janadhvani

Kannada Online News Paper

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸಾಧ್ಯತೆ

ಬೆಂಗಳೂರು: 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯ ಬಗ್ಗೆ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸುಳಿವು ನೀಡಿದ್ದಾರೆ.

‘ಅಧಿಕಾರದಿಂದ ಬಿಜೆಪಿಯನ್ನು ದೂರವಿಡಲು ಕೈಜೋಡಿಸುವ ಬಗ್ಗೆ ಉಭಯ ಪಕ್ಷಗಳು ‍ಪರಿಶೀಲನೆ ನಡೆಸುತ್ತಿವೆ’ ಎಂದು ಖರ್ಗೆ ತಿಳಿಸಿದರು.

‘ಕರ್ನಾಟಕದಲ್ಲಿನ ಗೆಲುವು (ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟಿದ್ದು) ಇಡೀ ದೇಶಕ್ಕೆ ಸಂದೇಶ ನೀಡಿದೆ. ಜಾತ್ಯತೀತ ಪಕ್ಷಗಳು ಕೈಜೋಡಿಸಲು ವೇದಿಕೆ ಕಲ್ಪಿಸಿದಂತಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್‌ ಜತೆಗೂಡಿ ಲೋಕಸಭಾ ಚುನಾವಣೆ ಎದುರಿಸಲು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರೂ ಉತ್ಸುಕರಾಗಿದ್ದಾರೆ. ಬುಧವಾರ ನಡೆಯುವ ಪ್ರಮಾಣ ವಚನ ಸಮಾರಂಭಕ್ಕೆ ಪ್ರಾದೇಶಿಕ ಪಕ್ಷಗಳ ಪ್ರಮುಖರಾದ ಮಾಯಾವತಿ, ಮಮತಾ ಬ್ಯಾನರ್ಜಿ, ಎನ್‌. ಚಂದ್ರಬಾಬು ನಾಯ್ಡು, ಕೆ. ಚಂದ್ರಶೇಖರ ರಾವ್‌ ಅವರಿಗೂ ಆಹ್ವಾನ ನೀಡಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಉಭಯ ಪಕ್ಷಗಳು ನಿರ್ಧರಿಸಿವೆ. ಈ ಮೂಲಕ ಮೂರೂ ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಳ್ಳುವುದು ಈ ಪಕ್ಷಗಳ ಉದ್ದೇಶ. 2019ರ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡರೆ ಗರಿಷ್ಠ ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಪಕ್ಷಗಳ ಆಲೋಚನೆ.

error: Content is protected !! Not allowed copy content from janadhvani.com