janadhvani

Kannada Online News Paper

ಬಹರೈನ್: ಪೂರ್ವಿಕರ ಪರಂಪರೆಯನ್ನು ಪಾಲಿಸುವುದೇ ನೈಜ ಧಾರ್ಮಿಕತೆ- ಲತೀಫಿ ಉಸ್ತಾದ್

ಇಸ್ಲಾಂ ಧರ್ಮವು ಮನುಕುಲದ ಒಳಿತಿಗಾಗಿ ಸೃಷ್ಟಿ ಕರ್ತನೇ ರೂಪಿಸಿದ ನೀತಿ ಸಂಹಿತೆಗಳಾಗಿದ್ದು ಪ್ರವಾದಿಗಳಿಂದ ಸಹಾಬತ್ ಮತ್ತು ಅವರ ನಂತರದ ಸಜ್ಜನರ ಮೂಲಕ ನಮ್ಮನ್ನು ತಲುಪಿದೆ. ಪೂರ್ವಿಕರಿಂದ ಪರಂಪರಾಗತವಾಗಿ ಬಂದ ಧಾರ್ಮಿಕ ಆಚಾರ ವಿಚಾರಗಳನ್ನು ಯಥಾವತ್ತಾಗಿ ಪಾಲಿಸುವುದೇ ನಿಜವಾದ ಧರ್ಮ. ಅದನ್ನೇ ಅಹ್ಲ್ ಸುನ್ನತಿ ವಲ್ ಜಮಅ: ಎನ್ನಲಾಗುತ್ತದೆ. ಎಂದು ಐಸಿಎಫ್ ಬಹರೈನ್ ದಅವಾ ವಿಂಗ್ ಅಧ್ಯಕ್ಷರಾದ ಬಹು. ಅಬೂಬಕರ್ ಲತೀಫಿ ಉಸ್ತಾದ್ ಹೇಳಿದರು.
ಅವರು ಕೆಸಿಎಫ್ ಹಾಮದ್ ಟೌನ್ ಸೆಕ್ಟರಿನ ವತಿಯಿಂದ ನಡೆದ ಸಂಘಟನಾ ತರಬೇತಿಗೆ ನಾಯಕತ್ವ ನೀಡಿ ಮಾತನಾಡಿದರು.

ಸುನ್ನೀ ಸಿದ್ಧಾಂತಗಳಿಗೆ ವಿರುದ್ಧವಾಗಿ ಸೃಷ್ಟಿಸಲಾದ ಕೃತಕ ಪಂತಗಳು ಅತ್ಯಂತ ಅಪಾಯಕಾರಿಯಾಗಿದ್ದು ಸುನ್ನಿಗಳು ಸಂಘಟಿತರಾಗಿ ಜನ ಸಾಮಾನ್ಯರಿಗೆ ನೈಜ ಆಚಾರ ವಿಚಾರಗಳನ್ನು ತಲುಪಿಸಲು ಪ್ರಯತ್ನಿಸಬೇಕೆಂದು ಅವರು ಕರೆ ನೀಡಿದರು.
ಜನರಿಗೆ ಧರ್ಮ ಬೋಧನೆ ನೀಡುವುದರ ಜತೆಗೆ ಕಷ್ಟದಲ್ಲಿರುವ ಜನರಿಗೆ ಸಹಾಯ ಸಹಕಾರವನ್ನು ನೀಡಿ ಸಾಂತ್ವನ ಕಾರ್ಯಾಚರಣೆಯಲ್ಲಿ ಸಹಾ ಮುಂದಾಗುತ್ತಿರುವ ಕೆಸಿಎಫ್ ಕನ್ನಡಿಗರ ಪಾಲಿಗೆ ಬಹುದೊಡ್ಡ ಭಾಗ್ಯವಾಗಿದ್ದು ಇದನ್ನು ಮತ್ತಷ್ಟು ಪ್ರಬಲಗೊಳಿಸಿ ಬೆಳೆಸಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಕೆಸಿಎಫ್ ಹಾಮದ್ ಟೌನ್ ಸೆಕ್ಟರ್ ಅಧ್ಯಕ್ಷರಾದ ಜನಾಬ್ ನಯಾಝ್ ಬಟ್ಕಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಸ್ವಲಾತ್ ಮಜ್ಲಿಸಿಗೆ ಸಂಘಟನಾ ವಿಭಾಗದ ಅಧ್ಯಕ್ಷರಾದ ಖಲಂದರ್ ಉಸ್ತಾದ್ ನೇತೃತ್ವ ನೀಡಿದರು.
ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಬೆಳ್ಮ ಸ್ವಾಗತಿಸಿದರು. ಸೆಕ್ಟರ್ ಕಾರ್ಯದರ್ಶಿ ಸುಫೈದ್ ಕೃಷ್ಣಾಪುರ ಧನ್ಯವಾದ ಅರ್ಪಿಸಿದರು.

error: Content is protected !! Not allowed copy content from janadhvani.com