ ಪ್ರಕರಣ ವಿಲೇವಾರಿ ಆಗುವ ತನಕ ಉಡುಪಿಗೆ ಸ್ಥಳಾಂತರಿಸಬೇಕು ಮತ್ತು ಪ್ರಕರಣಕ್ಕೆ ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಿಸುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ಶೀಘ್ರ ನ್ಯಾಯದಾನ ದೊರಕಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com