janadhvani

Kannada Online News Paper

ಒಂದೇ ಕುಟುಂಬದ ಮೂವರು ಸೇರಿ 9 ಜನ ನಿಗೂಢ ವೈರಸ್‌ ಗೆ ಬಲಿ- ಆತಂಕ

ಕೊಝಿಕ್ಕೋಡ್‌: ಕೇರಳದ ಕೊಝಿಕ್ಕೋಡ್‌ ಜಿಲ್ಲೆಯ ಪೆರಂಬಾರಾದಲ್ಲಿ ಕೇವಲ ಎರಡು ವಾರದಲ್ಲಿ ಒಂದೇ ಕುಟುಂಬದ ಮೂವರು ಸೇರಿ 9 ಜನ ನಿಗೂಢ ವೈರಸ್‌ನಿಂದ ಮೃತಪಟ್ಟಿದ್ದು, ರಾಜ್ಯದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗೆ ತರಹೇವಾರಿ ವರದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಸರಕಾರ, ”ವದಂತಿಗಳಿಗೆ ಕಿವಿಗೊಡಬೇಡಿ. ಧೈರ್ಯವಾಗಿರಿ. ಎಲ್ಲ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ,” ಎಂದು ಜನತೆಗೆ ಮನವಿ ಮಾಡಿದೆ.

ನಿಗೂಢ ವೈರಸ್‌ ತಗುಲಿ ಕಳೆದ ಎರಡು ವಾರದಿಂದ ಜ್ವರದಿಂದ ಬಳಲುತ್ತಿದ್ದ ಪೆರಂಬಾರಾದ ಒಂದೇ ಕುಟುಂಬದ ಮೊಹಮ್ಮದ್‌ ಸಾದಿಕ್‌ (26), ಮೊಹಮ್ಮದ್‌ ಸಾಲಿಯಾ (28) ಮತ್ತು ಮರಿಯುಮ್ಮಾ (50) ಕೊಝಿಕ್ಕೋಡ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು , ವೈರಸ್‌ ಪತ್ತೆ ವೈದ್ಯರಿಗೂ ಸವಾಲಾಗಿ ಪರಿಣಮಿಸಿದೆ. ಈ ಮೂವರನ್ನೂ ಉಪಚರಿಸುತ್ತಿದ್ದ ಒಬ್ಬ ದಾದಿಯೂ ಸೇರಿ ಆರು ಜನರಿಗೆ ಸೋಂಕು ತಗುಲಿದ್ದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 25 ರೋಗಿಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿದ್ದು, ಪೂರಕ ಔಷಧಗಳಿಂದ ಉಪಚರಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಪ್ರತ್ಯೇಕ ವಾರ್ಡ್‌: ಪರಿಸ್ಥಿತಿ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳ ವೈದ್ಯರ ನೆರವನ್ನೂ ಪಡೆಯಲಾಗುತ್ತಿದೆ. ಮಣಿಪಾಲ್‌ ಮತ್ತು ಅಪೋಲೊ ಆಸ್ಪತ್ರೆಯ ವೈರಾಲಜಿ ವಿಭಾಗದ ತಜ್ಞರು ಪೆರಂಬಾರಾ ಪ್ರದೇಶಕ್ಕೆ ಭೇಟಿ ಕೊಟ್ಟು ಸೋಂಕು ಪೀಡಿತರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ ಕೊಯಿಕ್ಕೋಡ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇದಕ್ಕೆಂದೇ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ ಎಂದೂ ಸಚಿವೆ ಹೇಳಿದರು.

ಕೇಂದ್ರಕ್ಕೆ ಮೊರೆ: ವೈರಸ್‌ ತಗುಲಿದವರ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು ಅವುಗಳನ್ನು ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ವೈರಾಲಜಿಗೆ ಕಳುಹಿಸಿಕೊಡಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ವರದಿ ಬರಲಿದೆ ಎಂದಿರುವ ಆರೋಗ್ಯ ಖಾತೆ ಸಚಿವೆ ಕೆ.ಕೆ.ಶೈಲಜಾ, ವೈರಸ್‌ ಪತ್ತೆ ಹಾಗೂ ಹೆಚ್ಚುವರಿ ಚಿಕಿತ್ಸೆಗೆ ತಜ್ಞರ ತಂಡವನ್ನು ಕಳುಹಿಸಿಕೊಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಇದು ಎನ್‌ಇಎಂ ವೈರಸ್‌? ಈ ನಿಗೂಢ ವೈರಸ್‌ ಬಹುಶಃ ಹೃದಯ ಸ್ನಾಯುಗಳಿಗೆ ತೀವ್ರ ಹಾನಿಯುಂಟು ಮಾಡುವ ಎನ್‌ಸಿಫಾಲಿಟಿಸ್‌-ಇನ್‌ಡ್ಯೂಸಡ್‌ ಮಯೋಕಾರ್ಡಿಟಿಸ್‌ (ಎನ್‌ಇಎಂ) ವೈರಸ್‌ ಆಗಿರಬಹುದು ಎಂಬುದು ವೈದ್ಯರ ಶಂಕೆಯಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕವೇ ಇದು ಸ್ಪಷ್ಟಗೊಳ್ಳಲಿದೆ. ಪ್ರಾಣಿ ಇಲ್ಲವೇ ಪಕ್ಷಿಗಳಿಂದ ಇದು ಹರಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವು ವರದಿಗಳ ಪ್ರಕಾರ ನಿಪಾ(ಎನ್‌ಐವಿ) ವೈರಸ್‌ ಈ ಸಾವಿನ ಹಿಂದಿರಬಹುದು ಎನ್ನಲಾಗಿದೆ. ಒಂದು ಬಗೆಯ ಬಾವಲಿಯಿಂದ (ಫ್ರೂಟ್‌ ಬ್ಯಾಟ್ಸ್‌) ಹರಡಬಹುದಾದ ಈ ವೈರಸ್‌ ಮಾರಾಂಣತಿಕ ಕಾಯಿಲೆಗಳನ್ನು ತರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲ. ಪೆರಂಬಾರದಲ್ಲಿ ಮೂವರು ಈ ಎನ್‌ಐವಿ ವೈರಸ್‌ನಿಂದಲೇ ಮೃತಪಟ್ಟಿದ್ದಾರೆಂದು ಈಗಲೇ ಖಚಿತವಾಗಿ ಹೇಳಲಾಗದು ಎನ್ನುತ್ತಾರೆ ಮಣಿಪಾಲ್‌ ಸೆಂಟರ್‌ ಫಾರ್‌ ರಿಸರ್ಚ್‌ ಸಂಸ್ಥೆಯ ವೈದ್ಯ ಡಾ. ಅರುಣ್‌ ಕುಮಾರ್‌.

error: Content is protected !! Not allowed copy content from janadhvani.com