janadhvani

Kannada Online News Paper

ಕರ್ನಾಟಕ ಮೈತ್ರಿ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆ ಭಾರೀ ಹಿನ್ನಡೆಯಾಗಲಿದೆ

ನವದೆಹಲಿ:- ಮುಖ್ಯಮಂತ್ರಿಯಾಗಿ ಮೂರು ದಿನಗಳು ಅಧಿಕಾರ ನಡೆಸಿ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಯಡಿಯೂರಪ್ಪ ಸರ್ಕಾರ ರಾಜೀನಾಮೆ ನೀಡಿರುವುದು, 2019ರ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ.ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಉತ್ತರ ಭಾರತದ ತನ್ನ ಭದ್ರತೆಯನ್ನು ದಕ್ಷಿಣಕ್ಕೂ ವಿಸ್ತರಿಸಿಕೊಳ್ಳುವ ಪ್ರಧಾನಿ ಮೋದಿ ಅವರ ಯತ್ನಕ್ಕೆ ಯಡಿಯೂರಪ್ಪನವರ ಸರ್ಕಾರದ ರಾಜೀನಾಮೆ ಧಕ್ಕೆಯಾಗಿದೆ.

2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಆದ ಈ ಸೋಲು ಸಾಮನ್ಯ ಸೋಲಲ್ಲ. ಅದಕ್ಕೂ ಮಿಗಲಾಗಿ ಇದರ ದೂರಗಾಮಿ ಪರಿಣಾಮಗಳು ಬಿಜೆಪಿ ಗೆಲುವಿನ ಓಟದ ಮೇಲೆ ಖಂಡಿತ ಪರಿಣಾಮ ಬೀರುತ್ತವೆ. ಸೋಲಿನ ಸುಳಿಗೆ ಸಿಕ್ಕಿದ್ದ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿಯ ಈ ಗೆಲುವು ಹೊಸ ಚೇತನವನ್ನು ತುಂಬಿದೆ. ಹಾಗೆಯೇ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗುವ ಯತ್ನಕ್ಕೂ ಇದು ಚಾಲನೆ ನೀಡದಂತಾಗುತ್ತದೆ. ಬುಧವಾರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭವು ವಿರೋಧ ಪಕ್ಷಗಳ ಏಕತೆಗೆ ವೇದಿಕೆಯಾಗುವ ಸಾಧ್ಯತೆಯಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ, ಅಮಿತ್ ಶಾರ ಓಟಕ್ಕೆ ಕಡಿವಾಣ ಹಾಕಲು, ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಟ್ಟುಗೂಡಬೇಕು. ಸಂಘಟಿತವಾಗಿ ಚುನಾವಣೆಯನ್ನು ಎದುರಿಸಬೇಕು ಎಂಬ ವಿರೋಧ ಪಕ್ಷಗಳ ಯತ್ನಕ್ಕೆ, ಕರ್ನಾಟಕದಲ್ಲಿಯ ಕಾಂಗ್ರೆಸ್- ಜೆಡಿಎಸ್ ಗೆಲವು ಆಶಾಭಾವನೆ ಮೂಡಿಸಿದೆ.
ಬಿಜೆಪಿ ವಿರೋಧವಾಗಿ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಒಟ್ಟಾಗಿ ಮಹಾಘಟಬಂಧನ್ ರಚಿಸಿಕೊಳ್ಳಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಾಜಿ ಮುಖ್ಯಮಂತ್ರಿ ಹಾಗೂ ಬಹುಜನ ಸಮಾಜ ವಾದಿ ಪಕ್ಷದ ನಾಯಕಿ ಮಾಯಾವತಿ ಕರೆ ನೀಡಿದ್ದಾರೆ. ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್‌‌ರೊಂದಿಗೆ ಚರ್ಚಿಸಿದ್ದಾರೆ. ಅವರಿಂದ ಸಕಾರಾತ್ಮಕ ಸ್ಪಂದನೆಯು ಸಿಕ್ಕಿದೆ. ಈ ಹಿಂದೆ ಉತ್ತರ ಪ್ರದೇಶ ವಿಧಾನಸಭಾ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಒಟ್ಟುಗೂಡಿ, ಬಿಜೆಪಿಯನ್ನು ಸೋಲಿಸಿದ್ದವು. ಇದು ಇನ್ನಷ್ಟು ರಾಜ್ಯಗಳಲ್ಲಿಯ ವಿರೋಧ ಪಕ್ಷಗಳು ಒಟ್ಟುಗೂಡಲು ಪ್ರೇರಣೆ ನೀಡಿದೆ.

error: Content is protected !! Not allowed copy content from janadhvani.com